Connect with us

Bengaluru City

ಸಿಎಂಗಾಗಿ ಹೋಮ್‌ ಕ್ವಾರಂಟೈನ್‌ ನಿಯಮ ಬದಲಾಗುತ್ತಾ?

Published

on

ಬೆಂಗಳೂರು: ಕೋವಿಡ್‌ ಸೋಂಕಿತರಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಹೋಂ ಕ್ವಾರಂಟೈನ್‌ ನಿಯಮ ಬದಲಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.

ಬಿಬಿಎಂಪಿ, ಆರೋಗ್ಯ ಇಲಾಖಾ ಅಧಿಕಾರಿಗಳು ಇಂದು ಸಿಎಂ ಕಚೇರಿ ಮತ್ತು ಮನೆಯ ಮುಂದೆ ಆ. 2 ರಿಂದ 16 ರವರೆಗೂ ಪ್ರವೇಶ ನಿರಾಕರಣೆ ಮಾಡಿ ಪೋಸ್ಟರ್‌ ಅಂಟಿಸಿದ್ದಾರೆ. ಆಗಸ್ಟ್ 16 ರವರೆಗೂ ಸಿಎಂ ಬಿಎಸ್ ಯಡಿಯೂರಪ್ಪ ಹೋಂ ಕ್ವಾರಂಟೈನ್ ಹಿನ್ನೆಲೆಯಲ್ಲಿ ಯಾರಿಗೂ ಪ್ರವೇಶವಿಲ್ಲ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ.

ಯಡಿಯೂರಪ್ಪನವರು ಈಗ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾವುದೇ ರೋಗ ಲಕ್ಷಣಗಳು ಇಲ್ಲದೇ ಇರುವ ಕಾರಣ ನಗೆಟಿವ್‌ ಬಂದ ಬಳಿಕ ಬಿಡುಗಡೆಯಾಗಲಿದ್ದಾರೆ. ಡಿಸ್ಚಾರ್ಜ್ ನಂತರ ಸಿಎಂ ಬಿಎಸ್ ಯಡಿಯೂರಪ್ಪ ಹೋಮ್‌ ಕ್ವಾರಂಟೈನ್‌ ಆಗಲಿದ್ದಾರೆ.

ಹೋಮ್‌ ಕ್ವಾರಂಟೈನ್‌ ಆಗಲಿರುವ ಸಿಎಂಗಾಗಿ ಕೋವಿಡ್‌ 19 ಮಾರ್ಗಸೂಚಿ ಬದಲಾಗುತ್ತಾ ಎಂಬ ಪ್ರಶ್ನೆ ಏಳಲು ಕಾರಣ ಸ್ವಾತಂತ್ರ್ರ್ಯ ದಿನಾಚರಣೆ. ಬೆಂಗಳೂರಿನ ಮಾಣಿಕ್‌ ಶಾ ಪರೇಡ್‌ ಮೈದಾನದಲ್ಲಿ ಪ್ರತಿ ಸ್ವಾತಂತ್ರ್ಯ ದಿನಾಚರಣೆಯಂದು ಮುಖ್ಯಮಂತ್ರಿಗಳ ಭಾಷಣ ಇದ್ದರೆ ಗಣರಾಜ್ಯೋತ್ಸವ ದಿನದಂದು ರಾಜ್ಯಪಾಲರು ಭಾಷಣ ಮಾಡುತ್ತಾರೆ. ಆದರೆ ಈ ಬಾರಿ ಯಾರು ಭಾಷಣ ಮಾಡುತ್ತಾರೆ ಎಂಬ ಪ್ರಶ್ನೆ ಎದ್ದಿದೆ.

ಆಗಸ್ಟ್‌ 16ರವರೆಗೆ ಹೋಂ ಕ್ವಾರಂಟೈನ್‌ ವಿಧಿಸಲಾಗಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪನವರು ಮನೆಯಿಂದ ತೆರಳಿ ಭಾಷಣ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಭಾಷಣ ಮಾಡಿದರೆ ಕೋವಿಡ್‌ 19 ಮಾರ್ಗಸೂಚಿ ಉಲ್ಲಂಘನೆಯಾಗುತ್ತದೆ.

ಭಾಷಣ ಮಾಡಲೇಬೇಕಾದ ಕಾರಣ ಸಿಎಂ ಚಂದನ/ ಆನ್‌ಲೈನ್‌ ಮೂಲಕವೂ ಭಾಷಣ ಮಾಡಬಹುದು. ಆದರೆ ಮಾಣಿಕ್‌ ಶಾ ಪರೇಡ್‌ ಮೈದಾನದಲ್ಲಿ ಧ್ವಜಾರೋಹಣವನ್ನು ಯಾರು ಮಾಡುತ್ತಾರೆ ಎಂಬ ಮತ್ತೊಂದು ಪ್ರಶ್ನೆ ಎದ್ದಿದೆ.

ಸರ್ಕಾರದಲ್ಲಿ ಒಬ್ಬರೇ ಉಪಮುಖ್ಯಮಂತ್ರಿ ಇದ್ದಿದ್ದರೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಈ ಇದೇ ಮೊದಲ ಬಾರಿಗೆ ಬಿಜೆಪಿ ಸರ್ಕಾರದಲ್ಲಿ ಮೂವರು ಶಾಸಕರಿಗೆ ಉಪಮುಖ್ಯಮಂತ್ರಿ ಪಟ್ಟವನ್ನು ನೀಡಲಾಗಿದೆ. ಗೋವಿಂದ ಕಾರಜೋಳ, ಅಶ್ವತ್ಥನಾರಾಯಣ ಹಾಗೂ ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿಗಳನ್ನಾಗಿ ನೇಮಕ ಮಾಡಲಾಗಿದೆ. ಹೀಗಾಗಿ ಆಗಸ್ಟ್‌ 15ರಂದು ಯಾರು ಭಾಷಣ ಮಾಡಬೇಕು? ಯಾರು ಧ್ವಜಾರೋಹಣ ಮಾಡಬೇಕು ಎಂಬ ವಿಚಾರದ ಬಗ್ಗೆ ಈಗ ಸರ್ಕಾರದ ಮಟ್ಟದಲ್ಲಿ ಚರ್ಚೆ ಆರಂಭಗೊಂಡಿದೆ.

Click to comment

Leave a Reply

Your email address will not be published. Required fields are marked *