Connect with us

Latest

ಅರುಣಾಚಲ ಪ್ರದೇಶದಲ್ಲಿ ಬಿಜೆಪಿಗೆ ಬಿಗ್ ಶಾಕ್ – 25 ನಾಯಕರು ಗುಡ್‍ಬೈ

Published

on

– ಬಿಜೆಪಿಯ ಇಬ್ಬರು ಸಚಿವರು, 6 ಶಾಸಕರು ಎನ್‍ಪಿಪಿಗೆ ಸೇರ್ಪಡೆ

ಇಟಾನಗರ: ಲೋಕಸಭಾ ಚುನಾವಣೆಗೆ ಬೆರಳೆಣಿಕೆ ದಿನಗಳು ಬಾಕಿಯಿದೆ. ಹೀಗಿರುವಾಗಲೇ ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಸಾಮೂಹಿಕ ರಾಜೀನಾಮೆ ಶಾಕ್‍ಗೆ ಒಳಗಾಗಿದೆ.

ಆಡಳಿತರೂಢ ಪಕ್ಷ ಬಿಜೆಪಿಯ ಇಬ್ಬರು ಸಚಿವರು, ಆರು ಜನ ಶಾಸಕರು ಸೇರಿದಂತೆ ಒಟ್ಟು 25 ಮುಖಂಡರು ಪಕ್ಷಕ್ಕೆ ಗುಡ್‍ಬೈ ಹೇಳಿದ್ದಾರೆ. ಈ ಮೂಲಕ ಎಲ್ಲರೂ ನ್ಯಾಷನಲ್ ಪಿಪಲ್ಸ್ ಪಾರ್ಟಿ (ಎನ್‍ಪಿಪಿ) ಸೇರ್ಪಡೆಯಾಗಿದ್ದು, ಬಿಜೆಪಿಗೆ ಭಾರೀ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತದೆ.

ಲೋಕಸಭಾ ಚುನಾವಣೆ ಜೊತೆಗೆ ಅರುಣಾಚಲ ಪ್ರದೇಶದ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ನಿನ್ನೆಯಷ್ಟೇ ವಿಧಾನಸಭೆಯ 60 ಕ್ಷೇತ್ರಗಳ ಪೈಕಿ 54 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಕೆಲ ಪ್ರಮುಖ ಶಾಸಕರು, ಸಚಿವರನ್ನೇ ಪಟ್ಟಿಯಿಂದ ಕೈಬಿಡಲಾಗಿದೆ. ಇದರಿಂದಾಗಿ ಒಟ್ಟು 25 ಜನರು ಬಿಜೆಪಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಜರ್ಪಮ್ ಗಾಮ್ಲಿನ್, ರಾಜ್ಯ ಗೃಹಸಚಿವ ಕುಮಾರ್ ವೈಯ್ ಹಾಗೂ ಪ್ರವಾಸೋದ್ಯಮ ಸಚಿವ ಜಾರ್ಕರ್ ಗಾಮ್ಲಿನ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಎನ್‍ಪಿಪಿ ಸೇರ್ಪಡೆಯಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಕುಮಾರ್ ವೈಯ್ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸುವಲ್ಲಿ ಬಿಜೆಪಿ ವಿಫಲವಾಗಿದ್ದು, ಜನರಿಗೆ ಮೋಸ ಮಾಡಿದೆ. ನಾವು ಕೇವಲ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಈ ಬಾರಿ ಎನ್‍ಪಿಪಿ ಸರ್ಕಾರ ರಚನೆಗೆ ಶ್ರಮಿಸುತ್ತೇವೆ ಎಂದು ಶಪಥ ಮಾಡಿದರು.

ಸಚಿವರು ಸೇರಿದಂತೆ ಬಿಜೆಪಿಯ 8 ಶಾಸಕರು, ಪಿಪಲ್ಸ್ ಪಾರ್ಟಿ ಅರುಣಾಚಲ ಪ್ರದೇಶದ ಓರ್ವ ಶಾಸಕರು ಎನ್‍ಪಿಪಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಎನ್‍ಪಿಪಿ ನಾಯಕ ಕಾನ್ರಾಡ್ ಸಂಗ್ಮಾ ಭಾರೀ ಬೆಂಬಲ ಸಿಕ್ಕಿದ್ದು, ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಎನ್‍ಪಿಪಿ ಪ್ರಧಾನ ಕಾರ್ಯದರ್ಶಿ ಥಾಮಸ್ ಸಾಂಗ್ಮಾ ಅವರು, ಅರುಣಾಚಲ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಮೈತ್ರಿಯಿಲ್ಲ. ಏಕಾಂಗಿಯಾಗಿ ಸ್ಪರ್ಧೆ ಮಾಡಲಿದ್ದು, ಬುಧವಾರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ಜೊತೆಗೆ ಲೋಕಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಕೂಡ ಸದ್ಯದಲ್ಲಿಯೇ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.