Sunday, 19th May 2019

ಸಮ್ಮಿಶ್ರ ಸರ್ಕಾರ ಹಣ, ಹೆಂಡ, ತೋಳುಬಲದ ಜೊತೆ ಜಾತಿಯ ವಿಷಬೀಜ ಬಿತ್ತುತ್ತಿದೆ: ಬಿಎಸ್‍ವೈ

ಬಾಗಲಕೋಟೆ: ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವು ತಮ್ಮ ಹಣಬಲ, ಹೆಂಡತಿ ಬಲ, ತೋಳಬಲದ ಜೊತೆಗೆ  ಜಾತಿಯ ವಿಷಬೀಜವನ್ನು ಬಿತ್ತುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.

ಜಮಖಂಡಿ ಕ್ಷೇತ್ರದಲ್ಲಿ ಹುನ್ನೂರು ಗ್ರಾಮದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಭಾಷಣದ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿನ ಈ ಉಪ ಚುನಾವಣೆಯಲ್ಲಿ ಸರ್ಕಾರಕ್ಕೆ ಬುದ್ಧಿ ಕಲಿಸಲು ಬಿಜೆಪಿಯನ್ನು ಗೆಲ್ಲಿಸಬೇಕು. ನಾನು ಈ ಮೊದಲು ನೇಕಾರರ ಸಾಲಮನ್ನಾ ಮಾಡಲು ತೀರ್ಮಾನ ಮಾಡಿದ್ದೆ, ಒಂದು ವಾರ ನಾನು ಸಿಎಂ ಆಗಿದ್ದರೆ ಸಾಲಮನ್ನಾ ಮಾಡುತ್ತಿದ್ದೆ. ಆದರೆ ಒಂದೇ ದಿನದಲ್ಲಿ ಅಧಿಕಾರವನ್ನು ಕಳೆದುಕೊಂಡಿದ್ದೇನೆ ಎಂದು ಹೇಳಿದರು.

ಸಿಎಂ ಕುಮಾರಸ್ವಾಮಿ ರೈತರ ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾಗೆ ಪ್ರಧಾನಿ ನರೇಂದ್ರ ಮೋದಿ ಅಡ್ಡಿಪಡಿಸುತ್ತಿದ್ದಾರೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಎಲುಬಿಲ್ಲದ ನಾಲಿಗೆ ಅಂತ ಏನೇನೋ ಮಾತನಾಡುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಗೆ ಕುಮಾರಸ್ವಾಮಿ ಕೊಡುಗೆ ಏನು ಎನ್ನುವುದನ್ನು ಬಂದು ಹೇಳಬೇಕು. ಅಲ್ಪಸಂಖ್ಯಾತ ಮಹಿಳೆಯರಿಗೂ ಸಹ ದ್ರೋಹ ಮಾಡಿದ್ದಾರೆ. ಇದೂವರೆಗೂ ಭಾಗ್ಯಲಕ್ಷ್ಮೀ ಬಾಂಡ್ ಸಹ ಕೊಟ್ಟಿಲ್ಲ ಎಂದು ಕಿಡಿಕಾರಿದರು.

ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ಮಾತನಾಡಿದ ಅವರು, ದೇವೇಗೌಡರು ಹಾಗೂ ಸಿದ್ದರಾಮಯ್ಯನವರ ಅಪ್ಪುಗೆ ದೃತರಾಷ್ಟ್ರರ ಅಪ್ಪುಗೆಯಾಗಿದೆ. ಸಿದ್ದರಾಮಯ್ಯ ಮಾತಿಗೆ ಕುರುಬ ಸಮಾಜ ಮರುಳಾಗಬೇಡಿ. ಕುಮಾರಸ್ವಾಮಿ, ದೇವೇಗೌಡರು ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ರಾಮಾಯಣ ಬರೆದಂತೆ ವಾಲ್ಮೀಕಿ ಸಮುದಾಯದ ಶ್ರೀರಾಮುಲುಗೆ ಸಿದ್ದರಾಮಯ್ಯ 420 ಎಂದು ಹೇಳುವ ಮೂಲಕ ಇಡೀ ವಾಲ್ಮೀಕಿ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ಮೊದಲು ಈ ಬಗ್ಗೆ ಕ್ಷಮೆಯಾಚಿಸಲಿ ಎಂದು ತಮ್ಮ ಆಕ್ರೋಶ ಹೊರಹಾಕಿದರು.

ಶ್ರೀರಾಮುಲು ಅಲ್ಲ, ಮೊದಲು ನಿಮ್ಮ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಎಷ್ಟು ಪ್ರಶ್ನೆ ಕೇಳಿದ್ದಾರೆ. ಕಾಂಗ್ರೆಸ್‍ನಲ್ಲಿ ಏನಾಗುತ್ತಿದೆ ಎಂಬುವುದು ಗೊತ್ತಿದೆಯಾ? ನೆನಪಿರಲಿ ನೀವೆಲ್ಲಾ ತಬ್ಬಲಿ ಆಗ್ತಾ ಇದ್ದೀರಾ. ಉತ್ತರ ಕರ್ನಾಟಕದವರು ವೋಟು ಹಾಕುವಾಗ ನಾನು ನೆನಪು ಇರಲಿ ಅಂತ ಕುಮಾರಸ್ವಾಮಿ ಕೇಳಿದ್ದರು. ಈಗ ಜಮಖಂಡಿ ಉಪ ಚುನಾವಣೆಯಲ್ಲಿ ನೀವು ನೆನಪಿಗೆ ಬರಲಿ ಅಂತ ನೀವು ಮಾಡಿ ತೋರಿಸಬೇಕು. ಜಮಖಂಡಿ ಜನರು ಶ್ರೀಕಾಂತ್ ಕುಲಕರ್ಣಿಯವರನ್ನು 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *