Tuesday, 18th June 2019

ಮಂಗಳವಾರ ಆಸೀಸ್ ವಿರುದ್ಧ ಟೀಂ ಇಂಡಿಯಾ ಗೆಲ್ಲುತ್ತಾ?

– ಸೋತ್ರೆ ಭಾರತಕ್ಕಾಗುವ ನಷ್ಟಗಳೇನು?

ಅಡಿಲೇಡ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಮಂಗಳವಾರ ನಡೆಯಲಿರುವ ಎರಡನೇ ಏಕದಿನ ಪಂದ್ಯ ಗೆಲ್ಲುವ ತವಕದಲ್ಲಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಒಂದು ವೇಳೆ ಈ ಪಂದ್ಯವನ್ನು ಸೋತರೆ ಸರಣಿ ಆಸೀಸ್ ಕೈ ವಶವಾಗಲಿದೆ. ಪಂದ್ಯವನ್ನು ಸೋತರೆ ಟೀಂ ಇಂಡಿಯಾಗೆ ಮೂರು ನಷ್ಟಗಳಾಗಲಿವೆ.

ಸರಣಿ ವಶ: ಈಗಾಗಲೇ ಒಂದು ಪಂದ್ಯದಲ್ಲಿ ಆಸೀಸ್ ಗೆಲುವು ಕಂಡಿದ್ದು, ಮಂಗಳವಾರ ಮ್ಯಾಚ್ ಗೆಲ್ಲುವ ಮೂಲಕ ಸರಣಿ ತನ್ನದಾಗಿಸಿಕೊಳ್ಳುವ ಪ್ರಯತ್ನದಲ್ಲಿದೆ. ಒಂದು ವೇಳೆ ಟೀಂ ಇಂಡಿಯಾ ಸೋತರೆ ಸರಣಿ ಆಸೀಸ್ ವಶವಾಗಲಿದೆ.

ವಿಶ್ವ ಕಪ್‍ಗೆ ಹೊಡೆತ: ಸರಣಿ ಆಸೀಸ್ ಪಾಲಾದರೆ ಟೀಂ ಇಂಡಿಯಾ ಮೇಲೆ ವಿಶ್ವ ಕಪ್ ತಯಾರಿಯ ಒತ್ತಡ ಹೆಚ್ಚಾಗಲಿದೆ. 11 ಏಕದಿನ ಪಂದ್ಯಗಳ ಬಳಿಕ ಟೀಂ ಇಂಡಿಯಾ ವಿಶ್ವಕಪ್ ಅಂಗಳಕ್ಕೆ ಇಳಿಯಬೇಕಿದೆ. ಸೋಲು ವಿಶ್ವಕಪ್ ತರಬೇತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.

7 ವರ್ಷದಲ್ಲಿ 4 ಗೆಲುವು: ಆಸೀಸ್ ಪಡೆ ಸರಣಿ ಗೆದ್ದರೆ, ಏಳು ವರ್ಷದಲ್ಲಿ ಟೀಂ ಇಂಡಿಯಾದ ನಾಲ್ಕನೇ ಸೋಲು ಇದಾಗಲಿದೆ. 2012ರ ಸಿಬಿ ಸೀರಿಸ್, 2015ರ ತ್ರಿಕೋನ ಏಕದಿನ ಸರಣಿ ಮತ್ತು 2016ರ ದ್ವಿಪಕ್ಷೀಯ ಸರಣಿಯನ್ನು ಟೀಂ ಇಂಡಿಯಾ ಕಳೆದುಕೊಂಡಿತ್ತು. ಏಳು ವರ್ಷದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಒಟ್ಟು 18 ಏಕದಿನ ಪಂದ್ಯಗಳನ್ನು ಆಡಿದೆ. ಇವುಗಳಲ್ಲಿ 4 ಪಂದ್ಯಗಳಲ್ಲಿ ಗೆಲುವು, 12ರಲ್ಲಿ ಸೋತಿದೆ. ಒಂದು ಪಂದ್ಯ ಟೈ ಆಗಿದ್ದರೆ ಇನ್ನೊಂದು ಪಂದ್ಯದ ಫಲಿತಾಂಶ ಪ್ರಕಟವಾಗಿರಲಿಲ್ಲ.

ಶನಿವಾರ ನಡೆದ ಪಂದ್ಯದಲ್ಲಿ ಧೋನಿಯ ನಿಧಾನಗತಿ ಬ್ಯಾಟಿಂಗ್ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. 96 ಎಸೆತಗಳನ್ನು ಎದುರಿಸಿದ್ದ ಧೋನಿ ಕೇವಲ 51 ರನ್ ಮಾತ್ರ ಕಲೆ ಹಾಕಿದ್ದರು. 2012ರ ಅಡಿಲೇಡ್‍ನ ಪಂದ್ಯದಲ್ಲಿ ಧೋನಿ ಕೊನೆಯ ನಾಲ್ಕು ಎಸೆತಗಳಲ್ಲಿ 12 ರನ್ ಪಡೆಯುವ ಮೂಲಕ ಟೀಂ ಇಂಡಿಯಾ ಗೆಲುವಿಗೆ ಕಾರಣರಾಗಿ, ತಾನೋರ್ವ ಗೇಮ್ ಫಿನಿಶರ್ ಎಂಬುದನ್ನು ಸಾಬೀತು ಪಡಿಸಿದ್ದರು. ಭಾರತ ತಂಡ 2008ರಲ್ಲಿ ಕೊನೆಯ ಬಾರಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಗೆದ್ದಿತ್ತು.

ತಂಡಗಳು ಹೀಗಿವೆ:
ಟೀಂ ಇಂಡಿಯಾ:  ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಅಂಬಟಿ ರಾಯುಡು, ಕೇದಾರ್ ಜಾಧವ್, ಎಂ.ಎಸ್.ಧೋನಿ (ವಿ), ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಕುಲ್‍ದೀಪ್ ಯಾದವ್, ಮೊಹಮ್ಮದ್ ಶಮಿ, ಯಜುವೇಂದ್ರ ಜಾಹಲ್, ವಿಜಯ್ ಶಂಕರ್, ಖಲೀಲ್ ಅಹ್ಮದ್ ಮತ್ತು ಮೊಹಮ್ಮದ್ ಸಿರಾಜ್

ಆಸೀಸ್: ಆರೋನ್ ಫಿಂಚ್ (ನಾಯಕ), ಅಲೆಕ್ಷ ಕೇರಿ (ವಿ), ಉಸ್ಮಾನ್ ಖ್ವಾಜಾ, ಶೇನ್ ಮಾರ್ಷ್, ಪೀಟರ್ ಹ್ಯಾಂಡಸ್ಕ್ಯಾಂಬ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್ ವೆಲ್, ನಥನ್ ಲಿಯಾನ್, ಪೀಟರ್ ಸಿಡ್ಲ್, ಜೀಯೆ ರಿಚಡ್ರ್ಸನ್, ಜಾಸನ್, ಬೆಹೆಂಡ್ರಾಫ್, ಬಿಲ್ಲಿ ಸ್ಟ್ಯಾನ್ಲೇಕ್, ಆಡಮ್ ಜಂಪಾ ಮತ್ತು ಮಿಚೆಲ್ ಮಾರ್ಶ್

ಪಂದ್ಯ ಮಂಗಳವಾರ ಬೆಳಗ್ಗೆ ಭಾರತೀಯ ಕಾಲಮಾನ 8.50ಕ್ಕೆ ಆರಂಭವಾಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *