ಸರ್ಕಾರಿ ದುಡ್ಡಲ್ಲಿ ಜಿ.ಪಂ ಅಧ್ಯಕ್ಷರ ದರ್ಬಾರ್- ಕಾರಿಗೆ ಇರಲೇಬೇಕಂತೆ ಸೌಂಡ್ ಸಿಸ್ಟಮ್!

Public TV
2 Min Read

ಬೆಳಗಾವಿ: ರಸ್ತೆ ಕಾಮಗಾರಿಗೆ, ನೀರಿನ ವ್ಯವಸ್ಥೆ, ಚರಂಡಿ, ಕಟ್ಟಡ ನಿರ್ಮಾಣ ಸೇರಿದಂತೆ ಅನೇಕ ಸರ್ಕಾರಿ ಕಾಮಗಾರಿಗಳಿಗೆ ಟೆಂಡರ್ ಕರೆಯೋದನ್ನ ಕೇಳಿದ್ದೀವಿ. ಆದರೆ ಬೆಳಗಾವಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಕಾರಿಗೆ ಸೌಂಡ್ ಸಿಸ್ಟಮ್ ಕೊಡಿಸುವ ಸಲುವಾಗಿ ಟೆಂಡರ್ ಕರೆದಿದ್ದಾರೆ.

ಬೆಳಗಾವಿಯಲ್ಲಿ ಆಶಾ ಐಹೊಳೆ ಅಂಧದರ್ಬಾರ್ ನಡೆಸುತ್ತಿದ್ದಾರೆ. ಇವರು ಕಾರಿನಲ್ಲಿ ಕುಳಿತರೆ ಸಾಕು ಸೌಂಡ್ ಸಿಸ್ಟಮ್ ಆನ್ ಆಗ್ಲೇಬೇಕಂತೆ. ಒಂದು ವರ್ಷದ ಹಿಂದೆ ಹೊಸ ಕಾರನ್ನು ಸರ್ಕಾರ ಇವರಿಗೆ ನೀಡಿದೆ. ಅದರಲ್ಲಿ ಸೌಂಡ್ ಸಿಸ್ಟಮ್ ಇಲ್ಲದ್ದಕ್ಕೆ ಮೇಡಂ ಅವರು ಆರು ತಿಂಗಳ ಬಳಿಕ ಸುಮಾರು 60 ಸಾವಿರ ರೂ. ಸ್ವಂತ ಹಣ ಖರ್ಚು ಮಾಡಿ ಕಾರಿಗೆ ಸೌಂಡ್ ಸಿಸ್ಟಮ್ ಅಳವಡಿಸಿದ್ದಾರೆ. ಆದ್ರೆ ಇದೀಗ ಆ ಹಣವನ್ನ ನೀಡುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಕೇಳುತ್ತಿದ್ದಾರೆ.

ಅಧ್ಯಕ್ಷರು ಸಿಇಒ ಬಳಿ ಬಿಲ್ ಪಾಸ್ ಮಾಡಿಸುವಂತೆ ಕೇಳಿದಾಗ ಬಿಲ್ ಪಾಸ್ ಮಾಡುವ ಬದಲು ಸಿಇಒ ಟೆಂಡರ್ ಕರೆದಿದ್ದಾರೆ. ಅದು ಕೇವಲ 60 ಸಾವಿರ ರೂಪಾಯಿಗೆ ಟೆಂಡರ್ ಕರೆದಿದ್ದಾರೆ. ಸರ್ಕಾರಿ ನಿಯಮಗಳನುಸಾರ ಯಾವುದೇ ಕಾಮಗಾರಿ ಟೆಂಡರ್ ಕರೆಯಬೇಕೆಂದರೆ ಅದು ಒಂದು ಲಕ್ಷ ರೂಪಾಯಿ ದಾಟಿರಬೇಕು. ಆದರೆ ಅಧ್ಯಕ್ಷರ ಕಾರ್ ಮ್ಯೂಸಿಕ್ ಸಿಸ್ಟಮ್ ಸಲುವಾಗಿಯೇ ಸರ್ಕಾರಿ ನಿಯಮಗಳನ್ನ ಗಾಳಿಗೆ ತೂರಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಟೆಂಡರ್ ಕರೆದಿದ್ದಾರೆ. ಈ ಟೆಂಡರ್ ಗೂ ನನಗೂ ಯಾವುದೇ ಸಂಬಂಧವಿಲ್ಲ. ಆದರೆ ನಾನು ಕಾರಿಗೆ ಸೌಂಡ್ ಸಿಸ್ಟಮ್ ಮೂರು ತಿಂಗಳ ಹಿಂದೆಯೇ ಹಾಕಿಸಿದ್ದು, ಅದರ ಹಣ ನೀಡಿ ಎಂದು ಕೇಳಿದ್ದೇನೆ ಎಂದು ಜಿ.ಪಂ ಅಧ್ಯಕ್ಷರು ಹೇಳುತ್ತಿದ್ದಾರೆ.

10 ರಿಂದ 20 ಸಾವಿರ ರೂ.ಗೆ ಬರುವ ಮ್ಯೂಸಿಕ್ ಸಿಸ್ಟಮ್ ಗೆ 60 ಸಾವಿರ ಗಟ್ಟಲೆ ಖರ್ಚು ಮಾಡುವ ಅವಶ್ಯಕತೆ ಏನಿತ್ತು ಅಂತಾ ಕೇಳಿದ್ರೆ, ಚೀನಾ ಮಾಡಲ್ ಗಳಿಗೆ ಬಿಲ್ ಕೊಡುವುದಿಲ್ಲ. ಅವು ಗ್ಯಾರಂಟಿ ಕೂಡ ಇರುವುದಿಲ್ಲ. ಹೀಗಾಗಿ ಒಳ್ಳೆಯ ಕ್ವಾಲಿಟಿ ಸಿಸ್ಟಮ್ ಅಳವಡಿಸಿದ್ದೇನೆ. ಆದರೆ ಪೂರ್ತಿ ಹಣವನ್ನ ಒಂದೇ ಬಾರಿ ಕೊಡಿ ಅಂತಾನು ನಾನು ಹೇಳಿಲ್ಲ ಹಂತ ಹಂತವಾಗಿ ಕೊಟ್ಟರೆ ಸಾಕು ಎಂಬುದು ಅಧ್ಯಕ್ಷರ ಮಾತಾಗಿದೆ.

ಅಧ್ಯಕ್ಷರ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ನಡೆಗೆ ಸದ್ಯ ಜಿಲ್ಲೆಯಾದ್ಯಂತ ಸಾರ್ವಜನಿಕರಿಂದ ಆಕ್ರೋಶ ಕೇಳಿಬರುತ್ತಿದೆ. ನಿಯಮಗಳನ್ನ ಗಾಳಿಗೆ ತೂರಿದ ಅಧಿಕಾರಿಗಳ ವಿರುದ್ಧ ಸರ್ಕಾರ ಕೂಡಲೇ ಕ್ರಮಕ್ಕೆ ಮುಂದಾಗಬೇಕು. ಜೊತೆಗೆ ಅಧ್ಯಕ್ಷರು ತಮಗೆ ಹೊಂದಿಕೆಯಾಗಿಲ್ಲವೆಂದಲ್ಲಿ ತಮ್ಮ ಸ್ವಂತ ವಾಹನದಲ್ಲಿ ಓಡಾಡಲಿ. ಈ ರೀತಿಯಾಗಿ ಸರ್ಕಾರಿ ಹಣವನ್ನ ಬೇಕಾಬಿಟ್ಟಿ ಖರ್ಚು ಮಾಡುವುದನ್ನ ಬಿಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಅಧ್ಯಕ್ಷರಿಗೆ ಕಂಪರ್ಟ್ ಆಗಿಲ್ಲ ಅನ್ನುವ ಕಾರಣಕ್ಕೆ ಮ್ಯೂಸಿಕ್ ಸಿಸ್ಟಮ್ ಅಳವಡಿಸಿದ್ದು ಒಂದು ಕಡೆಯಾದರೆ, ಸರ್ಕಾರಿ ಕಾರುಗಳಲ್ಲಿ ದುಬಾರಿ ಸಿಸ್ಟಮ್ ಕೂಡಿಸುವ ಅವಶ್ಯಕತೆ ಏನಿತ್ತು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಈ ಪ್ರಕರಣದ ಕುರಿತು ಅಧಿಕಾರಿಗಳನ್ನ ಸಂಪರ್ಕಿಸಿದರೆ ಇದಕ್ಕೂ ನಮಗೂ ಎನೂ ಸಂಬಂಧ ಇಲ್ಲ ಎನ್ನುವ ನಿಟ್ಟಿನಲ್ಲಿ ವರ್ತಿಸುತ್ತಿದ್ದಾರೆ ಅಂತ ಜನಸಾಮಾನ್ಯರು ದೂರಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *