ಬಾಲಿವುಡ್ ಸೆಲೆಬ್ರೆಟಿಗಳ ಜೊತೆ ಶಾಸಕ ಜಮೀರ್ ಅಹಮದ್ ಹುಟ್ಟುಹಬ್ಬ ಆಚರಣೆ

Public TV
2 Min Read

ಬೆಂಗಳೂರು: ಮಂಗಳವಾರ ಜೆಡಿಎಸ್ ರೆಬಲ್ ಶಾಸಕ ಜಮೀರ್ ಅಹಮದ್ ಖಾನ್ ಅವರ 51ನೇ ವರ್ಷದ ಹುಟ್ಟು ಹಬ್ಬದ ಸಮಾರಂಭವು ಚಾಮರಾಜಪೇಟೆಯ ಜೆ ಜೆ ನಗರ ಬಸ್ ನಿಲ್ದಾಣದಲ್ಲಿ  ಅದ್ಧೂರಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಸೊಹೈಲ್ ಖಾನ್, ಸೋನು ಸೂದ್, ಅರ್ಬಾಜ್ ಖಾನ್, ಗುಲ್ಶನ್ ಗ್ರೋವರ್, ತೆಲುಗು ಹಾಸ್ಯ ನಟ ಆಲಿ ಭಾಗಿಯಾಗಿದ್ದರು. ಒಟ್ಟಿನಲ್ಲಿ ಬಾಲಿವುಡ್ ಸೆಲೆಬ್ರೆಟಿಗಳ ಮಧ್ಯೆ ಖಾನ್ ಕತ್ತಿಯಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು.

ಬಳಿಕ ಮಾತನಾಡಿದ ಜಮೀರ್, 51 ವರ್ಷದ ಹುಟ್ಟು ಹಬ್ಬದ ಸಮಾರಂಭಕ್ಕೆ ಸಲ್ಮಾನ್ ಖಾನ್ ಬರಬೇಕಿತ್ತು. ಆದರೆ ಶೂಟಿಂಗ್ ಇದ್ದ ಕಾರಣ ಅವರು ಬರಲಿಲ್ಲ. ಅವರ ಸಹೋದರರನ್ನು ಕಳುಹಿಸಿದ್ದಾರೆ. ರಾಜಕೀಯ ಕಾರಣಕ್ಕೆ ಬಾಲಿವುಡ್ ನಟರನ್ನು ಕರೆಸಿಲ್ಲ. ನನ್ನ ಮೇಲಿನ ಪ್ರೀತಿಯಿಂದ ಈ ನಟರು ಬಂದಿದ್ದಾರೆ. ನಟರಿಂದ ಓಟು ಬರೋದಿಲ್ಲ. ಅಭಿಮಾನಿಗಳಿಗಾಗಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದೇನೆ ಅಂತ ಹೇಳಿದ್ರು.

ಇದೇ ವೇಳೆ, ಕಳೆದ ತಿಂಗಳವರೆಗೆ ನಾವು ಜೆಡಿಎಸ್ ನಲ್ಲೇ ಇರಲು ಬಯಸಿದ್ದೆವು. ಆದರೆ ಮಾಜಿ ಅಣ್ಣ ಕುಮಾರಸ್ವಾಮಿ ಅವರ ಲೂಸ್ ಟಾಕ್ ನಿಂದ ಪಕ್ಷ ಬಿಡಲು ತೀರ್ಮಾನ ಮಾಡಿದೆವು. ಯಾವುದೇ ಕಾರಣಕ್ಕೂ ಜೆಡಿಎಸ್ ಗೆ ವಾಪಸ್ ಹೋಗಲ್ಲ. ಇಮ್ರಾನ್ ಪಾಷಾ ನನ್ನ ಜೊತೆಯಲ್ಲೇ ಇದ್ದಾರೆ. ಬೇರೆ ಕೆಲಸದ ಕಾರಣ ಇಂದು ಬಂದಿಲ್ಲ. ನನ್ನ ಜೊತೆ ಇರುವ ನನ್ನ ಬೆಂಬಲಿಗರನ್ನು ಬಲವಂತವಾಗಿ ನಾನು ಇಟ್ಟುಕೊಂಡಿಲ್ಲ. ದೇವೇಗೌಡರು ನನ್ನ ರಾಜಕೀಯ ಗುರುಗಳು, ಕುಮಾರಸ್ವಾಮಿ ಅಲ್ಲ. ಹುಟ್ಟುಹಬ್ಬದಂದು ನಾನು ಈ ಹಿಂದೆಯೂ ದೇವೇಗೌಡರ ಮನೆಗೆ ಹೋಗಿಲ್ಲ. ಇಂದು ಹೋದರೆ ಬೇರೆ ಅರ್ಥ ಬರುತ್ತೆ, ಆ ಕಾರಣಕ್ಕಾಗಿ ಹೋಗಿಲ್ಲ. ದೇವೇಗೌಡರು ನನಗೆ ಕೆಟ್ಟದು ಮಾಡಲಿ, ಒಳ್ಳೆಯದು ಮಾಡಲಿ. ಹುಟ್ಟಿದ ಹಬ್ಬದಂದು ಅವರ ವಿರುದ್ಧ ಮಾತಾಡಲ್ಲ ಎಂದರು.

