Tuesday, 23rd July 2019

ಪ್ರಾಣಿಗಳು ಸೇರಿದಂತೆ ಇಡೀ ಗ್ರಾಮವೇ ಖಾಲಿ ಖಾಲಿ

ಹಾಸನ: ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಚೇನಹಳ್ಳಿ ಗ್ರಾಮದಲ್ಲಿ 5 ವರ್ಷಕ್ಕೊಮ್ಮೆ ಮನೆಗಳಿಗೆ ಬೀಗ ಜಡಿದು ಇಡೀ ಊರಿಗೆ ಊರೇ ಖಾಲಿಯಾಗುತ್ತದೆ. ಬೆಳಗ್ಗೆ 10 ಗಂಟೆ ಸುಮಾರಿಗೆ ಗ್ರಾಮ ಬಿಟ್ಟು ಹೊರಡುವ ಜನರು, ಸಂಜೆವರೆಗೂ ಹಳ್ಳಿಯ ಕಡೆ ಸುಳಿಯುವುದೇ ಇಲ್ಲ.

ಬಾಚೇನಹಳ್ಳಿ ಗ್ರಾಮದಲ್ಲಿ ಸಾವಿರಾರು ವರ್ಷಗಳಿಂದಲೂ ವಿಶಿಷ್ಟ ಆಚರಣೆಯೊಂದು ಚಾಲ್ತಿಯಲ್ಲಿದೆ. 100ಕ್ಕೂ ಹೆಚ್ಚು ಕುಟುಂಬಗಳಿರುವ ಈ ಊರಿನಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ಹೊರಬೀಡು ಅನ್ನೋ ಹೆಸರಿನಲ್ಲಿ ಇಡೀ ಗ್ರಾಮದ ಜನರು ಊರು ತೊರೆಯುತ್ತಾರೆ. ಸಂಕ್ರಾಂತಿ ನಂತರದ ಮೊದಲ ಗುರುವಾರ, ಇಡೀ ಊರಲ್ಲಿ ಯಾರೊಬ್ಬರೂ ಇರೋದಿಲ್ಲ. ವಾಸದ ಮನೆಗಳಿಗೆ ಬೀಗ ಹಾಕಿ, ಕೋಳಿ, ಇತರೆ ಸಾಕಪ್ರಾಣಿಗಳು ಓಡಾಡದಂತೆ ಒಂದೆಡೆ ಕೂಡಿ ಹಾಕಲಾಗುತ್ತದೆ.

ಮಹಿಳೆಯರು ಹಾಗೂ ಮನೆ ಮಂದಿ ಮನೆಯಿಂದ ಹೊರಡುವಾಗಲೇ ಚಿಕನ್ ಅಥವಾ ಮಟನ್ ಊಟ ತಯಾರಿಕೆಗೆ ಬೇಕಾದ ಸಾಂಬಾರ್ ಪದಾರ್ಥ ಹಾಗೂ ಪಡಿತರ ಹೊಂದಿಸಿಕೊಂಡು ಜಮೀನು ಬಳಿ ಪ್ರತ್ಯೇಕವಾಗಿ ಅಡುಗೆ ತಯಾರು ಮಾಡಲಾಗುತ್ತದೆ. ನಂತರ ಒಂದು ಸಮುದಾಯದವರು ನಿರ್ಮಿಸಿದ ಸೋಂಕು ಮಾರಿಯ ಮಣ್ಣಿನ ದೇವರ ಪ್ರತಿಮೆ ಎದುರು ಮುದ್ದೆ ಊಟ ಎಡೆ ಇಟ್ಟು ಪೂಜೆ ಸಲ್ಲಿಸಿ ನಂತರ ನೆಂಟರಿಷ್ಟರ ಜೊತೆ ಕೂಡಿ ಸಾಮೂಹಿಕವಾಗಿ ಊಟ ಮಾಡುತ್ತೇವೆ. ಬಾಣಂತಿಯರು, ನಡೆಯಲಾಗದ ವಯೋವೃದ್ಧರು ಊರ ಹೊರಗಿನ ದೇಗುಲ ಅಥವಾ ಬಸ್ ನಿಲ್ದಾಣಗಳಲ್ಲಿ ಉಳಿದುಕೊಳ್ಳುತ್ತಾರೆ. ಉಳಿದವರು ಊರಿಂದ ಅನತಿ ದೂರ ಹೋಗುತ್ತಾರೆ ಎಂದು ಸ್ಥಳೀಯ ನಿವಾಸಿ ಅಪ್ಪೇಗೌಡ ಹೇಳಿದ್ದಾರೆ.


