ಕೈಮುಗಿಯುತ್ತೇನೆ ಜನರ ಸಾಲ ತೀರಿಸಪ್ಪ – ಮನ್ಸೂರ್‌ಗೆ ಜಮೀರ್ ಮನವಿ

Public TV
2 Min Read

ಬೆಂಗಳೂರು: ಐಎಂಎ ವಂಚನೆ ಹಗರಣದ ಬಗ್ಗೆ ಶಾಸಕ ರೋಷನ್ ಬೇಗ್ ಅವರು ಪತ್ರಿಕಾ ಗೋಷ್ಠಿ ನಡೆಸಿದ ಬೆನ್ನಲ್ಲೇ ಸಚಿವ ಜಮೀರ್ ಅಹಮದ್ ಅವರು ಕೂಡ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ತಾನು ಸಂಸ್ಥೆಯೊಂದಿಗೆ ಯಾವುದೇ ಬೇನಾಮಿ ಹಣದ ವ್ಯವಹಾರ ನಡೆಸಿಲ್ಲ. ಎಲ್ಲವೂ ದಾಖಲೆ ಇಟ್ಟುಕೊಂಡೆ ವ್ಯವಹಾರ ನಡೆಸಿದ್ದಾಗಿ ಸಚಿವ ಜಮೀರ್ ಅಹಮದ್ ಸ್ಪಷ್ಟನೆ ನೀಡಿದ್ದಾರೆ.

ನಾನು ಐಎಂಎ ಸಂಸ್ಥೆಯಿಂದ ಯಾವುದೇ ಸಾಲವನ್ನು ಪಡೆದುಕೊಂಡಿಲ್ಲ. ನನ್ನ ಆಸ್ತಿಯನ್ನ ಸಂಸ್ಥೆಗೆ ಸಂಪೂರ್ಣವಾಗಿ ಮಾರಾಟ ಮಾಡಿದ್ದೇನೆ. ಈ ಮಾರಾಟದ ವಿಚಾರವಾಗಿ ನಾನು ಸಂಸ್ಥೆಯಿಂದ 5 ಕೋಟಿ ರೂ. ಮುಂಗಡ ಹಣ ಪಡೆದಿದ್ದೇನೆ. 9 ಕೋಟಿ 38 ಲಕ್ಷ ರೂ.ಗೆ ಮಾರಾಟ ಮಾಡಿದ್ದೇನೆ. ಇದರ ತೆರಿಗೆಯನ್ನು ಕೂಡ ಸರ್ಕಾರಕ್ಕೆ ನಾನು ಪಾವತಿ ಮಾಡಿದ್ದು, ಯಾವುದೇ ರೀತಿಯಲ್ಲಿ ವಂಚನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಬಡ ಜನರು ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದ್ದು, ಕೈಮುಗಿಯುತ್ತೇನೆ ಬಂದು ಜನರ ಸಾಲ ತೀರಿಸಪ್ಪ ಎಂದು ಮನವಿ ಮಾಡಿದರು.

ಇಲ್ಲಿ ಯಾರೂ ಹರಿಶ್ಚಂದ್ರರು ಇಲ್ಲ, ಯಾವುದೇ ರೀತಿ ತಪ್ಪು ಮಾಡಿದ್ದರೆ ಅದನ್ನು ಒಪ್ಪಿಕೊಳ್ಳಬೇಕು. ಆದರೆ ನನ್ನ ವಿಚಾರದಲ್ಲಿ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಪ್ರಸಾರ ಆಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದೇನೆ. ನಾನು ರಿಚ್ಮಂಡ್ ಟೌನ್ ನಲ್ಲಿ ನನ್ನ ಆಸ್ತಿಯನ್ನು ಮಾರಾಟ ಮಾಡಿದ್ದೇನೆ. ಈ ಕುರಿತು ಸೇಲ್ ಮಾಹಿತಿ ನನ್ನ ಬಳಿ ಇದೆ. ಮನ್ಸೂರ್ ಬಳಿ ಯಾವುದೇ ಹಣ ಸಾಲ ಪಡೆದಿಲ್ಲ, ನನ್ನ ಆಸ್ತಿಯನ್ನೇ ಮಾರಾಟ ಮಾಡಿದ್ದೇನೆ. ಎಲ್ಲವೂ ಪಾರದರ್ಶಕ ವ್ಯವಹಾರ ಮಾಡಿದ್ದೇನೆ ಎಂದರು.

ರಾಜಕೀಯ ನಿವೃತ್ತಿ:
ಸದ್ಯ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ(ಎಸ್‍ಐಟಿ) ನಡೆಸುತ್ತಿದ್ದು, ತನಿಖೆಯನ್ನ ಸಿಬಿಐಗೆ ನೀಡಲು ಸಿಎಂ ಕುಮಾರಸ್ವಾಮಿ ಅವರು ಅಂತಿಮ ತೀರ್ಮಾನ ಮಾಡುತ್ತಾರೆ. ಸದ್ಯ ಎಸ್‍ಐಟಿ ತನಿಖೆಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ನಮ್ಮ ಪಕ್ಷದ ನಾಯಕರಾದ ರೋಷನ್ ಬೇಗ್ ಅವರ ಹೆಸರು ಕೇಳಿ ಬಂದಿರುವರಿಂದ ಆ ಕುರಿತು ತನಿಖೆ ಆಗುತ್ತದೆ. ನನ್ನ ಬಗ್ಗೆಯೂ ತನಿಖೆ ನಡೆಲಿದೆ. ನಾವು ತನಿಖೆಗೆ ಸಹಕಾರ ನೀಡುತ್ತೇವೆ. ಯಾವುದೇ ಆರೋಪ ಸತ್ಯಾಂಶ ತನಿಖೆಯ ಬಳಿಕಷ್ಟೇ ತೀರ್ಮಾನ ಮಾಡಲು ಸಾಧ್ಯ ಎಂದರು.

ಇದೇ ವೇಳೆ ಕಳೆದ ತಿಂಗಳ 26ನೇ ರಂದು ಮನ್ಸೂರ್ ಅವರನ್ನ ಭೇಟಿ ಮಾಡಿ ಮಾತನಾಡಿಸಿದ್ದೆ ಎಂದ ಅವರು, ಹೂಡಿಕೆ ಹಣ ಜನರಿಗೆ ಹಿಂದಿರುಗಿಸುವ ಬಗ್ಗೆ ಚರ್ಚೆ ನಡೆಸಿದ್ದೆ. ಆದರೆ ಆ ವೇಳೆ ಹಬ್ಬದ ಬಳಿಕ ಹಣ ಮರುಪಾವತಿ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಆ ವೇಳೆಗೆ ವಂಚನೆ ಬಗ್ಗೆ ಯಾವುದೇ ಮುನ್ಸೂಚನೆ ಇರಲಿಲ್ಲ. ಅಲ್ಲದೇ ಅವರು ಹೀಗೆ ಓಡಿ ಹೋಗುತ್ತಾರೆ ಎಂದು ತಿಳಿದಿರಲಿಲ್ಲ. ಅದೇ ದಿನ ಸಿಸಿಬಿ ಅಲೋಕ್ ಕುಮಾರ್ ಅವರು ಚರ್ಚೆ ನಡೆಸಿದ್ದರು ಎಂಬ ಮಾಹಿತಿ ಇದೆ. ನಾನು ಮನ್ಸೂರ್ ನಿಂದ ಸಾಲ ಪಡೆದಿರುವುದು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದರು.

ಬೇಗ್ ನಮ್ಮ ನಾಯಕರು:
ಜನರು ಹಣ ಕಟ್ಟಿ ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ಬಡವರ ಹಣ ಹಿಂದಿರುಗುವಂತೆ ಆತನಿಗೆ ಕೈ ಮುಗಿದು ಕೇಳಿ ಕೊಳ್ಳುತ್ತಿದ್ದೇನೆ ಎಂದು ಮಾಧ್ಯಮದ ಎದುರೇ ಕೈ ಮುಗಿದರು. ಅಲ್ಲದೇ ಮನ್ಸೂರ್ ಗೆ ಆಸ್ತಿ ಮಾರಾಟ ಮಾಡಿದ್ದಕ್ಕೆ ಪಶ್ಚಾತ್ತಾಪ ಇದೆ. ಅಲ್ಲದೇ ರೋಷನ್ ಬೇಗ್ ಹಾಗೂ ನನ್ನ ನಡುವೆ ಯಾವುದೇ ಅಸಮಾಧಾನ ಇಲ್ಲ. ನಾವು ಆತ್ಮೀಯರಿದ್ದೇವೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *