Wednesday, 16th October 2019

Recent News

ರಾಜ್ಯದಲ್ಲಿ ಸರ್ಕಾರ ಇದ್ಯಾ? ಇದೆ ಎಂದು ಒಪ್ತಿರಾ? – ಮೈತ್ರಿ ಸರ್ಕಾರದ ವಿರುದ್ಧ ಈಶ್ವರಪ್ಪ ವ್ಯಂಗ್ಯ

ಬಾಗಲಕೋಟೆ: ರಾಜ್ಯದಲ್ಲಿ ಸರ್ಕಾರ ಇದೆಯಾ, ಇದೇ ಎಂದು ನೀವು ಒಪ್ಪುತ್ತಿರಾ ಎಂದು ಪ್ರಶ್ನೆ ಮಾಡುವ ಮೂಲಕ ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ಅವರು ಮೈತ್ರಿ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಮಾತನಾಡಿದ ಈಶ್ವರಪ್ಪ, ರೋಷನ್ ಬೇಗ್, ರಾಮಲಿಂಗಾರೆಡ್ಡಿ ಏನೇನು ಹೇಳುತ್ತಿದ್ದಾರೆ ಅದನ್ನು ನಾನು ರಿಪೀಟ್ ಮಾಡೋದಿಲ್ಲ. ಕಾಂಗ್ರೆಸ್ ಜೆಡಿಎಸ್‍ನವರೇ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ನಾವು ಸರ್ಕಾರ ಬೀಳಿಸುವುದಿಲ್ಲ. ಅದು ಬಿದ್ದು ಹೋದ ಸಂದರ್ಭದಲ್ಲಿ ನಮ್ಮ ರಾಜ್ಯ ಮತ್ತು ರಾಷ್ಟ್ರ ನಾಯಕರು ಸೇರಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಮುಖಂಡರ ಹೇಳಿಕೆ ವಿಚಾರದ ಬಗ್ಗೆ ಕೇಳಿದಾಗ, ರಾಜಕಾರಣದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಾಗ ಹೀರೋಗಳು ಆಗಿರುತ್ತಾರೆ. ವಿಶ್ವಾಸ ಕಳೆದುಕೊಂಡಾಗ ವಿಲನ್ ಆಗುತ್ತಾರೆ. ರಾಜಕಾರಣದಲ್ಲಿ ಒಳ್ಳೆಯ ಸ್ಥಾನಮಾನ ಸಿಕ್ಕಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಆಗ ಮುಂದೆಯೂ ಒಳ್ಳೆಯದಾಗುತ್ತದೆ ಎಂಬುದು ನನ್ನ ಭಾವನೆ ಎನ್ನುವ ಮೂಲಕ ಸಿದ್ದರಾಮಯ್ಯ ವಿಲನ್ ರೀತಿಯಲ್ಲಿ ಬಿಂಬಿತರಾಗುತ್ತಿದ್ದಾರೆ ಎಂದು ಪರೋಕ್ಷವಾಗಿ ಹೇಳಿದರು.

ಜಿಂದಾಲ್ ಕಂಪನಿಗೆ ಜಾಗ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಜಿಂದಾಲ್‍ಗೆ ಭೂಮಿ ನೀಡುವ ಪ್ರಭಾವಿಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಈ ಬಗ್ಗೆ ನಮ್ಮ ಎಲ್ಲ ನಾಯಕರು ಸೇರಿ ಪ್ರತಿಭಟನೆ ಮಾಡುತ್ತೇವೆ. ಆದರೆ ಜಿಂದಾಲ್ ಕಂಪನಿ ಖುದ್ದಾಗಿ ಇದರಿಂದ ಹಿಂದೆ ಸರಿಯಬೇಕು. ಈ ಸರ್ಕಾರ ಎಷ್ಟು ದಿನ ಇರುತ್ತೋ ಬಿದ್ದ ಹೋಗುತ್ತೋ ಗೊತ್ತಿಲ್ಲ. ಆದ್ದರಿಂದ ಗೌರವ ಪೂರ್ವಕವಾಗಿ ಭೂಮಿ ಬಿಟ್ಟುಕೊಡಬೇಕು. ಯಾಕೆಂದರೆ ಮುಂದಿನ ಸರ್ಕಾರ ಯಾವುದೇ ಕಾರಣಕ್ಕೂ ಭೂಮಿ ಕೊಡೋದಿಲ್ಲ ಎಂದು ಎಚ್ಚರಿಸಿದರು.

ಮಾಧ್ಯಮಗಳ ಮೇಲೆ ಸಿಎಂ ಧಮ್ಕಿ ಹಾಕಿರುವ ಬಗ್ಗೆ ಕೇಳಿದಾಗ, ಮಾಧ್ಯಮದವರ ಬಗ್ಗೆ ಸಿಎಂ ಮಾತನಾಡುವುದು ಮೂರ್ಖತನ, ಮಾಧ್ಯಮಕ್ಕೆ ಧಮ್ಕಿ ಹಾಕೋದು ಸರಿಯಲ್ಲ. ಕುಮಾರಸ್ವಾಮಿಯ ಮಾಧ್ಯಮದವರ ಮೇಲೆ ಧಮ್ಕಿ ಹಾಕೋ ಧೋರಣೆ ತಪ್ಪು. ಕೂಡಲೇ ಸಿಎಂ ಮಾಧ್ಯಮ ಹಾಗೂ ಜನರ ಕ್ಷಮಾಪಣೆ ಕೇಳಬೇಕೆಂದು ಆಗ್ರಹಿಸಿದರು.

Leave a Reply

Your email address will not be published. Required fields are marked *