Wednesday, 11th December 2019

ಸಂತ್ರಸ್ತರ ಗೋಳು ಕೇಳದ ಬಾಗಲಕೋಟೆ ಜಿಲ್ಲಾಡಳಿತ

ಬಾಗಲಕೋಟೆ: ಕೃಷ್ಣಾ, ಮಲಪ್ರಭಾ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದ್ದು, ಅದರಿಂದ ಸೃಷ್ಟಿಯಾಗಿರುವ ಅವಾಂತರದಿಂದ ಜನರ ಪಾಡು ನರಕವಾಗಿಬಿಟ್ಟಿದೆ. ಜಿಲ್ಲೆಯ ಒಳಕಲ್ ದಿನ್ನಿ ಗ್ರಾಮದ ಸಂತ್ರಸ್ತರ ಗೋಳು ಕೇಳುವವರೇ ಇಲ್ಲವಾಗಿದ್ದು, ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೃಷ್ಣಾ, ಮಲಪ್ರಭಾ ನದಿಯ ಪ್ರವಾಹದಿಂದ ಮುಳುಗಡೆಯಾಗಿರುವ ಒಳಕಲ್ ದಿನ್ನಿ ಗ್ರಾಮದ ಜನರಿಗೆ ಗಂಜಿಕೇಂದ್ರದ ವ್ಯವಸ್ಥೆಯೂ ಇಲ್ಲದಾಗಿದೆ. ಪ್ರವಾಹ ಪರಿಸ್ಥಿತಿ ನಿರ್ವಹಿಸಲು ಜಿಲ್ಲಾಡಳಿತ ವಿಫಲವಾಗಿದೆ. ಹೀಗಾಗಿ ನೂರಾರು ಜನರು ಗ್ರಾಮದ ಹೊರವಲಯದ ಜಮೀನಿನೊಂದರಲ್ಲಿ ಟರ್ಪಲ್ ಗುಡಿಸಲುಗಳನ್ನು ಹಾಕಿಕೊಂಡು ಆಶ್ರಯ ಪಡೆದಿದ್ದಾರೆ. ಮನೆಗಳಿಗೆ ನೀರು ನುಗ್ಗಿದ ತಕ್ಷಣ ಗ್ರಾಮಸ್ಥರು ತಮ್ಮ ಕೈಗೆ ಸಿಕ್ಕ ವಸ್ತುಗಳನ್ನು ತೆಗೆದುಕೊಂಡು ಗ್ರಾಮದ ಹೊರವಯದಲ್ಲಿರುವ ಜಮೀನಿನಲ್ಲಿ ಟರ್ಪಾಲ್ ಹಾಕಿ ಗುಡಿಸಲಿನಲ್ಲಿ ವಾಸವಾಗಿದ್ದಾರೆ. ಕಳೆದ ನಾಲ್ಕೈದು ದಿನದಿಂದ ಜನರು ಹೀಗೆ ಜೀವನ ಸಾಗಿಸುತ್ತಿದ್ದಾರೆ. ಆದರೂ ಕೂಡ ಯಾವ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಇಲ್ಲಿಗೆ ಭೇಟಿ ಕೊಟ್ಟು ಜನರ ಸಮಸ್ಯೆ ಆಲಿಸಿಲ್ಲ. ಅವರ ನೆರವಿಗೆ ಬಂದಿಲ್ಲ.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ನಾಲ್ಕೈದು ದಿನಗಳಿಂದ ನಾವು ಇಲ್ಲಿಯೇ ಇದ್ದೇವೆ. ಯಾವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಲ್ಲಿಗೆ ಬಂದಿಲ್ಲ. ಕೆಲ ಸಾರ್ವಜನಿಕರು ನಮಗೆ ಆಹಾರ ಹಾಗೂ ಅಗತ್ಯ ವಸ್ತುಗಳನ್ನು ನೀಡಿ ಸಹಾಯ ಮಾಡಿದ್ದಾರೆ. ನಮ್ಮ ಬಳಿ ಏನೂ ಉಳಿದಿಲ್ಲ. ಪ್ರವಾಹದಲ್ಲಿ ತಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ. ನಾವು ಸಂಕಷ್ಟದಲ್ಲಿದ್ದೇವೆ. ಎಡಬಿಡದೇ ಸುರಿಯುತ್ತಿದ್ದ ಮಳೆ ಹಾಗೂ ರಾತ್ರೋರಾತ್ರಿ ಗ್ರಾಮಕ್ಕೆ ನದಿ ನೀರು ನುಗ್ಗಿ ನಾವು ಕಂಗಾಲಾಗಿದ್ದೇವು. ಯಾರೂ ನಮ್ಮ ಸಹಾಯಕ್ಕೆ ಬರಲಿಲ್ಲ. ಬಳಿಕ ಗ್ರಾಮಸ್ಥರೆಲ್ಲಾ ಸೇರಿ ಈ ಜಮೀನಿನಲ್ಲಿ ಬಂದು ಆಶ್ರಯ ಪಡೆದ್ದೇವೆ ಎಂದು ಅಳಲನ್ನು ತೋಡಿಕೊಂಡಿದ್ದಾರೆ.

ಬೇರೆಯವರಿಗೆ ಸಹಾಯ ಮಾಡಿದ ನಾವು ಇಂದು ತುತ್ತು ಕೂಳಿಗೂ ಪರದಾಡುತ್ತಿದ್ದೇವೆ. ಯಾವ ಪಕ್ಷದವರು ಕೂಡ ನಮ್ಮನ್ನು ನೋಡಲು ಬಂದಿಲ್ಲ. ರಾಜಕಾರಣಕ್ಕಾಗಿ ನಾಯಕರ ಮನವೊಲಿಸಲು ಹೋಗುತ್ತಾರೆ ಆದರೆ ಜನರ ಕಷ್ಟಕ್ಕೆ ಯಾರೂ ಬರೋದಿಲ್ಲ. ತಮ್ಮ ಸ್ವಾರ್ಥಕ್ಕಾಗಿ ಎಲ್ಲರೂ ಇದ್ದಾರೆ, ಜನರ ಗೋಳು ಕೇಳಲು ಯಾರೂ ಬರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *