Connect with us

Latest

ರಾಮ ಮಂದಿರ ಶಂಕುಸ್ಥಾಪನೆ- ಭರ್ಜರಿಯಾಗಿ ಅಲಂಕೃತಗೊಂಡಿದೆ ಅಯೋಧ್ಯೆ

Published

on

Share this

ಲಕ್ನೋ: ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣದ ಐತಿಹಾಸಿಕ ಕ್ಷಣಕ್ಕೆ ಇನ್ನು ಎರಡು ದಿನ. ಆಗಸ್ಟ್ 5ರಂದು ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಲಿದೆ. ಈ ಶುಭ ಸಂದರ್ಭಕ್ಕೆ ಅಯೋಧ್ಯೆ ಸಿಂಗಾರಗೊಂಡಿದೆ. ಕೊರೊನಾ ಹಿನ್ನೆಲೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಸಹ ಕೈಗೊಳ್ಳಲಾಗಿದೆ.

ಆಗಸ್ಟ್ 5ರಂದು ನಡೆಯುವ ಭೂಮಿ ಪೂಜೆಯ ಐತಿಹಾಸಿಕ ಕ್ಷಣಕ್ಕಾಗಿ ರಾಮ ಮಂದಿರ ಟ್ರಸ್ಟ್, ಉತ್ತರ ಪ್ರದೇಶ ಸರ್ಕಾರ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸುತ್ತಿದೆ. ಪುರುಷೋತ್ತಮ ರಾಮನ ಮಂದಿರಕ್ಕಾಗಿ ಅಯೋಧ್ಯೆ ಭರ್ಜರಿಯಾಗಿ ಅಲಂಕೃತಗೊಂಡಿದೆ. ಭಾರೀ ಭದ್ರತೆಯನ್ನು ಸಹ ಕೈಗೊಳ್ಳಲಾಗಿದೆ. ಕೊರೊನಾ ಹಿನ್ನೆಲೆ ಸಾಮಾಜಿಕ ಅಂತರ ಪಾಲನೆ ಕಡ್ಡಾಯ ಮಾಡಲಾಗಿದೆ.

ಮುಖ್ಯವೇದಿಕೆಯಲ್ಲಿ ಐವರಿಗೆ ಮಾತ್ರ ಸ್ಥಾನ ಕಲ್ಪಿಸಲಾಗುತ್ತಿದೆ. ಪ್ರಧಾನಿ ಮೋದಿ, ರಾಮಜನ್ಮಭೂಮಿ ನ್ಯಾಸ್ ಮುಖ್ಯಸ್ಥ ನೃತ್ಯ ಗೋಪಾಲದಾಸ್, ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ಮುಖ್ಯಮಂತ್ರಿ ಸೇರಿದಂತೆ ಒಟ್ಟು ಐವರಷ್ಟೇ ವೇದಿಕೆ ಅಲಂಕರಿಸಲಿದ್ದಾರೆ. ಭದ್ರತಾ ಕಾರಣಗಳಿಂದಾಗಿ 200 ಗಣ್ಯರ ಬದಲಿಗೆ 170 ಗಣ್ಯರಿಗೆ ಅವಕಾಶ ನೀಡಲಾಗಿದೆ. ಮಂದಿರದ ಕನಸು ಕಂಡಿದ್ದ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಷಿ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಭಾಗಿಯಾಗಲಿದ್ದಾರೆ.

ಅಚ್ಚರಿ ತರುತ್ತೆ ಮಂದಿರ ತಂತ್ರಜ್ಞಾನ
ಬರೋಬ್ಬರಿ 15 ಪೀಳಿಗೆಯಿಂದ ದೇಶ ಹಾಗೂ ವಿದೇಶಗಳಲ್ಲಿ 131 ದೇವಾಲಯಗಳ ವಿನ್ಯಾಸ ಮಾಡಿರುವ ಅಹಮದಾಬಾದ್‍ನ ಖ್ಯಾತ ಶಿಲ್ಪಿ ಚಂದ್ರಕಾಂತ್ ಸೋಂಪುರ ನೇತೃತ್ವದಲ್ಲಿ ಅವರ ಕುಟುಂಬ ಎಲ್ಲ ಕಾಲಕ್ಕೂ ಸಲ್ಲುವ, ಭವ್ಯ ರಾಮ ಮಂದಿರ ನಿರ್ಮಿಸಲಿದೆ.

