Connect with us

Bagalkot

ಒಂದೇ ರಾತ್ರಿಯಲ್ಲಿ 43 ಟನ್ ಕಬ್ಬು ಲೋಡ್ – ಯುವಕನ ಸಾಧನೆಗೆ ರೈತರ ಮೆಚ್ಚುಗೆ

Published

on

ಬಾಗಲಕೋಟೆ: ಸಾಧಿಸುವ ಛಲವೊಂದಿದ್ದರೆ ಏನುಬೇಕಾದರೂ ಸಾಧಿಸಬಹುದು ಎಂಬುದನ್ನು ಯುವ ಕಾರ್ಮಿಕರೊಬ್ಬರು ಒಂದೇ ರಾತ್ರಿಯಲ್ಲಿ ತೋರಿಸಿಕೊಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ ಯುವ ಶ್ರಮಜೀವಿ 43 ಟನ್ ಕಬ್ಬನ್ನು ಟ್ರ್ಯಾಕ್ಟರ್‍ ಗೆ ಲೋಡ್ ಮಾಡುವ ಮೂಲಕ ಸಾಧನೆ ಮಾಡಿ ಎಲ್ಲರಿಂದ ಸೈ ಎನಿಸಿಕೊಂಡಿದ್ದಾರೆ.

ಕ್ಷೇತ್ರ ಯಾವುದಾದರೇನು ಸಾಧಕನಿಗೆ ಸಾಧನೆ ಸಹಜವಾಗಿ ಪ್ರಾಪ್ತವಾಗುತ್ತದೆ ಎಂಬುದಕ್ಕೆ ಸಾಕ್ಷಿಯಂತಿರುವ ಈ ಘಟನೆ ನಡೆದಿರುವುದು ಬಾಗಲಕೋಟೆಯಲ್ಲಿ. ಕಟಾವ್ ಮಾಡಿ ಹಾಕಿದ್ದ 43 ಟನ್ ಕಬ್ಬನ್ನು ಒಂದೇ ರಾತ್ರಿಯಲ್ಲಿ ತಾನೊಬ್ಬನೇ ಟ್ರ್ಯಾಕ್ಟರ್‍ ಗೆ ಲೋಡ್ ಮಾಡಿರುವ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ 21 ವರ್ಷದ ಶ್ರೀನಿವಾಸ ನಾಯಕ ಇದೀಗ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕಬ್ಬು ಕಟಾವ್ ಮಾಡುವ ಗುಂಪಿನಲ್ಲಿ ಕೆಲಸ ಮಾಡುತ್ತಿರುವ ಶ್ರೀನಿವಾಸ್, ನಿನ್ನೆ ರಾತ್ರಿ 11.50ಕ್ಕೆ ಕಬ್ಬು ಲೋಡ್ ಆರಂಭಿಸಿ ಇಂದು ಬೆಳಗ್ಗೆ 6.20 ರವರೆಗೆ ಮೂರು ಟ್ರ್ಯಾಲಿಗಳಲ್ಲಿ ಒಟ್ಟು 43 ಟನ್ ಕಬ್ಬು ಲೋಡ್ ಮಾಡಿದ್ದಾರೆ.

ಗ್ರಾಮದ ರೈತ ಶ್ರೀನಿವಾಸ್ ಲೆಂಡಿ ಅವರ ಜಮೀನಿನಲ್ಲಿ ಕಡಿದು ಹಾಕಿದ್ದ ಕಬ್ಬನ್ನು ಶ್ರೀನಿವಾಸ್ ಹೊತ್ತುಕೊಂಡು ಟ್ರ್ಯಾಕ್ಟರ್‍ ನಲ್ಲಿ ಹಾಕಿದ್ದಾರೆ. ಈ ಹಿಂದೆ ಗ್ರಾಮದಲ್ಲಿ ಒಬ್ಬ ಕೂಲಿ ಕಾರ್ಮಿಕರೊಬ್ಬರು ಒಂದು ರಾತ್ರಿಯಲ್ಲಿ 34 ಟನ್ ಕಬ್ಬು ಲೋಡ್ ಮಾಡಿದ್ದರು. ಆ ದಾಖಲೆ ಮೀರಿಸಲು ಶ್ರೀನಿವಾಸ್ 43 ಟನ್ ಕಬ್ಬು ಲೋಡ್ ಮಾಡಿ, ಕಬ್ಬಿನ ಗ್ಯಾಂಗ್‍ನವರಿಂದ ಶಹಬ್ಬಾಶ್ ಗಿರಿ ಪಡೆದಿದ್ದಾರೆ.

ಇದೀಗ ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬು ಕಟಾವು ಆರಂಭವಾಗಿದ್ದು, ಕಾರ್ಮಿಕರು ಈ ರೀತಿಯ ಜಿದ್ದಿಗೆ ಬಿದ್ದು ಕಟಾವ್ ಮಾಡಿ, ಕಬ್ಬು ಟ್ರ್ಯಾಕ್ಟರ್‍ ಗೆ ಹೇರುವ ಸಾಧನೆ ಮಾಡಿ ಗಮನ ಸೆಳೆಯುತ್ತಿದ್ದಾರೆ. ಶ್ರೀನಿವಾಸ್ ಸಾಧನೆ ಜಿಲ್ಲೆಯ ರೈತ ಸಮೂಹದಿಂದ ಮಚ್ಚುಗೆ ವ್ಯಕ್ತವಾಗಿದೆ.

Click to comment

Leave a Reply

Your email address will not be published. Required fields are marked *