Recent News

ನಮ್ಮನ್ನು ಯಾವ ಶಾಸಕರು ಸಂಪರ್ಕಿಸಿಲ್ಲ – ರಮೇಶ್ ಜಾರಕಿಹೊಳಿ ಪತ್ರಕ್ಕೆ ಮಹತ್ವ ಇಲ್ಲ: ಬಿಎಸ್‍ವೈ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಧ್ಯಮಗಳಿಂದ ಮಾಹಿತಿ ಪಡೆಯುತ್ತಿದ್ದೇನೆ. ಆದರೆ ರಾಜೀನಾಮೆ ನೀಡಿರುವ ಶಾಸಕರು ನಮ್ಮನ್ನು ಸಂಪರ್ಕ ಮಾಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳು ಯಾವ ರೀತಿ ಮಾಹಿತಿ ಪಡೆಯಲು ಕಾಯುತ್ತಿದ್ದರೋ ಅದೇ ರೀತಿ ನಾನು ಇದ್ದೇನೆ. ಆದರೆ ನನ್ನನ್ನು ಯಾವುದೇ ಶಾಸಕರು ಸಂಪರ್ಕ ಮಾಡಿಲ್ಲ. ನಾವು ಕೂಡ ಯಾವುದೇ ಶಾಸಕರನ್ನು ಸಂಪರ್ಕ ಮಾಡಿಲ್ಲ. ಅವರ ಶಾಸಕರು ಸ್ವತಂತ್ರವಾಗಿ ನಿರ್ಧಾರ ಕೈಗೊಂಡಿದ್ದಾರೆ. ಅದು ಅವರ ತೀರ್ಮಾನಕ್ಕೆ ಬಿಟ್ಟ ವಿಚಾರ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಬಿಎಸ್‍ವೈ, ರಮೇಶ್ ಜಾರಕಿಹಹೊಳಿ ರಾಜೀನಾಮೆ ಸುದ್ದಿಯನ್ನು ನೋಡಿದ್ದೇನೆ. ಸ್ಪೀಕರ್ ಅವರಿಗೆ ಪತ್ರ ಬರೆದಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಅವರ ಲೆಟರ್‍ಗೆ ಏನು ಮಹತ್ವ ಇಲ್ಲ ಎಂದರು.

ದಿನೇಶ್ ಗುಂಡೂರಾವ್ ಅವರು ಬಿಜೆಪಿ ಶಾಸಕರನ್ನು ಸೆಳೆಯುವ ಹೇಳಿಕೆ ನೀಡಿದ್ದಾರೆ. ಈ ಕುರಿತು ಶಾಸಕರನ್ನು ಸೆಳೆಯಲು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ. ಪಾಪ ಅವರ ಪ್ರಯತ್ನವನ್ನು ಅವರು ಮುಂದುವರಿಸಲಿ. ಏಕೆಂದರೆ ಅವರು ಶಾಸಕರನ್ನು ಸೆಳೆಯಲೇ ಬೇಕಾದ ಪರಿಸ್ಥಿತಿಯಲ್ಲಿ ಇದ್ದಾರೆ ಎಂದು ವ್ಯಂಗ್ಯವಾಡಿದರು.

ಇತ್ತ ಶಾಸಕರ ರಾಜೀನಾಮೆಯಲ್ಲಿ ಬಂಡಾಯ ನಾಯಕರ ಮನವೊಲಿಕೆಗೆ ಮುಂದಾಗಿರುವ ಕಾಂಗ್ರೆಸ್ ನಾಯಕರು ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ಸಚಿವ ಡಿಕೆ ಶಿವಕುಮಾರ್, ಡಿಸಿಎಂ ಪರಮೇಶ್ವರ್ ಅವರು ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಇತ್ತ ದೆಹಲಿಯಿಂದ ಹೈಕಮಾಂಡ್ ಕೂಡ ಶಾಸಕರ ರಾಜೀನಾಮೆ ಕುರಿತು ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರಿಂದ ವರದಿಯನ್ನು ಕೇಳಿದೆ. ಇದರ ಬೆನ್ನಲ್ಲೇ ಮಾಜಿ ಸಂಸದರಾದ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಕೆ.ಸಿ ವೇಣುಗೋಪಾಲ್ ಅವರು ಮುಂದಿನ ಕಾರ್ಯ ತಂತ್ರಗಳ ಬಗ್ಗೆ ಒಂದು ಗಂಟೆಗೂ ಅಧಿಕ ಕಾಲ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *