Saturday, 19th October 2019

Recent News

ಅಬುಧಾಬಿಯಲ್ಲಿ ಇತಿಹಾಸ ಬರೆದು ಇಸ್ಲಾಂ ರಾಷ್ಟ್ರಗಳ ಶೃಂಗದಲ್ಲಿ ಪಾಕಿಗೆ ಸುಷ್ಮಾ ಟಾಂಗ್

ದುಬೈ: ಇಸ್ಲಾಂ ರಾಷ್ಟ್ರಗಳ ವಾರ್ಷಿಕ ಶೃಂಗ ಸಭೆಯಲ್ಲಿ ಇದೇ ಮೊದಲ ಬಾರಿಗೆ ಪಾಲ್ಗೊಳ್ಳುವ ಮೂಲಕ ಭಾರತ ಹೊಸ ಇತಿಹಾಸ ಬರೆದಿದೆ. ಇಸ್ಲಾಮಿಕ್ ಸಹಕಾರ ಸಂಘ(ಒಐಸಿ) ಸ್ಥಾಪನೆಯಾಗಿ 50 ವರ್ಷಗಳ ನಂತರ ಭಾರತದ ವಿದೇಶಾಂಗ ಸಚಿವೆ ಸುಷ್ಮ ಸ್ವರಾಜ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಎಲ್ಲ ರಾಷ್ಟ್ರಗಳು ಸಹಕಾರ ನೀಡಬೇಕೆಂದು ಮನವಿ ಮಾಡಿ ಪಾಕಿಸ್ತಾನಕ್ಕೆ ಟಾಂಗ್ ಕೊಟ್ಟಿದ್ದಾರೆ.

ಶುಕ್ರವಾರದಿಂದ ಅಬುಧಾಬಿಯಲ್ಲಿ ಒಐಸಿಯ ವಿದೇಶಾಂಗ ಸಚಿವರ ಸಮ್ಮೇಳನ ಆರಂಭಗೊಂಡಿದೆ. ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯನ್ನಾಗಿ ಸುಷ್ಮಾ ಸ್ವರಾಜ್ ಅವರನ್ನು ಆಹ್ವಾನಿಸಿದ್ದಕ್ಕೆ ಪಾಕಿಸ್ತಾನ ವಿರೋಧ ವ್ಯಕ್ತಪಡಿಸಿತ್ತು. ಭಾರತಕ್ಕೆ ನೀಡಿದ ಆಹ್ವಾನವನ್ನು ಕೈಬಿಡಬೇಕು ಎಂದು ಆಗ್ರಹಿಸಿತ್ತು. ಪಾಕ್ ಆಗ್ರಹಕ್ಕೆ ಐಒಸಿ ಸೊಪ್ಪು ಹಾಕದ ಪರಿಣಾಮ ಸುಷ್ಮಾ ಸ್ವರಾಜ್ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಪರೋಕ್ಷವಾಗಿ ಪಾಕಿಸ್ತಾನಕ್ಕೆ ಟಾಂಗ್ ಕೊಟ್ಟಿದ್ದಾರೆ.

ಇಸ್ಲಾಮಿಕ್ ರಾಷ್ಟ್ರಗಳ ಶೃಂಗಸಭೆಯಲ್ಲಿ ಸುಷ್ಮಾ ಸ್ವರಾಜ್ ಮಾತನಾಡುವ ವೇಳೆ ಪಾಕ್ ವಿದೇಶಾಂಗ ಸಚಿವರು ಭಾಗವಹಿಸಿರಲಿಲ್ಲ. ಪಾಕ್ ಸಚಿವರಿಗೆ ಮೀಸಲಿಟ್ಟಿದ್ದ ಕುರ್ಚಿ ಖಾಲಿಯಾಗಿತ್ತು.

ತಮ್ಮ ಭಾಷಣದಲ್ಲಿ ಸುಷ್ಮಾ ಸ್ವರಾಜ್, ಭಯೋತ್ಪಾದನೆಯು ವಿಶ್ವದಲ್ಲಿ ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡುತ್ತಿದೆ. ಹೀಗಾಗಿ ಅದನ್ನು ಹೊಡೆದು ಹಾಕಲು ಎಲ್ಲ ರಾಷ್ಟ್ರಗಳು ಒಂದಾಗಬೇಕಿದೆ ಎಂದು ಮನವಿ ಮಾಡಿದರು.

ಆಗ್ನೇಯ ಏಷ್ಯಾ, ಉತ್ತರ ಆಫ್ರಿಕಾ, ಯುರೋಪ್, ಉತ್ತರ ಅಮೆರಿಕ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭಾರತ ಹಾಗೂ ಪೂರ್ವ ಗಲ್ಫ್ ರಾಷ್ಟ್ರಗಳಲ್ಲಿ ಉಗ್ರರ ಸಂಖ್ಯೆ ಹೆಚ್ಚಾಗುತ್ತಿದೆ. ಭಯೋತ್ಪಾದನೆ ಮತ್ತು ಉಗ್ರವಾದ ಎರಡೂ ಬೇರೆ ಬೇರೆ ಹೆಸರುಗಳಷ್ಟೇ. ಅವೆರಡನ್ನೂ ಬೇರೆ ಬೇರೆ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂದು ಹೇಳಿದರು.

ಧರ್ಮದ ಹೆಸರಿನಲ್ಲಿ ಉಗ್ರರು ಯುವಕರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಯುವಕರಲ್ಲಿ ಭಯೋತ್ಪಾದನೆಯ ಬೀಜ ಬಿತ್ತಿ ತಮ್ಮ ವಿಧ್ವಂಸಕ ಕೃತ್ಯಗಳನ್ನು ಸಾಧಿಸುತ್ತಿದ್ದಾರೆ. ನಮಗೆ ಭಯೋತ್ಪಾದನೆಯನ್ನು ಹೊಡೆದು ಹಾಕಬೇಕು ಉದ್ದೇಶವಿದೆಯೇ ಹೊರತು ಯಾವುದೇ ಧರ್ಮದ ವಿರುದ್ಧ ಹೋರಾಟ ಅಲ್ಲ ಎಂದರು.

ಕುರಾನ್, ಭಗವದ್ಗೀತೆ, ಸಿಖ್ ಧರ್ಮ ಗುರು ಗುರುನಾನಕ್, ವಿವೇಕಾನಂದ್ ಅವರ ಸಾಲುಗಳನ್ನು ಪ್ರಸ್ತಾಪಿಸಿ ಯಾವುದೇ ಧರ್ಮವೂ ಕೆಟ್ಟದನ್ನು ಮಾಡುವಂತೆ ಹೇಳಿಲ್ಲ. ಭಾರತ ಶಾಂತಿಯ ನೆಲೆಬೀಡಾಗಿದೆ, ನಾವು ಶಾಂತಿಯನ್ನೇ ಭಯಸುತ್ತೇವೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದನೆ ತಡೆಯಲು ಶ್ರಮಿಸುತ್ತಿದ್ದಾರೆ. ಜನರಿಗೆ ಉದ್ಯೋಗ, ವಸತಿ, ಮೂಲ ಸೌಲಭ್ಯಗಳನ್ನು ಒದಗಿಸಿದರೆ ಯುವಕರು ಉಗ್ರ ಸಂಘಟನೆಗೆ ಸೇರುವುದಿಲ್ಲ ಎಂದು ಪ್ರಧಾನಿ ಮೋದಿ ಅವರು ಈ ಹಿಂದೆಯೇ ಹೇಳಿದ್ದರು. ಈ ನಿಟ್ಟಿನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಭಾರತವು ಜ್ಞಾನದ ಪರ್ವತ, ಶಾಂತಿ ಸಂಕೇತವಾಗಿ, ನಂಬಿಕೆ ಮತ್ತು ಸಂಪ್ರದಾಯಗಳ ಮೂಲ, ಅನೇಕ ಧರ್ಮಗಳ ಮನೆಯಾಗಿದೆ ಹಾಗೂ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ. ಅಂತಹ ದೇಶವನ್ನು ಪ್ರತಿನಿಧಿಸಿ ನಾನು ಇಲ್ಲಿಗೆ ಬಂದಿರುವೆ. ನಮ್ಮ ಸ್ವಾಗತಿಸಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದರು.

ಅಬುಧಾಬಿಗೆ ಬಂದಿಳಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಯುಎಇ ದೊರೆ ಶೇಖ್ ಅಬ್ದುಲ್ಲಾ ಬಿನ್ ಜಾಯೇದ್ ಅಲ್ ನಹ್ಯಾನ್ ಹಾಗೂ ವಿದೇಶಾಂಗ ಸಚಿವರು ಸ್ವಾಗತಿಸಿದರು.

1969 ರಲ್ಲಿ ಇಸ್ಲಾಮಿಕ್ ಸಹಕಾರ ಸಂಘ ಆರಂಭಗೊಂಡಿದ್ದು ಸೌದಿ ಆರೇಬಿಯಾದ ಜೆಡ್ಡಾದಲ್ಲಿ ಮುಖ್ಯ ಕಚೇರಿಯಿದೆ. ಒಟ್ಟು 57 ರಾಷ್ಟ್ರಗಳು ಈ ಸಂಘಟನೆಯ ಸದಸ್ಯರಾಗಿವೆ. ವಿಶ್ವ ಸಂಸ್ಥೆಯ ಬಳಿಕ ಎರಡನೇ ಅತಿ ಹೆಚ್ಚು ಸದಸ್ಯರನ್ನು ಹೊಂದಿದ ಸಂಘಟನೆ ಇದಾಗಿದೆ.

ಮುಸ್ಲಿಮ್ ಸಮುದಾಯವನ್ನು ಹೆಚ್ಚಿರುವ ದೇಶಗಳಿಗೆ ಮಾತ್ರ ಈ ಸಂಘಟನೆಯ ಸದಸ್ಯ ಸ್ಥಾನವನ್ನು ನೀಡಲಾಗುತ್ತದೆ. ರಷ್ಯಾ, ಥೈಲ್ಯಾಂಡ್ ಸೇರಿದಂತೆ ಕೆಲವೊಂದು ರಾಷ್ಟ್ರಗಳನ್ನು ವೀಕ್ಷಕರನ್ನಾಗಿ ನೇಮಿಸಲಾಗುತ್ತದೆ. ಕಳೆದ ವರ್ಷ ನಡೆದ ಶೃಂಗದಲ್ಲಿ ಬಾಂಗ್ಲಾದೇಶ ಭಾರತವನ್ನು ವೀಕ್ಷಕರನ್ನಾಗಿ ಮಾಡಬೇಕು ಎನ್ನುವ ಪ್ರಸ್ತಾಪವನ್ನು ಇಟ್ಟಿತ್ತು. ಆದರೆ ಈ ಪ್ರಸ್ತಾಪವನ್ನು ಪಾಕಿಸ್ತಾನ ವಿರೋಧಿಸಿತ್ತು.

ನರೇಂದ್ರ ಮೋದಿ ಸರ್ಕಾರ ಬಂದ ಬಳಿಕ ಬಾಂಗ್ಲಾದೇಶ ಅಲ್ಲದೇ ಒಐಸಿಯ ಹಲವು ಮುಸ್ಲಿಂ ರಾಷ್ಟ್ರಗಳ ಜೊತೆಗಿನ ಭಾರತದ ಸಂಬಂಧ ವೃದ್ಧಿಸಿದೆ. ಯುಎಇ, ಸೌದಿ ಆರೇಬಿಯಾ ಜೊತೆಗಿನ ವ್ಯಾಪಾರ ಸಂಬಂಧ ಮತ್ತಷ್ಟು ವೃದ್ಧಿಯಾಗಿದೆ. ಗ್ಯಾಸ್ ನಲ್ಲಿ ಶ್ರೀಮಂತವಾಗಿರುವ ಕತಾರ್ ಜೊತೆಗಿನ ವ್ಯವಹಾರ ವೃದ್ಧಿಸಿದೆ. ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಸಿಆರ್ ಪಿಎಫ್ ಯೋಧರ ಹತ್ಯೆಯನ್ನು ಖಂಡಿಸಿ ಪಾಕ್ ವಿರುದ್ಧ ನಿರ್ಣಯ ಕೈಗೊಳ್ಳುವಲ್ಲಿ ಕುವೈತ್ ಬಹಳ ಮುಖ್ಯ ಪಾತ್ರವಹಿಸಿತ್ತು. ತೈಲ ರಾಷ್ಟ್ರ ಇರಾನ್ ವ್ಯವಹಾರದಲ್ಲಿ ಪಾಲುದಾರನಾಗಿದೆ. ಹೀಗಾಗಿ ಹಲವು ಮುಸ್ಲಿಂ ರಾಷ್ಟ್ರಗಳು ಭಾರತವನ್ನು ಆಹ್ವಾನಿಸಬೇಕೆಂಬ ಒತ್ತಡ ಹಾಕಿದ ಹಿನ್ನೆಲೆಯಲ್ಲಿ ಒಐಸಿ ಮೊದಲ ಬಾರಿಗೆ ಭಾರತಕ್ಕೆ ಆಹ್ವಾನ ನೀಡಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *