ತನ್ನ ಹೊಸತನದಿಂದ ಯಾವಾಗಲೂ ವೀಕ್ಷಕರಿಗೆ ಹೊಸತನವನ್ನು ಕೊಟ್ಟು ಮನರಂಜಿಸುವ ಜೀ ಕನ್ನಡ (Zee Kannada) ಈಗ ಎಲ್ಲರ ಅಚ್ಚುಮೆಚ್ಚಿನ ನಾನ್-ಫಿಕ್ಷನ್ ಶೋ ಕಾಮಿಡಿ (Comedy Khiladigalu) ಕಿಲಾಡಿಗಳನ್ನು ಮತ್ತೆ ತಂದಿದೆ. ಇಡೀ ರಾಜ್ಯವನ್ನೇ ನಗಿಸಿದ ಯಶಸ್ವಿ ಸೀಸನ್‌ಗಳನ್ನು ನೀಡಿದ ನಂತರ, ಕಾಮಿಡಿಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ವಾಹಿನಿ ಸಿದ್ಧವಾಗಿದೆ. ಇನ್ನು ಎಲ್ಲರೂ ಕಾತುರತೆಯಿಂದ ಕಾಯುತ್ತಿರುವ ಕಾಮಿಡಿ ಕಿಲಾಡಿಗಳು ಅಕ್ಟೋಬರ್ 25 ರಂದು ರಾತ್ರಿ 9 ಗಂಟೆಗೆ ಶುರುವಾಗಲಿದ್ದು, ಪ್ರತಿ ವಾರಾಂತ್ಯದಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.
ತರ್ಲೆ ಮಾತು, ವಿಭಿನ್ನ ನಿರೂಪಣಾ ಶೈಲಿಯಿಂದ ಕನ್ನಡಿಗರ ಮನಗೆದ್ದ ನಿರಂಜನ್ ದೇಶಪಾಂಡೆ ಅವರು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ನಿರೂಪಣಾ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇನ್ನು ಈ ನಗುವಿನ ಪಯಣದ ಸಾರಥಿಗಳಾಗಿ ಅತ್ಯುತ್ತಮ ಸಿನೆಮಾಗಳನ್ನು ನೀಡಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ ಕಾಮಿಡಿ ಕಿಂಗ್ ಜಗ್ಗೇಶ್ ಮತ್ತು ಹೆಸರಾಂತ ನಿರ್ದೇಶಕ ಯೋಗರಾಜ್ ಭಟ್, ಎಲ್ಲರ ಅಚ್ಚುಮೆಚ್ಚಿನ ಹಿರಿಯ ನಟಿ ತಾರಾ ಅನುರಾಧ ಇರಲಿದ್ದಾರೆ. ಒಟ್ಟಾರೆಯಾಗಿ ಇವೆರಲ್ಲರೂ ನಿಮ್ಮ ನಗುವನ್ನು ಡಬಲ್ ಮಾಡೋದರಲ್ಲಿ ಯಾವುದೇ ಸಂದೇಹವಿಲ್ಲ. ಇದನ್ನೂ ಓದಿ: ಮೂರೇ ವಾರಕ್ಕೆ ಕಾಂತಾರ ಚಾಪ್ಟರ್-1 ಹೊಸ ಮೈಲಿಗಲ್ಲು
ಈ ಸೀಸನ್ ನ ಕಾಮಿಡಿ ಕಿಲಾಡಿಗಳು ಕ್ರಿಯೇಟಿವಿಟಿ ಮತ್ತು ಹೊಸತನದ ಪ್ರತಿರೂಪವಾಗಿದೆ. ಇನ್ನು ಪ್ರತಿಸಂಚಿಕೆಯಲ್ಲೂ ಹಾಸ್ಯ, ತರ್ಲೆ, ನಗುವಿನ ಚಟಾಕಿ ಇರಲಿದೆ. ಹೊಸಪ್ರತಿಭೆಗಳು ಕಾಮಿಡಿ ಸ್ಕಿಟ್ ಗಳ ಮೂಲಕ ಕನ್ನಡಿಗರ ಮನಕ್ಕೆ ಲಗ್ಗೆ ಇಡಲು ಸಜ್ಜಾಗಿದ್ದಾರೆ. ಇದೇ ಅಕ್ಟೋಬರ್ 25 ರಿಂದ, ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಶೋ ಪ್ರಸಾರವಾಗಲಿದೆ.
