Connect with us

Latest

ಉಗ್ರರಿಂದ ಹಾಲಿ ಶಾಸಕ ಸೇರಿ 7 ಜನರ ಬರ್ಬರ ಹತ್ಯೆ

Published

on

ಇಟಾನಗರ್: ಅರುಣಾಚಲ ಪ್ರದೇಶದ ಬೋಗಾಪನಿ ಎಂಬಲ್ಲಿ ಉಗ್ರರ ಗುಂಡಿನ ದಾಳಿಗೆ ಸ್ಥಳೀಯ ಎನ್‍ಪಿಪಿ ಶಾಸಕ ತಿರಾಂಗ್ ಅಬೋಹ್ ಸೇರಿದಂತೆ ಏಳು ಜನರು ಮೃತಪಟ್ಟಿದ್ದಾರೆ.

ತಿರಾಂಗ್ ಅಬೋಹ್ ಅವರು ಕೋನ್ಸಾ ದಕ್ಷಿಣ ಕ್ಷೇತ್ರದಿಂದ ಎನ್‍ಪಿಪಿ ಪಕ್ಷದ ಶಾಸಕರಾಗಿದ್ದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ವಕ್ಷೇತ್ರದಿಂದ ಸ್ಪರ್ಧಿಸಿದ್ದರು. ಫಲಿತಾಂಶಕ್ಕೆ ಎರಡು ದಿನ ಬಾಕಿ ಇರುವಾಗಲೇ ತಿರಾಂಗ್ ಅಬೋಹ್ ಅವರು ಉಗ್ರರು ಅಟ್ಟಹಾಸಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ.

ಶಾಸಕ ತಿರಾಂಗ್ ಅಬೋಹ್ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಬೋಗಾಪನಿ ಎಂಬಲ್ಲಿ ಶಾಸಕರ ಕಾರನ್ನು ತಡೆದ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಸ್ಥಳದಲ್ಲಿಯೇ ತಿರಾಂಗ್ ಅಬೋಹ್ ಸೇರಿದಂತೆ 7 ಜನರು ಮೃತಪಟ್ಟಿದ್ದಾರೆ.

ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಲ್ಯಾಂಡ್ (ಎನ್‍ಎಸ್‍ಸಿಎನ್) ಸಂಘನೆಯ ಉಗ್ರರು ಈ ದಾಳಿ ನಡೆಸಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ತಿರಾಂಗ್ ಅಬೋಹ್ ಅವರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.

ಕೋನ್ಸಾ ದಕ್ಷಿಣ ಕ್ಷೇತ್ರದಲ್ಲಿ ನ್ಯಾಯಯುತ ಚುನಾವಣೆಯಾಗಿಲ್ಲ. ಹೀಗಾಗಿ ಮರು ಚುನಾವಣೆ ನಡೆಸಬೇಕು ಎಂದು ತಿರಾಂಗ್ ಅಬೋಹ್ ಅವರು, ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದರು. ಈ ಕಾರಣಕ್ಕೆ ಗುಂಡಿನ ದಾಳಿ ಮಾಡಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.

ಈ ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಕೆ.ಸಂಗ್ಮಾ ಅವರು, ಶಾಸಕ ತಿರಾಂಗ್ ಅಬೋಹ್ ಅವರ ಸಾವಿನ ಸುದ್ದಿಯಿಂದ ಎದೆ ಭಾರವಾಗಿದೆ. ಶಾಸಕರ ಕುಟುಂಬದವರಿಗೆ ಹಾಗೂ ಸಂಬಂಧಿಕರಿಗೆ ನೋವು ತಡೆದುಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.