ಅಯೋಧ್ಯೆ ಕೇಸ್ – ವಿಚಾರಣೆಗೆ ಅ.18ರವರೆಗೆ ಗಡುವು ವಿಧಿಸಿದ ಸುಪ್ರೀಂ

ನವದೆಹಲಿ: ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂಮಿ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್‍ನ ಪಂಚ ನ್ಯಾಯಾಧೀಶರ ಪೀಠವು ಅಕ್ಟೋಬರ್ 18ರಂದು ಕೊನೆಯ ವಿಚಾರಣೆ ಹಾಕಿಕೊಂಡಿದೆ.

ಇಂದು ನಡೆದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಈ ಕುರಿತು ಪ್ರಸ್ತಾಪಿಸಿದ್ದು, ಅಕ್ಟೋಬರ್ 18ರೊಳಗೆ ಇದನ್ನು ಮುಕ್ತಾಯಗೊಳಿಸಲು ಜಂಟಿ ಪ್ರಯತ್ನ ಮಾಡೋಣ ಎಂದು ತಿಳಿಸಿದ್ದಾರೆ.

ಮಂಗಳವಾರ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಎರಡು ಕಡೆಯವರ ವಾದಗಳನ್ನು ಪೂರ್ಣಗೊಳಿಸಲು ತಾತ್ಕಾಲಿಕ ವೇಳಾಪಟ್ಟಿಯನ್ನು ಹಂಚಿಕೊಳ್ಳುವಂತೆ ನಿನ್ನೆಯೇ ಪೀಠ ತಿಳಿಸಿತ್ತು. ವಾದಗಳನ್ನು ಪೂರ್ಣಗೊಳಿಸಲು ತಾತ್ಕಾಲಿಕ ವೇಳಾಪಟ್ಟಿಯೊಂದಿಗೆ ಎಲ್ಲ ವಕೀಲರು ಒಟ್ಟಿಗೆ ಕುಳಿತುಕೊಳ್ಳುವಂತೆ ತಿಳಿಸಿದ್ದರಿಂದ ಇಂದು ಎಲ್ಲ ವಕೀಲರು ಸಿದ್ಧತೆ ಮಾಡಿಕೊಂಡು ಬಂದಿದ್ದರು. ಅಲ್ಲದೆ, ಈ ಗಡುವಿನಿಂದ ನ್ಯಾಯಾಧೀಶರು ತೀರ್ಪು ಬರೆಯಲು ಎಷ್ಟು ಸಮಯ ಬೇಕಾಗಬಹುದು ಎಂಬುದರ ಲೆಕ್ಕಾಚಾರ ಹಾಕಬಹುದು ಎಂದು ಪೀಠ ತಿಳಿಸಿತ್ತು.

ನ್ಯಾಯಮೂರ್ತಿ ಗೊಗೊಯ್ ಅವರು ನವೆಂಬರ್ 17ರಂದು ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ ನಿವೃತ್ತಿ ಆಗಲಿದ್ದಾರೆ. ಹೀಗಾಗಿ ಗೊಗೋಯ್ ಅವರು ಅ.18ರ ಗಡುವು ಹಾಕಿಕೊಂಡಿದ್ದಾರೆ.

ಬುಧವಾರ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಪುನರಾರಂಭಿಸುತ್ತಿದ್ದಂತೆ ಎರಡೂ ಕಡೆಯ ವಕೀಲರು ಈ ವೇಳಾಪಟ್ಟಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ನ್ಯಾಯಪೀಠವು ಎರಡೂ ಕಡೆಯ ವಕೀಲರು ತಿಳಿಸಿದ ಸಮಯವನ್ನು ಗಮನಿಸಿದ ನಂತರ, ಅಕ್ಟೋಬರ್ 18ರಂದು ವಿಚಾರಣೆಗೆ ಕಡೆಯ ದಿನಾಂಕವನ್ನು ನಿಗದಿಪಡಿಸಿತು.

ಅಗತ್ಯವಿದ್ದರೆ, ನಾವು ಇನ್ನೂ ಒಂದು ಗಂಟೆ ಹೆಚ್ಚು ಸಮಯ ಕೂರಲು ಸಿದ್ಧ, ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಇದೇ ವೇಳೆ ತಿಳಿಸಿದರು.

ಸುಪ್ರೀಂ ಕೋರ್ಟ್ ನೇಮಿಸಿದ್ದ ಮಧ್ಯಸ್ಥಿಕೆ ಸಮಿತಿಯು ಸೌಹಾರ್ದಯುತ ನಿರ್ಣಯಕ್ಕೆ ಬರಲು ಎರಡೂ ಪಕ್ಷಗಳ ಒಡುವೆ ಒಮ್ಮತ ಮೂಡಿಸುವಲ್ಲಿ ವಿಫಲವಾಗಿದೆ. ಹೀಗಾಗಿ ದಶಕಗಳಿಂದ ಬಾಕಿ ಉಳಿದಿರುವ ರಾಮಜನ್ಮ ಭೂಮಿ ಹಾಗೂ ಬಾಬರಿ ಮಸೀದಿ ಪ್ರಕರಣವನ್ನು ಶೀಘ್ರ ಇತ್ಯರ್ಥಪಡಿಸಲು ಪಂಚ ನ್ಯಾಯಾಧೀಶರ ಪೀಠ ಆಗಸ್ಟ್‍ನಿಂದ ಪ್ರತಿನಿತ್ಯ ವಿಚಾರಣೆ ನಡೆಸಲು ಪ್ರಾರಂಭಿಸಿದೆ.

Leave a Reply

Your email address will not be published. Required fields are marked *