Sunday, 23rd February 2020

Recent News

ನನ್ನ ಹೆಂಡ್ತಿ, ದೇವೇಗೌಡರ ಸುದ್ದಿ ಎತ್ತಬೇಡಿ ಎಂದಿದ್ದಾರೆ: ಬಚ್ಚೇಗೌಡ

ಚಿಕ್ಕಬಳ್ಳಾಪುರ: ರಾಜಕೀಯದ ಕಡು ವೈರಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವಿರುದ್ಧ ಮಾತಾಡಬೇಡಿ. ಅವರ ಸುದ್ದಿ ಎತ್ತಬೇಡಿ ಎಂದು ನನ್ನ ಹೆಂಡತಿ ಹೇಳುತ್ತಾಳೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್ ಬಚ್ಚೇಗೌಡ ವ್ಯಂಗ್ಯ ಮಾಡಿದ್ದಾರೆ.

ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಬಚ್ಚೇಗೌಡ, ದೇವೇಗೌಡರ ವಿರುದ್ಧ ಮಾತನಾಡಬೇಡಿ, ಅವರ ತಂಟೆಗೆ ಹೋಗಬೇಡಿ. ಎಲ್ಲರೂ ಈ ಬಾರಿ ನನಗೆ ಮತ ಕೊಡುತ್ತಾರೆ ಎಂದು ಹಲವರು ಹೇಳುತ್ತಾರೆ. ಅಂತೆಯೇ ನಮ್ಮ ಮನೆಯವರು ಸಹ ಅವರ ಸುದ್ದಿ ಎತ್ತಬೇಡಿ ಎಂದು ಹೇಳುತ್ತಾರೆ ಎಂದು ವ್ಯಂಗ್ಯ ಮಾಡಿದರು. ಇದನ್ನೂ ಓದಿ: 2014ರ ಸೋಲು – ಎಚ್‍ಡಿಡಿ ವಿರುದ್ಧ ಬಚ್ಚೇಗೌಡ ಮೃದು ಧೋರಣೆ?

ದೇವೇಗೌಡರು ಮಾಜಿ ಪ್ರಧಾನಿಗಳು, ಕುಮಾರಸ್ವಾಮಿ ಸಿಎಂ ಅವರು ದೊಡ್ಡವರು ಅವರ ಬಗ್ಗೆ ಮಾತನಾಡಲ್ಲ. ನೀವು ಯಾರಿಗೂ ಬೈಯಬೇಡಿ, ಜೆಡಿಎಸ್, ಸಿಪಿಎಂನವರು ಎಲ್ಲರೂ ನನಗೆ ಮತ ಕೊಡುತ್ತಾರೆ ಎಂದು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.

ಕಳೆದ ಲೋಕಸಭಾ ಚುನಾವಣೆ ವೇಳೆ ಎಚ್‍ಡಿಡಿ ವಿರುದ್ಧ ಬಿ.ಎನ್ ಬಚ್ಚೇಗೌಡ ಸಾಕಷ್ಟು ತೀವ್ರತರವಾಗಿ ವಾಗ್ದಾಳಿ ನಡೆಸಿದ್ದರು. ಹೀಗಾಗಿಯೇ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಎಚ್.ಡಿ ಕುಮಾರಸ್ವಾಮಿ ಅಂತಿಮ ದಿನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇದರಿಂದ ಒಕ್ಕಲಿಗರ ಮತ ವಿಭಜನೆಯಿಂದ ಮೋದಿ ಅಲೆ ನಡುವೆ ಬಿ.ಎನ್ ಬಚ್ಚೇಗೌಡ ಕೇವಲ 9500 ಮತಗಳ ಅಂತರದಿಂದ ಸೋಲು ಕಂಡಿದ್ದರು.

ಕಳೆದ ಬಾರಿ ಬಿ.ಎನ್ ಬಚ್ಚೇಗೌಡರ ಸೋಲಿಗೆ ಎಚ್‍ಡಿಕೆ ಹಾಗೂ ಕುಟುಂಬದ ವಿರುದ್ಧ ಮಾತನಾಡಿದ್ದೇ ಕಾರಣ ಎಂದು ಜನಸಾಮಾನ್ಯರು ಮಾತಾಡುತ್ತಿದ್ದರು. ಹೀಗಾಗಿ ಈ ಬಾರಿ ಎಚ್ಚರ ವಹಿಸಿರುವ ಬಚ್ಚೇಗೌಡ, ಎಚ್.ಡಿ.ಡಿ ವಿರುದ್ಧ ಮಾತನಾಡದಿರಲು ತೀರ್ಮಾನಿಸಿರುವುದಾಗಿ ಬಿಜೆಪಿ ಕಾರ್ಯಕರ್ತರ ಮುಂದೆ ಹೇಳಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *