Connect with us

International

ಪಾಕ್‌ ಷೇರು ಮಾರುಕಟ್ಟೆಯ ಮೇಲೆ ಉಗ್ರರ ದಾಳಿ – ವಿಡಿಯೋ

Published

on

– ನಾಲ್ವರು ಉಗ್ರರನ್ನು ಹತ್ಯೆಗೈದ ಭದ್ರತಾ ಪಡೆ
– ಇಬ್ಬರು ಮೃತಪಟ್ಟಿದ್ದು, ಹಲವು ಮಂದಿ ಗಂಭೀರ ಗಾಯ

ಇಸ್ಲಾಮಾಬಾದ್‌: ಪಾಕಿಸ್ತಾನದ ಕರಾಚಿಯಲ್ಲಿರುವ ಷೇರು ಮಾರುಕಟ್ಟೆಯ ಮೇಲೆ ಉಗ್ರರು ಇಂದು ಬೆಳಗ್ಗೆ ದಾಳಿ ನಡೆಸಿದ್ದಾರೆ.

ಕಾರಿನಲ್ಲಿ ಆಗಮಿಸಿದ ನಾಲ್ವರು ಉಗ್ರರು ಆರಂಭದಲ್ಲಿ ಮುಖ್ಯ ದ್ವಾರದಲ್ಲಿ ಗ್ರೆನೇಡ್‌ ಎಸೆದು ಒಳ ಪ್ರವೇಶಿಸಿ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಕೂಡಲೇ ಭದ್ರತಾ ಸಿಬ್ಬಂದಿ ಕಟ್ಟಡವನ್ನು ಸುತ್ತುವರಿದು ನಾಲ್ವರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಮೃತ ಉಗ್ರರಿಂದ ಆಯುಧ ಮತ್ತು ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಇಲ್ಲಿಯವರೆಗೆ ಯಾವುದೇ ಉಗ್ರ ಸಂಘಟನೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ.

ಕಳೆದ ವಾರ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಂಸತ್‍ನಲ್ಲೇ ಅಮೆರಿಕ ಸೈನಿಕರು ಹತ್ಯೆ ಮಾಡಿದ ಅಲ್ ಖೈದಾ ಮುಖ್ಯಸ್ಥ, ಉಗ್ರ ಒಸಾಮಾ ಬಿನ್ ಲಾಡೆನ್‍ಗೆ ಹುತಾತ್ಮ ಪಟ್ಟವನ್ನು ನೀಡಿ ಗೌರವಿಸಿದ್ದರು. ಈ ಹೇಳಿಕೆ ನೀಡಿದ ಐದು ದಿನದ ಒಳಗಡೆ ಈ ದಾಳಿ ನಡೆದಿದೆ. ಉಗ್ರರನ್ನು ಪೋಷಣೆ ಮಾಡಿದ್ದಕ್ಕೆ ಈಗ ಉಗ್ರರೇ ಪಾಕ್‌ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಯಾವುದೇ ಮಾಹಿತಿ ನೀಡದೆ ಅಮೆರಿಕ ಸೈನಿಕರು ಪಾಕಿಸ್ತಾನಕ್ಕೆ ನುಗ್ಗಿ ಒಸಾಮಾ ಬಿನ್ ಲಾಡೆನ್‍ನನ್ನು ಹತ್ಯೆ ಮಾಡಿದರು. ಬಳಿಕ ವಿಶ್ವದ ಪ್ರತಿಯೊಬ್ಬರೂ ಪಾಕಿಸ್ತಾನವನ್ನು ನಿಂದಿಸಲು ಪ್ರಾರಂಭಿಸಿದರು. ಈ ಮೂಲಕ ಮುಜುಗರಕ್ಕೀಡು ಮಾಡಿದರು ಎಂದು ಇಮ್ರಾನ್‌ ಖಾನ್‌ ದೂರಿದ್ದರು.

ಭಯೋತ್ಪಾದನೆ ವಿರುದ್ಧ ಯುಎಸ್ ನಡೆಸಿದ ಯುದ್ಧದಲ್ಲಿ 70 ಸಾವಿರ ಪಾಕಿಸ್ತಾನಿಗಳು ಸಾವನ್ನಪ್ಪಿದರು ಎಂದು ಖಾನ್ ಹೇಳಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಒಸಾಮಾ ಬಿನ್ ಲಾಡೆನ್ ಹುತಾತ್ಮನೇ ಎಂದು ಜನ ಪ್ರಶ್ನಿಸುತ್ತಿದ್ದಾರೆ.