ಜಮೀರ್ ಕಣ್ಣೀರು ಮತ್ತು 100 ಬಿರಿಯಾನಿ..!

Public TV
2 Min Read

ಅವರೆಲ್ಲ ಬೆಳ್ಳಂಬೆಳಗ್ಗೆ ಮೂರು ಗಂಟೆಗೆ ಎದ್ದು ಮೈಸೂರಿನಿಂದ (Mysuru) ನೇರವಾಗಿ ಬಸ್ ಹತ್ತಿ ಬೆಂಗಳೂರಿಗೆ ಬಂದಿದ್ರು. ವಸತಿ ಸೌಲಭ್ಯ, ಪಿಂಚಣಿ ಹೆಚ್ಚಳಕ್ಕಾಗಿ ಎಷ್ಟು ಅಂತಾ ಜಿಲ್ಲಾಧಿಕಾರಿ ಕಚೇರಿಗೆ ಅಲೆಯೋದು ಸಿಎಂ ಮನೆಗೆ ಹೋಗಿ ನ್ಯಾಯ ಕೇಳುವ ಅನ್ನುವ ಸೋತ ನೋವಿನಿಂದ ಬಂದಿದ್ರು.

ಬಹುತೇಕರಿಗೆ ಕಾಲಿನ ಸ್ವಾಧೀನವಿಲ್ಲ, ನಡೆಯೋಕೆ ಆಗಲ್ಲ ವೀಲ್ ಚೇರ್ ಆಧಾರ. ಇನ್ನು ಕೆಲವರಿಗೆ ಕೈ ಇಲ್ಲ, ಊರುಗೋಲಿನ ಅಧಾರದಲ್ಲಿರೋರು. ಇವರೆಲ್ಲ ಬಸ್ ಮಾಡಿಕೊಂಡು ಸುಮಾರು ನೂರಕ್ಕೂ ಹೆಚ್ಚು ಜನ ಸಿಎಂ ಗೃಹಕಚೇರಿ ಕೃಷ್ಣಾಗೆ ಬಂದಿದ್ದಾರೆ. ಆದ್ರೇ ಸಿಎಂ ಕಚೇರಿಯಲ್ಲಿ ಇರದ ಕಾರಣ ಇವ್ರ ಭೇಟಿಗೆ ಅವಕಾಶ ಸಿಗಲಿಲ್ಲ. ಅಲ್ಲಿಂದ ವಸತಿ ವಿಚಾರಕ್ಕೆ ಸಿಎಂ ಆಪ್ತ ಕಾರ್ಯದರ್ಶಿ ಜಮೀರ್ (Zameer Ahmed Khan) ಮನೆಗೆ ಹೋಗಿ ಅಂತಾ ಸಾಗಾ ಹಾಕಿದ್ದಾರೆ.

ಪಾಪ ವ್ಹೀಲ್‌ ಚೇರ್‌ನಲ್ಲಿಯೇ ಬೆಂಗಳೂರು ಟ್ರಾಫಿಕ್ ನಲ್ಲಿ ಅವರೆಲ್ಲ ಸಿಎಂ ಗೃಹಕಚೇರಿಯಿಂದ ಐನೂರು ಮೀಟರ್ ದೂರದ ಜಮೀರ್ ಸರ್ಕಾರಿ ನಿವಾಸಕ್ಕೆ ಹೋಗಿದ್ದಾರೆ. ಅರಂಭದಲ್ಲಿ ಅಪಾಯಿಂಟ್‌ಮೆಂಟ್‌ ತಗೊಂಡಿಲ್ಲ ಸಾಹೇಬ್ರು ಇಲ್ಲ ಅಂತಾ ಪೊಲೀಸರು ರಸ್ತೆಯಲ್ಲಿಯೇ ಇವರನ್ನು ನಿಲ್ಲಿಸಿದ್ದಾರೆ. ಫುಟ್‌ ಪಾತ್ ರಸ್ತೆಯಲ್ಲಿಯೇ ಬಿರುಬಿಸಿಲಿನಲ್ಲಿ ಸುಮಾರು ಮೂರು ನಾಲ್ಕು ಗಂಟೆ ನೀರು ತಿಂಡಿ ಇಲ್ಲದೇ ನಿಂತಿದ್ದಾರೆ. ಏನು ದಾರಿ ಕಾಣದೇ ʻಪಬ್ಲಿಕ್ ಟಿವಿʼಗೆ ಕರೆ ಮಾಡಿದ್ದಾರೆ. ಪಬ್ಲಿಕ್ ಟಿವಿ ಸ್ಥಳಕ್ಕೆ ಹೋಗುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿ ಜಮೀರ್ ಮನೆಯೊಳಗೆ ಬಿಟ್ಟಿದ್ದಾರೆ.

ತಕ್ಷಣ ಜಮೀರ್ ಆಪ್ತಕಾರ್ಯದರ್ಶಿ ಬಂದು ಮನವಿ ಸ್ವೀಕರಿಸಿದ್ದಾರೆ. ಕೊನೆಗೆ ಚಾಮರಾಜಪೇಟೆಯಲ್ಲಿ ಸಭೆ ಮುಗಿಸಿ ಬಂದ ಜಮೀರ್ ತಕ್ಷಣ ಮನೆಬಾಗಿಲಲ್ಲಿ ನಿಂತ ವಿಶೇಷ ಚೇತನರ ಸಮಸ್ಯೆ ಆಲಿಸಿದ್ರು. ಯಾಕ್ ಬರೋಕೆ ಹೋದ್ರಿ ಮೈಸೂರಿಂದ ಸಿಎಂ ಬಂದಾಗ ಅವರಿಗೆ ಮನವಿ ನೀಡಬೇಕಾಗಿತ್ತು ಅಂತಾ ಹೇಳುತ್ತಲೇ ಮನವಿ ಸ್ವೀಕರಿಸಿದ್ರು. ಕೊನೆಗೆ ನಾನೇ ಜಿಲ್ಲಾಧಿಕಾರಿಗೆ ಪತ್ರ ಬರೆಯುತ್ತೇನೆ ರಾಜೀವ್ ಗಾಂಧಿ ವಸತಿ ಯೋಜನೆ ಮೂಲಕ ಮನೆ ಕೊಡಿಸುವ ಕೆಲ್ಸ ಮಾಡ್ತೀನಿ ಅಂತಾ ಭರವಸೆ ಕೊಟ್ರು.

ಜೊತೆಗೆ ಬಿರಿಯಾನಿ ತರಿಸ್ತೀನಿ ಇರಪ್ಪ ಅಂತಾ 100 ಮಟನ್ ಬಿರಿಯಾನಿ, 20-30 ಪ್ಲೇಟ್ ಕಬಾಬ್‌ಗೆ ಆರ್ಡರ್ ಮಾಡಿದ್ರು. ವಿಶೇಷ ಚೇತನರು ಫುಲ್ ಖುಷ್. ಧನ್ಯವಾದ ಹೇಳೋಕೆ ಕಾಲು ಹಿಡಿಯೋಕೆ ಮುಂದಾದಾಗ ಜಮೀರ್‌ಗೆ ಕಣ್ಣೀರು.. ʻಪಬ್ಲಿಕ್ ಟಿವಿʼ ಜೊತೆಗೆ ಮಾತಾನಾಡ್ತಾ ಸಚಿವ ಜಮೀರ್ ಕಣ್ಣಿಂದ ನೀರು ಜಿನುಗುತ್ತಿತ್ತು. ಪಾಪ ಬಡವರು ಕಾಲಿಲ್ಲ.. ಕೈಯಿಲ್ಲ.. ನೋಡೋಕೆ ಬೇಜಾರಾಯ್ತು. ಇಷ್ಟು ದೂರ ಬಂದ್ರಲ್ಲ ಅಂತಾ ನೋವಿನಿಂದಲೇ ನುಡಿದ್ರು. ಕ್ಯಾಮೆರಾ ಆಫ್ ಮಾಡ್ರಪ್ಪ ಅಂತಾ ಮನವಿ ಮಾಡುತ್ತಲೇ ಎರಡು ಲಕ್ಷ ರೂಪಾಯಿ ದುಡ್ಡು ತಗೊಂಡು ವಿಶೇಷಚೇತನರ ಕೈಗೆ ತುರುಕಿದ್ರು.

Share This Article