ಏನಿದು ಆಚರಣೆ?
ಹಿಂದಿನ ಕಾಲದಲ್ಲಿ ಸೋಂಕು ಮಾರಿ ರೋಗ ಕಾಣಿಸಿಕೊಂಡು ಇಡೀ ಊರಿಗೆ ಕೇಡಾಗಿತ್ತು. ಹೀಗಾಗಿ ಈ ಆಚರಣೆ ಬಂದಿದೆ. ಇದು ಮರುಕಳಿಸದಿರಲಿ ಅಂತ ಹಿರಿಯರು ನಡೆಸಿಕೊಂಡು ಬಂದಿರುವ ಆಚರಣೆಯನ್ನು ಈಗಿನವರು ಮುಂದುವರಿಸುತ್ತಿದ್ದಾರೆ. ಸೋಂಕು ಮಾರಿಯ ಮೂರ್ತಿ ತಯಾರಿಸಿ ಅದಕ್ಕೆ ಪೂಜೆ ಸಲ್ಲಿಸಿ, ನೈವೇದ್ಯ ಇಟ್ಟ ನಂತರ ಮಾರಿಯನ್ನು ಊರ ಎಲ್ಲೆ ದಾಟಿಸಿ ಬಂದರೆ ಭವಿಷ್ಯದಲ್ಲಿ ಗ್ರಾಮದ ಜನರಿಗೆ ಒಳ್ಳೆಯದಾಗಲಿದೆ. ಜಾನುವಾರು ಕ್ಷೇಮವಾಗಿರುತ್ತವೆ ಅನ್ನೋ ನಂಬಿಕೆ ಜನರದ್ದಾಗಿದೆ ಎಂದು ದೇವರ ಪ್ರತಿಮೆ ತಯಾರಕ ದಯಾನಂದ್ ತಿಳಿಸಿದ್ದಾರೆ.

ಬೆಳಗ್ಗೆ ಮನೆ ಬಿಟ್ಟವರು ಸಂಜೆ 5 ಗಂಟೆಗೆ ಊರ ಮುಂದಿನ ದೇಗುಲ ಬಳಿ ಸೇರುತ್ತಾರೆ. ಈ ವೇಳೆ ಪ್ರಾಣಿ ಬಲಿಕೊಟ್ಟು ಒಂದು ಸುತ್ತು ಗುಂಡು ಹಾರಿಸಲಾಗುತ್ತದೆ. ಅದರ ಬೆನ್ನಲ್ಲೇ ಮನೆ ಮುಂದೆ ನೀರು ಹಾಕಿ, ದೀಪ ಹಚ್ಚಿಟ್ಟು ಮೊದಲು ಜಾನುವಾರು ಪ್ರವೇಶ ಮಾಡಿಸಿ, ನಂತರ ಜನರು ಮನೆ ಸೇರುತ್ತಾರೆ ಎಂದು ಗ್ರಾಮದ ಮಹಿಳೆ ಪದ್ಮಾ ತಿಳಿಸಿದ್ದಾರೆ.

ಗ್ರಾಮದಲ್ಲಿ ಯಾರೊಬ್ಬರೂ ಇಲ್ಲದೇ ಇದ್ದಾಗ, ಹೊರಗಿನವರೂ ಊರು ಪ್ರವೇಶ ಮಾಡುವಂತಿಲ್ಲ. ಇದಕ್ಕಾಗಿ ಹೆಬ್ಬಾಗಿಲಲ್ಲಿ ವ್ಯಕ್ತಿಯೊಬ್ಬರು ಕಾವಲಿರುತ್ತಾರೆ. ಆಧುನೀಕತೆ ಎಷ್ಟೇ ಬೆಳೆದರೂ, ಗ್ರಾಮೀಣ ಜನರು ತಾವು ನಂಬಿಕೊಂಡು ಬಂದಿರುವ, ರೂಢಿ, ಆಚರಣೆಗಳನ್ನು ಎಂದೂ ಕೂಡ ಬಿಡರು ಎಂಬುದಕ್ಕೆ ಈ ಹೊರಬೀಡು ಆಚರಣೆ ಸಾಕ್ಷಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *