Wednesday, 13th November 2019

Recent News

ಅಕ್ರಮ ವಲಸಿಗರು ಕಾಂಗ್ರೆಸ್‍ನ ಸೋದರ ಸಂಬಂಧಿಗಳಿರಬೇಕು, ಇದಕ್ಕೆ NRC ವಿರೋಧ – ಅಮಿತ್ ಶಾ

ಚಂಡೀಗಢ: ಅಕ್ರಮ ವಲಸಿಗರು ಕಾಂಗ್ರೆಸ್ ನಾಯಕ ಸೋದರ ಸಂಬಂಧಿಗಳಿರಬೇಕು. ಈ ಕಾರಣಕ್ಕೆ ಅವರನ್ನು ಗಡಿಪಾರು ಮಾಡುವ ವಿಚಾರ ಬಂದರೆ ಅವರು ಅದನ್ನು ವಿರೋಧಿಸುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೈ ನಾಯಕರ ಮೇಲೆ ಕಿಡಿ ಕಾರಿದ್ದಾರೆ.

ಅಕ್ಟೋಬರ್ 21 ರಂದು ನಡೆಯಲಿರುವ ಹರ್ಯಾಣ ವಿಧಾನಸಭಾ ಚುನಾವಣೆಗೆ ಮುನ್ನ ಗುರುಗ್ರಾಮ್ ನಗರದಲ್ಲಿ ಇಂದು ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ, ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಬಗ್ಗೆ ನಾವು ಮಾತನಾಡುವಾಗಲೆಲ್ಲಾ, ಕಾಂಗ್ರೆಸ್‍ನವರು ಏಕೆ ಗಡೀಪಾರು ಮಾಡುತ್ತೀರಿ ಎಂದು ಕೇಳುತ್ತಾರೆ. ಅವರು ಎಲ್ಲಿಗೆ ಹೋಗುತ್ತಾರೆ? ಅವರು ಏನು ತಿನ್ನುತ್ತಾರೆ? ಎಂದು ಪ್ರಶ್ನೆ ಮಾಡುತ್ತಾರೆ. ಅದಕ್ಕೆ ನಾವು ಆಕ್ರಮ ವಲಸಿಗರು ನಿಮ್ಮ ಸೋದರಸಂಬಂಧಿಗಳೇ ಎಂದು ಕಾಂಗ್ರೆಸ್ ನಾಯಕರನ್ನು ಕೇಳುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.

ರಾಹುಲ್ ಗಾಂಧಿ ಅವರು ಗಡಿಪಾರು ಮಾಡುವ ವಿಚಾರದಲ್ಲಿ ವಿರೋಧ ಮಾಡುತ್ತಾರೆ. ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಕೂಡ ವಿರೋಧ ಮಾಡುತ್ತಾರೆ. ಆದರೆ ಯಾರೇ ವಿರೋಧ ಮಾಡಲಿ ಅಕ್ರಮ ವಲಸಿಗರನ್ನು 2024 ರ ಒಳಗೆ ಭಾರತದಿಂದ ಹೊರ ಹಾಕುತ್ತೇವೆ ಎಂದು ಭರವಸೆ ನೀಡುತ್ತೇನೆ ಎಂದು ಅಮಿತ್ ಶಾ ಗುಡುಗಿದರು.

ನೀವು ಮೋದಿ ಅವರ ಕೈಗಳನ್ನು ಬಲಪಡಿಸಿ. ಮನೋಹರ್ ಲಾಲ್ ಖಟ್ಟರ್ ಅವರನ್ನು ಈಗಿನ ವಿಧಾನ ಸಭಾ ಚುನಾವಣೆಯಲ್ಲಿ ಗೆಲ್ಲಿಸಿ. ನೀವು ಗುರುಗ್ರಾಮ್‍ನಲ್ಲಿ ಕಮಲದ ಚಿಹ್ನೆಯನ್ನು ಬಲವಾಗಿ ಒತ್ತಿದರೆ ಇಟಲಿಯಲ್ಲಿ ಪ್ರವಾಹವಾಗಬೇಕು ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯನ್ನು ಪರೋಕ್ಷವಾಗಿ ಕುಟುಕಿದರು.

ಇದೇ ವೇಳೆ 370ನೇ ವಿಧಿ ರದ್ದು ಮಾಡಿದರ ಬಗ್ಗೆ ಮಾತನಾಡಿದ ಅಮಿತ್ ಶಾ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರಾರಂಭವಾದ ಭಯೋತ್ಪಾದನೆಯ ಯುಗದಲ್ಲಿ, 90 ರ ದಶಕದಿಂದ ಇಲ್ಲಿಯವರೆಗೆ 40 ಸಾವಿರಕ್ಕೂ ಕ್ಕೂ ಹೆಚ್ಚು ಭಾರತೀಯರು ಭಯೋತ್ಪಾದಕರಿಂದ ಪ್ರಾಣ ಕಳೆದುಕೊಂಡರು. ಆದರೆ ಕಾಂಗ್ರೆಸ್ ಎಂದಿಗೂ 370 ನೇ ವಿಧಿಯನ್ನು ರದ್ದು ಮಾಡಲಿಲ್ಲ. ಆದರೆ ಅದನ್ನು ನಾವು ಮಾಡಿದ್ದೇವೆ ಎಂದು ಹೇಳಿದರು.

2005 ರಿಂದ 2104 ರ ವರೆಗೆ ಮುಖ್ಯಮಂತ್ರಿಯಾಗಿದ್ದ ಭೂಪಿಂದರ್ ಸಿಂಗ್ ಯಾದವ್ ಅವರ ಸರ್ಕಾರ ಕೇವಲ ಭ್ರಷ್ಟಾಚಾರ ಮಾಡಿ ಗುರುತಿಸಿಕೊಂಡಿತ್ತು. ಇದನ್ನು ಬಿಟ್ಟರೆ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಓಂ ಪ್ರಕಾಶ್ ಚೌತಾಲಾ ಅವರು ಕೇವಲ ಗೂಂಡಾಗಿರಿ ಮಾಡಿದ್ದರು. ಅದ್ದರಿಂದ ಉತ್ತಮ ಆಡಳಿತ ನೀಡುವ ಬಿಜೆಪಿ ಸರ್ಕಾರವನ್ನು ಗೆಲ್ಲಿಸಿ ಎಂದು ಜನರಲ್ಲಿ ಮನವಿ ಮಾಡಿದರು.

Leave a Reply

Your email address will not be published. Required fields are marked *