ಜಮೀರ್ ಅಹಮದ್ ಖಾನ್ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಅವರ ಪುತ್ರ ಜೈದ್ ಖಾನ್ ಬಾಲಿವುಡ್‍ಗೆ ಎಂಟ್ರಿ ನೀಡುತ್ತಿದ್ದಾರೆ. ಅವರಿಗೆ ಆತ್ಮೀಯ ಸ್ವಾಗತ ಕೊರುತ್ತೇನೆ ಅಂತ ನಟ ಸೊಹೈಲ್ ಖಾನ್ ತಿಳಿಸಿದರು.

ಜಮೀರ್ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಇಂದು ನಾವು ಶುಭಾಶಯ ಕೋರಲು ಬಂದಿದ್ದೇವೆ. ನೀವೆಲ್ಲಾ ಜಮೀರ್ ಅವರನ್ನು ತುಂಬಾ ಪ್ರೀತಿಸುತ್ತೀರಿ. ಅವರಿಗಾಗಿ ಸಾಕಷ್ಟು ಕೆಲಸ ಮಾಡಿದ್ದೀರಿ. ಇನ್ನು ಮುಂದೆಯೂ ಕೂಡ ಜಮೀರ್ ಅಹಮದ್ ಅವರಿಗೆ ಸಹಕಾರ ನೀಡುತ್ತೀರಿ ಎಂದು ಭಾವಿಸುತ್ತೇನೆ ಅಂತ ನಟ ಅರ್ಬಾಜ್ ಖಾನ್ ಹೇಳಿದ್ರು.

ಲಘು ಲಾಠಿ ಚಾರ್ಜ್: ಈಟಾ ಮಾಲ್ ಸರ್ಕಲ್ ನಿಂದ ಮೊದಲು ತೆರದ ವಾಹನದಲ್ಲಿ ಮೆರವಣಿಗೆ ಮಾಡಿ ಬಳಿಕ ಸಭೆ ಸೇರಲಾಯಿತು. ಈ ವೇಳೆ ಬಾಲಿವುಡ್ ಸ್ಟಾರ್ ಗಳನ್ನು ನೋಡಲು ಅಭಿಮಾನಗಳಿಂದ ನೂಕು ನುಗ್ಗಲು ಉಂಟಾಯಿತು. ಇದರಿಂದಾಗಿ ಪೊಲೀಸರಿಗೆ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಲಾಠಿ ರುಚಿ ತೋರಿಸಿದ್ರೂ ಅಭಿಮಾನಿಗಳು ಜಗ್ಗಲಿಲ್ಲ. ಕೊನೆಗೆ ಲಘು ಲಾಠಿ ಜಾರ್ಜ್ ಮಾಡಬೇಕಾಯಿತು. ಅಭಿಮಾನಿಗಳ ನೂಕು ನುಗ್ಗಲಿನಿಂದ ಚೇರ್ ಗಳು ಪುಡಿಪುಡಿಯಾಗಿದ್ದು, ಬ್ಯಾನರ್ ಗಳು ಹರಿದುಹೋಗಿವೆ.

 

Share This Article
Leave a Comment

Leave a Reply

Your email address will not be published. Required fields are marked *