ಸಲ್ಲು ಕಂಕುಳೇರಿ ನಕ್ಕ ಛೋಟಾ ಶಾರೂಖ್!

Public TV
1 Min Read

– ಝೀರೋ ಟೀಸರ್ ಜ್ವರವೇರಿಸಿತು!

ಮುಂಬೈ: ಶಾರುಖ್ ಖಾನ್ ಅಭಿನಯದ ಝೀರೋ ಚಿತ್ರಕ್ಕಾಗಿ ಭಾರತ ಮಾತ್ರವಲ್ಲದೇ ವಿಶ್ವಾದ್ಯಂತ ಅಚ್ಚರಿದಾಯಕ ಕುತೂಹಲ ಮೂಡಿಕೊಂಡಿದೆ. ಎಲ್ಲರೂ ಕುತೂಹಲದಿಂದ ಈ ಚಿತ್ರಕ್ಕಾಗಿ ಕಾಯುತ್ತಿರೋವಾಗಲೇ ಈ ಚಿತ್ರದ ಎರಡನೇ ಟೀಸರ್ ಒಂದು ಬಿಡುಗಡೆಯಾಗಿದೆ. ಇದರಲ್ಲಿ ಸಲ್ಮಾನ್ ಖಾನ್ ಕಂಕುಳಲ್ಲಿ ಕೂತಿರುವ ಶಾರೂಕ್ ಚಿತ್ರ ಕಂಡು ಇವರಿಬ್ಬರ ಅಭಿಮಾನಿಗಳೂ ಥ್ರಿಲ್ ಆಗಿದ್ದಾರೆ!

ಸಲ್ಮಾನ್ ಖಾನ್ ಮತ್ತು ಶಾರೂಖ್ ಖಾನ್ ನಡುವೆ ಆಗಾಗ ಶೀತಲ ಸಮರ ನಡೆಯುತ್ತಲೇ ಬಂದಿತ್ತು. ಇವರಿಬ್ಬರೂ ಒಬ್ಬರ ಮುಖ ಕಂಡರೆ ಮತ್ತೊಬ್ಬರು ಉರಿದು ಬೀಳುತ್ತಾರೆಂಬಲ್ಲಿಯವರೆಗೂ ದುಷ್ಮನಿಯ ಕಹಾನಿ ಫೇಮಸ್ ಆಗಿತ್ತು. ಆದರೆ ಝೀರೋ ಚಿತ್ರದ ಮೂಲಕ ಈ ಹೀರೋಗಳಿಬ್ಬರೂ ಒಂದಾಗಿದ್ದಾರೆ. ಛೋಟಾ ಶಾರೂಖ್ ಸಲ್ಮಾನ್ ಕಂಕುಳಲ್ಲಿರೋ ಚಿತ್ರವೀಗ ಸಾಮಾಜಿಕ ಜಾಲತಾಣಗಳ ತುಂಬಾ ವ್ಯಾಪಕ ಜನಪ್ರಿಯತೆ ಗಳಿಸಿಕೊಂಡಿದೆ!

ಕೇವಲ ಒಂದು ನಿಮಿಷ ಮತ್ತು ಇಪ್ಪತ್ತೊಂದು ಸೆಕೆಂಡುಗಳ ಈ ಟೀಸರ್‍ನಲ್ಲಿ ಸಲ್ಮಾನ್ ಮತ್ತು ಶಾರೂಕ್ ಜೋಡಿಯ ಸಾಂಗತ್ಯ ಝೀರೋ ಚಿತ್ರದೆಡೆಗಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಭಾರೀ ನಿರೀಕ್ಷೆಯ ಬಿಗ್ ಬಜೆಟ್ಟಿನ ಈ ಚಿತ್ರದ ಚಿತ್ರೀಕರಣ ಸಹಜವಾಗಿಯೇ ಒಂದಷ್ಟು ತಡವಾಗಿತ್ತು. ಬಹಳಷ್ಟು ಹಿಂದೆ ಈ ಚಿತ್ರದ ಟೀಸರ್ ರಿಲೀಸಾಗಿ ಮತ್ತೊಂದನ್ನೀಗ ಸತಾಯಿಸುತ್ತಲೇ ಚಿತ್ರ ತಂಡ ಬಿಡುಗಡೆ ಮಾಡಿದೆ. ಆದರೆ ತಡವಾಗಿಯೂ ಜಡಿದು ಬಂದಂತಿರೋ ಈ ಟೀಸರ್ ಪ್ರೇಕ್ಷಕರನ್ನು ಸಂತೃಪ್ತಗೊಳಿಸಿದೆ.

ಈ ಚಿತ್ರದ ನಿರ್ದೇಶಕರಾದ ಆನಂದ್ ಎಲ್ ರೈ ಮತ್ತೊಂದು ಸಂತಸದ ಸುದ್ದಿಯನ್ನು ಜಾಹೀರು ಮಾಡಿದ್ದಾರೆ. ಇದೀಗ ಝೀರೋ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ಭರದಿಂದ ಸಾಗುತ್ತಿದೆಯಂತೆ. ಈ ಚಿತ್ರೀಕರಣ ಪ್ರಸಿದ್ಧ ಸ್ಟೇಜ್ 21 ಸ್ಟುಡಿಯೋದಲ್ಲಿ ನಡೆಯುತ್ತಿದೆ. ಅಲ್ಲಿಗೆ ಝೀರೋ ಚಿತ್ರ ತೆರೆ ಕಾಣುವ ದಿನಗಳೂ ಹತ್ತಿರಾಗಿವೆ ಎಂಬುದನ್ನು ನಿರ್ದೇಶಕರೇ ಖಚಿತ ಪಡಿಸಿದಂತಾಗಿದೆ!

Share This Article
Leave a Comment

Leave a Reply

Your email address will not be published. Required fields are marked *