ವಿಶ್ವ ಹಿಂದೂ ಪರಿಷತ್ ಜೊತೆ ಸೇರಿ 1989ರಿಂದಲೇ ರಾಮಮಂದಿರ ವಿನ್ಯಾಸ ರೂಪಿಸಿದ್ದ ಚಂದ್ರಕಾಂತ್ ಸೋಂಪುರ, ಇದೀಗ ವಿನ್ಯಾಸದಲ್ಲಿ ಅಲ್ಪ ಮಾರ್ಪಾಡು ಮಾಡಿದ್ದಾರೆ. ನಾಗರ ಶೈಲಿಯಲ್ಲಿ ಮರ್ಯಾದ ಪುರುಷೋಷತ್ತಮ ಮಂದಿರ ನಿರ್ಮಾಣವಾಗಲಿದೆ. ಈ ಮೊದಲು 270 ಅಡಿ ಉದ್ದ, 145 ಅಡಿ ಅಗಲ, 141 ಅಡಿ ಎತ್ತರದ ಮಂದಿರ ನಿರ್ಮಿಸಲು ಯೋಜಿಸಲಾಗಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ರಾಮಮಂದಿರ ಬರೋಬ್ಬರಿ 360 ಅಡಿ ಉದ್ದ, 235 ಅಡಿ ಅಗಲ ಮತ್ತು 161 ಅಡಿ ಎತ್ತರ ಇರಲಿದೆ.

ಒಟ್ಟು 366 ಸ್ಥಂಭಗಳನ್ನು ಬಳಸಿ ದೇಗುಲ ನಿರ್ಮಾಣ
ರಾಮ ಮಂದಿರದ ತಳಭಾಗ 25 ಅಡಿ ಇರಲಿದೆ. ಅದರ ಮೇಲೆ ಡಿಸೈನ್‍ನಲ್ಲಿ 6 ಅಡಿ ಆವರಣ ಇರಲಿದೆ. 16.03 ಅಡಿ ಎತ್ತರದ ಒಟ್ಟು 366 ಸ್ಥಂಭಗಳನ್ನು ಮಂದಿರ ನಿರ್ಮಾಣಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ನೆಲಮಹಡಿಯಲ್ಲಿ 161 ಸ್ಥಂಭ ಇರಲಿದ್ದು, ಇಲ್ಲಿಯೇ ರಾಮನ ಮೂರ್ತಿ ನಿರ್ಮಾಣ ಮಾಡಲಾಗುತ್ತದೆ. ಮೊದಲ ಅಂತಸ್ತಿನಲ್ಲಿ ರಾಮ್‍ಲಲ್ಲಾನ ಗರ್ಭಗುಡಿ ಇರಲಿದೆ. ಇದು ಅಷ್ಟಭುಜಾಕೃತಿಯಲ್ಲಿ ಇರಲಿದೆ. ಇದರ ಪಕ್ಕದಲ್ಲೇ ರಾಮ್ ದರ್ಬಾರ್ ಪ್ರಾಂಗಣ, ಇದರ ಎಡಭಾಗದಲ್ಲಿ ನೃತ್ಯ ಮಂಟಪ, ಅದರ ಹಿಂಬದಿಯಲ್ಲಿ ರಂಗಮಂಟಪ ಇರಲಿದೆ.

ಭೂಗರ್ಭದಲ್ಲಿ ಅಡಕವಾಗಲಿದೆ ಮಂದಿರ ಇತಿಹಾಸ
ಮುಂದೆಂದೂ ರಾಮಜನ್ಮಭೂಮಿ ವಿವಾದ ತಲೆ ಎತ್ತಬಾರದು ಎಂಬ ಕಾರಣಕ್ಕೆ, ಮುಂದಿನ ತಲೆಮಾರುಗಳಿಗೆ ರಾಮಮಂದಿರದ ಭವ್ಯ ಐತಿಹ್ಯ ತಿಳಿಯಬೇಕು ಎಂಬ ಉದ್ದೇಶದಿಂದ ರಾಮಮಂದಿರದ 2 ಸಾವಿರ ಅಡಿ ಆಳದಲ್ಲಿ ಮಂದಿರದ ಸಂಪೂರ್ಣ ಇತಿಹಾಸವುಳ್ಳ ತಾಮ್ರದ ಕೆತ್ತನೆಯ ಸಂಪುಟ (ಟೈಮ್ ಕ್ಯಾಪ್ಸುಲ್) ಹುದುಗಿಸಿಡಲು ಸಿದ್ಧತೆ ನಡೆದಿದೆ.

Click to comment

Leave a Reply

Your email address will not be published. Required fields are marked *

Advertisement