Recent News

ಅಯೋಧ್ಯೆಯಲ್ಲಿ ಸರ್ಪಗಾವಲು – ಇಂಟರ್‌ನೆಟ್ ಸ್ಥಗಿತ, 8 ತಾತ್ಕಾಲಿಕ ಜೈಲು ಸ್ಥಾಪನೆ

– ಉತ್ತರಪ್ರದೇಶಲ್ಲಿ ಸೋಮವಾರದವರೆಗೆ ಶಾಲಾ ಕಾಲೇಜುಗಳಿಗೆ ರಜೆ
– 4 ಸಾವಿರ ಯೋಧರ ಅರೆಸೇನಾ ಪಡೆ ನಿಯೋಜನೆ

ಲಕ್ನೋ: ಇಂದು ಅಯೋಧ್ಯೆ ಪ್ರಕರಣದ ಸಂಬಂಧ ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ಮುಗಿದು ತೀರ್ಪು ನಿಗದಿ ಆದ ಬಳಿಕ ಅಯೋಧ್ಯೆಯಲ್ಲಿ ಕಂಡುಕೇಳರಿಯದ ಕಟ್ಟೆಚ್ಚರ ವಹಿಸಲಾಗಿದೆ. ಉತ್ತರಪ್ರದೇಶದ್ಯಾಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, 4 ಸಾವಿರ ಅರೆಸೇನಾ ಪಡೆ ಯೋಧರನ್ನ ನಿಯೋಜಿಸಲಾಗಿದೆ.

ತೀರ್ಪು ಹೊರಬರುವ ಮುನ್ನವೇ ಶುಕ್ರವಾರ ಅಚ್ಚರಿಯ ರೀತಿಯಲ್ಲಿ ಸಿಜೆಐ ರಂಜನ್ ಗೋಗೋಯ್, ನ್ಯಾ. ಎಸ್ ಎ ಬೋಬ್ಡೆ, ನ್ಯಾ. ಅಶೋಕ್ ಭೂಷಣ್ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಇಲಾಖೆ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದು, ಕೈಗೊಂಡಿರುವ ಮುಂಜಾಗ್ರತ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.

ಅಯೋಧ್ಯೆಯಲ್ಲಿ ಸರ್ಪಗಾವಲು:

ಅಯೋಧ್ಯೆಯಲ್ಲಿ ಬಹುಹಂತಗಳ ರಕ್ಷಣಾ ವ್ಯವಸ್ಥೆ ಮಾಡಲಾಗಿದ್ದು, ಪರಿಸ್ಥಿತಿ ಅವಲೋಕಿಸಲು ಡ್ರೋಣ್‍ಗಳ ಬಳಕೆ ಕೂಡ ಮಾಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಭಯೋತ್ಪಾದಕ ನಿಗ್ರಹ, ಬಾಂಬ್ ನಿಷ್ಕ್ರೀಯ ದಳ, ಕ್ಷಿಪ್ರ ಕಾರ್ಯಪಡೆಯನ್ನು ನಗರದಲ್ಲಿ ನಿಯೋಜಿಸಲಾಗಿದೆ. ತುರ್ತು ಸ್ಥಿತಿಯಲ್ಲಿ ಬಳಿಸಲು 2 ಹೆಲಿಕಾಪ್ಟರ್ ಗಳ ವ್ಯವಸ್ಥೆ ಕೂಡ ಮಾಡಿಕೊಳ್ಳಲಾಗಿದೆ. ಅಯೋಧ್ಯೆಯಲ್ಲಿ ಹೆಜ್ಜೆ ಹೆಜ್ಜೆಗೂ ಸೇನಾಪಡೆಗಳ ಕಾರ್ಯನಿರ್ವಹಿಸುತ್ತಿದೆ.

ಅಷ್ಟೇ ಅಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಹಾಗೆಯೇ ಪ್ರಚೋದನಕಾರಿ ಪೋಸ್ಟ್, ಸಂದೇಶ ಹರಬಾರದೆಂದು ಸಾಮಾಜಿಕ ಜಾಲತಾಣಗಳ ಮೇಲೂ ತೀವ್ರ ನಿಗಾವಹಿಸಲಾಗಿದೆ. ಹೊರ ರಾಜ್ಯಗಳಿಂದ ಬರುವವರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಗಲಭೆಗಳಾದರೆ ಬಂಧಿತರನ್ನು ಇಡಲು ಉತ್ತರಪ್ರದೇಶದ ಅಂಬೇಡ್ಕರ್ ನಗರದಲ್ಲಿ 8 ತಾತ್ಕಾಲಿಕ ಜೈಲುಗಳ ನಿರ್ಮಾಣವಾಗಿದೆ.

ಸಂಭಾವ್ಯ ಪರಿಸ್ಥಿತಿ ಎದುರಿಸಲು ಉತ್ತರ ಪ್ರದೇಶದ 75 ಜಿಲ್ಲೆಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ನ. 30ರವರೆಗೆ ಅಧಿಕಾರಿಗಳ ರಜೆ ರದ್ದುಗೊಳಿಸಲಾಗಿದೆ. ಸೋಮವಾರದವರೆಗೆ ಉತ್ತರ ಪ್ರದೇಶದ ಶಾಲಾ-ಕಾಲೇಜಿಗೆ ರಜೆ ಘೋಷಣೆಯಾಗಿದ್ದು, ಧಾರ್ಮಿಕ ಸ್ಥಳದಲ್ಲಿರೋ ರೈಲ್ವೆ ನಿಲ್ದಾಣಗಳಲ್ಲಿ ಬಿಗಿಭದ್ರತೆ ಒದಗಿಸಲಾಗಿದೆ.

ಕರ್ನಾಟಕದಲ್ಲೂ ಕಟ್ಟೆಚ್ಚರ:
ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇಂದು ನಡೆಯಬೇಕಿದ್ದ ಎಲ್ಲಾ ವಿವಿಗಳ ಪರೀಕ್ಷೆಗಳು ಮುಂದೂಡಲಾಗಿದೆ. ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದೆ. ಆದರೆ ಸರ್ಕಾರಿ ಬಸ್ ಮತ್ತು ಖಾಸಗಿ ಬಸ್‍ಗಳು, ಕ್ಯಾಬ್, ಟ್ಯಾಕ್ಸಿ, ಆಟೋಗಳ ಓಡಾಟದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ.

Leave a Reply

Your email address will not be published. Required fields are marked *