Monday, 16th December 2019

ಅಯೋಧ್ಯೆ ಐತಿಹಾಸಿಕ ತೀರ್ಪು – ನಾಲ್ವರು ನ್ಯಾಯಾಧೀಶರಿಗೆ ಸಿಜೆಐ ಡಿನ್ನರ್

ನವದೆಹಲಿ: ಅಯೋಧ್ಯ ಪ್ರಕರಣದ ವಿಚಾರಣೆ ನಡೆಸಿ ಐತಿಹಾಸಿಕ ತೀರ್ಪ ಬರಲು ಕಾರಣರಾದ ಸಂವಿಧಾನ ಪೀಠದ ಎಲ್ಲ ನ್ಯಾಯಾಧೀಶರಿಗೆ ಮುಖ್ಯ ನ್ಯಾ. ರಂಜನ್ ಗೊಗೋಯ್ ರಾತ್ರಿ ಔತಣಕೂಟ ಆಯೋಜಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿಗಳ ಜೊತೆ ನ್ಯಾಯಮೂರ್ತಿಗಳಾದ ಎಸ್ ಎ ಬೋಬ್ಡೆ, ಡಿವೈ ಚಂದ್ರಚೂಡ್, ಅಶೋಕ್ ಭೂಷಣ್ ಹಾಗೂ ಅಬ್ದುಲ್ ನಝೀರ್ ಸತತ 40 ದಿನಗಳ ಕಾಲ ವಿಚಾರಣೆ ನಡೆಸಿ ಶನಿವಾರ ಬೆಳಗ್ಗೆ 10:30ಕ್ಕೆ ತೀರ್ಪು ಪ್ರಕಟಿಸಿದರು.

ತೀರ್ಪು ಪ್ರಕಟಿಸಿದ ಬೆನ್ನಲ್ಲೇ ಇಂದು ರಾತ್ರಿ ತಾಜ್ ಮನ್ ಸಿಂಗ್ ಹೋಟೆಲಿನಲ್ಲಿ ಔತಣಕೂಟ ಆಯೋಜಿಸಿದ್ದಾರೆ ಎಂದು ಮಾಧ್ಯಮವೊಂದು ಸುದ್ದಿ ಪ್ರಕಟಿಸಿದೆ.

ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ಆಗಸ್ಟ್ 6ರಿಂದ 40 ದಿನಗಳ ಕಾಲ ನಿತ್ಯ ವಿಚಾರಣೆ ನಡೆಸಿದ ಪೀಠ, ಅಕ್ಟೋಬರ್ 17ರಂದು ತೀರ್ಪು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸುವ ಮೂಲಕ ದಶಕಗಳ ವಿವಾದಕ್ಕೆ ತೆರೆ ಎಳೆದಿದೆ.

ಸುಪ್ರೀಂ ತೀರ್ಪಿನ ಮುಖ್ಯಾಂಶಗಳು:
ರಾಮ ಜನಿಸಿದ್ದು ಅಯೋಧ್ಯೆಯಲ್ಲೇ ಅನ್ನೋ ನಂಬಿಕೆ ಇದ್ದು ವಿವಾದಿತ 2.77 ಎಕ್ರೆ ರಾಮಲಲ್ಲಾಗೆ ಸೇರಿದ್ದಾಗಿದೆ. ಮಂದಿರ ನಿರ್ಮಾಣಕ್ಕೆ ನಿಯಮ ರೂಪಿಸಬೇಕು. 3 ತಿಂಗಳಲ್ಲಿ ಟ್ರಸ್ಟ್ ಮೂಲಕವೇ ಕೇಂದ್ರ ಸರ್ಕಾರವೇ ರಾಮಮಂದಿರದ ನಿರ್ಮಿಸಬೇಕು.

ಮಸೀದಿಯನ್ನು ಕೆಡವಿದ್ದು ಕಾನೂನು ಉಲ್ಲಂಘನೆಯಾಗಿದೆ. ಸುನ್ನಿ ವಕ್ಫ್ ಬೋರ್ಡಿಗೆ ಅಯೋಧ್ಯೆಯಲ್ಲೇ 5 ಎಕ್ರೆ ಪರ್ಯಾಯ ಭೂಮಿಯನ್ನು ನೀಡಬೇಕು. ವಿಶೇಷಾಧಿಕಾರ ಬಳಸಿ ನೀಡುವ ಪರ್ಯಾಯ ಭೂಮಿ 3 ತಿಂಗಳಲ್ಲಿ ನಿರ್ಧರಿಸಬೇಕು.

