Connect with us

Districts

ಬಿಜೆಪಿ ಭೀಷ್ಮನಿಗೆ ಬಿಗ್‌ ರಿಲೀಫ್‌ – ಅಡ್ವಾಣಿ ಖುಲಾಸೆಯಾಗಿದ್ದು ಹೇಗೆ? ಕೋರ್ಟ್‌ ಹೇಳಿದ್ದು ಏನು?

Published

on

ಲಕ್ನೋ: ಬಿಜೆಪಿ ಭೀಷ್ಮ ಮಾಜಿ ಉಪ ಪ್ರಧಾನಿ ಎಲ್‌ಕೆ ಅಡ್ವಾಣಿ ಅವರಿಗೆ ಬಿಗ್‌ ರಿಲೀಫ್‌ ಸಿಕ್ಕಿದ್ದು ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಖಲಾಸೆಯಾಗಿದ್ದಾರೆ.

28ವರ್ಷಗಳ ಹಳೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯ ಅಂತಿಮ ತೀರ್ಪಿನಲ್ಲಿ ಇದು ಪೂರ್ವನಿಯೋಜಿತ ಕೃತ್ಯ ಅಲ್ಲ. ಇದೊಂದು ಆಕಸ್ಮಿಕ ಘಟನೆ ಎಂದು ಅಭಿಪ್ರಾಯ ಪಟ್ಟ ಸಿಬಿಐ ವಿಶೇಷ ಕೋರ್ಟ್ ಎಲ್ಲ 32 ಆರೋಪಿಗಳನ್ನು ಖುಲಾಸೆಗೊಳಿಸಿದೆ.

ನ್ಯಾ.ಸುರೇಂದ್ರ ಕುಮಾರ್ ಯಾದವ್‌ ಅವರು 2,300 ಪುಟಗಳು ಇರುವ ತೀರ್ಪನ್ನು ಬರೆದಿದ್ದಾರೆ. ಈ ತೀರ್ಪಿನಿಂದಾಗಿ ಎಲ್‌ಕೆ ಅಡ್ವಾಣಿ ಅವರಿಗಿದ್ದ ಎಲ್ಲ ಕಂಟಕ ಈಗ ದೂರವಾಗಿದೆ.

ಈ ಆರೋಪಿಗಳು ಮಸೀದಿಯನ್ನು ಧ್ವಂಸಗೊಳಿಸಲು ಕರ ಸೇವಕರಿಗೆ ಪ್ರಚೋದನೆ ನೀಡಿದ್ದರು ಎಂದು ಸಿಬಿಐ ವಾದಿಸಿದ್ದರೆ ಆರೋಪಿಗಳು ತಮ್ಮ ವಿರುದ್ಧ ಯಾವುದೇ ಸಾಕ್ಷ್ಯಗಳು ಇಲ್ಲ. ಕಾಂಗ್ರೆಸ್‌ ಸರ್ಕಾರ ಉದ್ದೇಶಪೂರ್ವಕವಾಗಿ ನಮ್ಮನ್ನು ಸಿಕ್ಕಿ ಹಾಕಿಸಲು ರೂಪಿಸಿದ ರಾಜಕೀಯ ಸಂಚು ಎಂದು ವಾದಿಸಿದ್ದರು.

ಅಂದಿನ ಉತ್ತರ ಪ್ರದೇಶ ಸರ್ಕಾರ ಬಿಜೆಪಿ ನಾಯಕರು ಮತ್ತು ಕರ ಸೇವಕರ ವಿರುದ್ಧ ಐಪಿಸಿ ಸೆಕ್ಷನ್ 120, 153, 295,149, 395ರ ಅಡಿ ಪ್ರಕರಣ ದಾಖಲಿಸಿ ತನಿಖೆಗೆ ಆದೇಶಿಸಿತ್ತು.

ಖುಲಾಸೆಗೆ ಕಾರಣ ಏನು?
ಆರೋಪಿಗಳು ಯಾರು ಬಾಬ್ರಿ ಮಸೀದಿಯನ್ನು ಧ್ವಂಸ ಮಾಡುವ ಉದ್ದೇಶವನ್ನು ಹೊಂದಿರಲಿಲ್ಲ. ಇದೊಂದು ಆಕಸ್ಮಿಕ ಘಟನೆಯಾಗಿದೆ. ಅಶೋಕ್‌ ಸಿಂಘಾಲ್‌ ಮತ್ತು ಇತರ ಸಂಘ ಪರಿವಾರದ ನಾಯಕರು ಒಳಗಡೆಯಿಂದ ಮಸೀದಿ ರಕ್ಷಣೆಗೆ ಮುಂದಾಗಿದ್ದರು. ಈಗ ನೀಡಿರುವ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳ ಮೇಲೆ ಹೊರಿಸಲಾಗಿರುವ ಆರೋಪಗಳನ್ನು ಸಾಬೀತು ಪಡಿಸಲು ಸಾಧ್ಯವಿಲ್ಲ.

ಐಪಿಸಿ ಸೆಕ್ಷನ್‌ 120 ಬಿ(ಒಳ ಸಂಚು) ಅಡಿ ಪ್ರಕರಣ ದಾಖಲಾಗಿದೆ. ಆದರೆ ಆರೋಪಿಗಳು ಪೂರ್ವಭಾವಿಯಾಗಿ ಒಟ್ಟಿಗೆ ಕುಳಿತುಕೊಂಡು ಒಳಸಂಚು ಮಾಡಿ ಈ ಕೃತ್ಯ ಎಸಗಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳನ್ನು ನೀಡಿಲ್ಲ.

ಸೆಕ್ಷನ್ 153 ಬಿ (ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತರುವ ಹೇಳಿಕೆ) ಆರೋಪವನ್ನು ಒಪ್ಪಿಕೊಳ್ಳಲು ಬರುವುದಿಲ್ಲ. ವಿಚಾರಣೆ ವೇಳೆ ಕೋರ್ಟ್‌ಗೆ ಸಲ್ಲಿರುವ ವಿಡಿಯೋ ತಿರುಚಲಾಗಿದೆ. ಈ ವಿಡಿಯೋಗೆ ಸಂಬಂಧಿಸಿದ ನೆಗೆಟಿವ್‌ ಸಲ್ಲಿಸುವಂತೆ ಕೋರ್ಟ್‌ ಕೇಳಿತ್ತು. ಆದರೆ ತನಿಖಾ ತಂಡ ನೆಗೆಟಿವ್‌ ನೀಡಿಲ್ಲ.

ಸೆಕ್ಷನ್‌ 295(ಯಾವುದೇ ವರ್ಗದವರ ಮತಕ್ಕೆ ಅವಮಾನ ಮಾಡುವ ಉದ್ದೇಶದಿಂದ ಪೂಜಾ ಸ್ಥಾನಕ್ಕೆ ಧಕ್ಕೆ ಉಂಟು ಮಾಡುವುದು ಅಥವಾ ಅಪವಿತ್ರಗೊಳಿಸುವುದು) ಅಡಿಯಲ್ಲಿ ಆರೋಪ ಮಾಡಲಾಗಿದೆ. ಆದರೆ ಈ ಜಾಗದಲ್ಲಿ ಮುಸ್ಲಿಮರು ಹಲವು ವರ್ಷಗಳಿಂದ ನಮಾಜ್‌ ಮಾಡುತ್ತಿರಲಿಲ್ಲ. ಪ್ರಾರ್ಥನೆ ಮಾಡದ ಕಾರಣ ಈ ಸ್ಥಳ ಅಪವಿತ್ರಗೊಂಡಿಲ್ಲ.

ಸೆಕ್ಷನ್ 149( ಒಂದೇ ಉದ್ದೇಶಕ್ಕಾಗಿ ಅಕ್ರಮ ಗುಂಪು ಸೇರುವುದು) ಅಡಿಯ ಮಾಡಲಾಗಿರುವ ಆರೋಪ ಒಪ್ಪಲು ಬರುವುದಿಲ್ಲ. ಈ ಘಟನೆಯ ನಡೆದ ಸ್ಥಳದಲ್ಲಿ ಸರ್ಕಾರ ಸೆಕ್ಷನ್‌ 144 ಹಾಕಿರಲಿಲ್ಲ. ಹೀಗಾಗಿ ಗುಂಪು ಸೇರುವುದು ಅಕ್ರಮವಾಗುದಿಲ್ಲ. ಸಭೆ ನಡೆಸುವುದು ಕಾನೂನುಬಾಹಿರವಾಗುವುದಿಲ್ಲ.

ಆರೋಪಿಗಳ ದರೋಡೆ ಮಾಡಿದ್ದಕ್ಕೆ ಸೆಕ್ಷನ್‌ 395ರ ಅಡಿ ಕೇಸ್‌ ಹಾಕಲಾಗಿದೆ. ಆರೋಪಿಗಳು ದರೋಡೆ ಮಾಡಿ ಸ್ಥಳದಿಂದ ಕಲಾಕೃತಿಗಳೊಂದಿಗೆ ಓಡಿ ಹೋಗುವುದನ್ನು ಯಾರು ನೋಡಿಲ್ಲ. ಈ ಕಾರಣಕ್ಕೆ ಈ ಆರೋಪವನ್ನು ಒಪ್ಪಲು ಬರುವುದಿಲ್ಲ ಎಂದು ಅಭಿಪ್ರಾಯಪಟ್ಟ ಕೋರ್ಟ್‌ ಎಲ್ಲ 32 ಆರೋಪಿಗಳನ್ನು ಖುಲಾಸೆಗೊಳಿಸಿದೆ.

ಏನಿದು ಪ್ರಕರಣ?
1992 ಡಿಸೆಂಬರ್‌ 6ರಂದು ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ 351 ಸಾಕ್ಷಿಗಳನ್ನು ಹಾಗೂ 600 ದಾಖಲೆ ಪ್ರತಿಗಳನ್ನು ವಿಶೇಷ ನ್ಯಾಯಾಲಯಕ್ಕೆ ನೀಡಿದೆ. ಆರಂಭಿಕವಾಗಿ 48 ಮಂದಿಯನ್ನು ಆರೋಪಿಗಳೆಂದು ಸಿಬಿಐ ಚಾರ್ಜ್‌ಶೀಟ್‌ ಸಲ್ಲಿಸಿತ್ತು. ಆದರೆ ಮೂರು ದಶಕಗಳಿಂದ ವಿಚಾರಣೆ ನಡೆಯುತ್ತಿದ್ದ ಕಾರಣ 48 ಜನ ಆರೋಪಿಗಳ ಪೈಕಿ 16 ಮಂದಿ ಈಗಾಗಲೇ ಸಾವನ್ನಪ್ಪಿದ್ದು, ಉಳಿದ 32 ಆರೋಪಿಗಳ ವಿರುದ್ಧ ವಿಚಾರಣೆ ನಡೆಯುತ್ತಿತ್ತು.

ಖಲಾಸೆಯಾದ 32 ಮಂದಿ ಯಾರು?
ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಸುಧೀರ್ ಕಕ್ಕರ್, ಸತೀಶ್ ಪ್ರಧಾನ್, ರಾಮ್ ಚಂದ್ರ ಖತ್ರಿ, ಸಂತೋಷ್ ದುಬೆ, ಓಂ ಪ್ರಕಾಶ್ ಪಾಂಡೆ, ಕಲ್ಯಾಣ್ ಸಿಂಗ್, ಉಮಾ ಭಾರತಿ, ರಾಮ್ ವಿಲಾಸ್ ವೇದಾಂತಿ, ವಿನಯ್ ಕಟಿಯಾರ್, ಪ್ರಕಾಶ್ ಶರ್ನಾ, ಗಾಂಧಿ ಸಿಂಗ್ ಕಮಲೇಶ್ ತ್ರಿಪಾಠಿ, ಬ್ರಿಜ್ ಭೂಷಣ್ ಸಿಂಗ್, ರಾಮ್ಜಿ ಗುಪ್ತಾ, ಮಹಂತ್ ನೃತ್ಯ ಗೋಪಾಲ್ ದಾಸ್, ಚಂಪತ್ ರಾಯ್, ಸಾಕ್ಷಿ ಮಹಾರಾಜ್, ವಿನಯ್ ಕುಮಾರ್ ರೈ, ನವೀನ್ ಭಾಯ್ ಶುಕ್ಲಾ, ಧರ್ಮದಾಸ್, ಜೈ ಭಗವಾನ್ ಗೋಯೆಲ್, ಅಮರನಾಥ್ ಗೋಯೆಲ್, ಸಾಧ್ವಿ ರಿತಂಬರ, ಪವನ್‌ ಪಾಂಡೆ, ವಿಜಯ್‌ ಬಹದ್ದೂರ್‌ ಸಿಂಗ್‌, ಆರ್‌ಎಂ ಶ್ರೀವತ್ಸ, ಧರ್ಮೇಂದ್ರ ಸಿಂಗ್ ಗುಜ್ಜರ್.

Click to comment

Leave a Reply

Your email address will not be published. Required fields are marked *