ಯಾತ್ರಿಗಳ ಅಭಿಪ್ರಾಯ, ಪುರಾತತ್ವ ಸಾಕ್ಷ್ಯ ಹಿಂದೂಗಳ ಪರವಾಗಿದೆ. ಮಸೀದಿಯ ಒಳಭಾಗದಲ್ಲಿ ಹಿಂದೂಗಳ ಪೂಜೆ ನಡೆಯುತಿತ್ತು. ಬ್ರಿಟಿಷರಿಂದಾಗಿ ಹಿಂದೂಗಳಿಗೆ ಪೂಜೆ ಕೈತಪ್ಪಿತ್ತು. 1856-1857ರವರೆಗೆ ನಮಾಜ್ ಬಗ್ಗೆ ದಾಖಲೆ ಇಲ್ಲ.

ಬಾಬ್ರಿ ಮಸೀದಿ ಭೂಮಿ ಮಾಲೀಕತ್ವ ಶಿಯಾ ವಕ್ಫ್ ಬೋರ್ಡಿಗೆ ಒಳಪಟ್ಟಿದ್ದಲ್ಲ ಮತ್ತು ಹಕ್ಕಿಲ್ಲ. ಬಾಬರ್ ಕಮಾಂಡರ್ ಮೀರ್ ಬಾಕಿ ಬಾಬ್ರಿ ಮಸೀದಿ ನಿರ್ಮಿಸಿದ್ದಾನೆ. ಜನರ ಧಾರ್ಮಿಕ ನಂಬಿಕೆಗಳನ್ನು ಗೌರವಿಸ್ತೇವೆ. ಪೂಜೆ ಮಾಡುವವರ ಹಕ್ಕನ್ನು ಮಾನ್ಯ ಮಾಡಿದ್ದೇವೆ.

ಮಸೀದಿಯ ಒಳಭಾಗದ ಬಗ್ಗೆಯೂ ವಿವಾದವಿದೆ. ಭೂ ಮಾಲೀಕತ್ವ ನಂಬಿಕೆ ಮೇಲೆ ಆಗುವುದಿಲ್ಲ. ಬಾಬ್ರಿ ಮಸೀದಿ ಧ್ವಂಸ ಮಾಡಿದ್ದು ಪ್ರಾರ್ಥನೆ ಹಕ್ಕಿನ ಉಲ್ಲಂಘನೆ. ಅಲಹಾಬಾದ್ ಕೋರ್ಟ್ ಮೂವರು ಅರ್ಜಿದಾರರಿಗೆ ಸಮಾನವಾಗಿ ಮೂರು ಭಾಗವಾಗಿ ಹಂಚಿಕೆ ಮಾಡಿ ತೀರ್ಪು ನೀಡಿದ್ದು ತಪ್ಪು. ಸಂವಿಧಾನದ ಮುಂದೆ ಎಲ್ಲಾ ಧರ್ಮಗಳೂ ಒಂದೇ. ಜಡ್ಜ್ ಗಳಿಗೆ ಎಲ್ಲಾ ಧರ್ಮಗಳು ಒಂದೇ. ನಿರ್ಮೋಹಿ ಅಖಾಡದ ಅರ್ಜಿಯನ್ನು ನಾವು ಪರಿಗಣಿಸುವುದಿಲ್ಲ. ಆದರೆ ಕೇಂದ್ರ ಸರ್ಕಾರ ದೇವಾಲಯ ನಿರ್ಮಾಣ ಮಾಡುವ ಟ್ರಸ್ಟ್ ನಲ್ಲಿ ನಿರ್ಮೋಹಿ ಅಖಾಡಕ್ಕೆ ಪ್ರತಿನಿಧ್ಯ ನೀಡಬೇಕು.

Leave a Reply

Your email address will not be published. Required fields are marked *