‘ಯುವಿ ಬೆನ್ನಿಗೆ ಧೋನಿ, ಕೊಹ್ಲಿ ಚೂರಿ ಹಾಕಿದ್ದರು’- ಯುವರಾಜ್ ಸಿಂಗ್ ತಂದೆ ಆರೋಪ

Public TV
2 Min Read

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಎಂಎಸ್ ಧೋನಿ ವಿರುದ್ಧ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಯುವರಾಜ್ ಸಿಂಗ್ ವೃತ್ತಿ ಜೀವನ ಸಂಕಷ್ಟದಲ್ಲಿದ್ದ ಸಮಯದಲ್ಲಿ ಈ ಇಬ್ಬರು ಆಟಗಾರರು ಬೆಂಬಲ ನೀಡಿರಲಿಲ್ಲ. ಯುವರಾಜ್ ಸಿಂಗ್ ಬೆನ್ನಿಗೆ ಸಾಕಷ್ಟು ಮಂದಿ ಚೂರಿ ಹಾಕಿದ್ದು, ಅದರಲ್ಲಿ ಧೋನಿ, ಕೊಹ್ಲಿ ಕೂಡ ಇದ್ದಾರೆ. ಅಲ್ಲದೇ ಅಂದು ಆಯ್ಕೆ ಸಮಿತಿ ಸದಸ್ಯರಾಗಿದ್ದ ಸರಣ್‍ದೀಪ್ ಸಿಂಗ್ ಕೂಡ ಯುವರಾಜ್ ಸಿಂಗ್ ಅವನರನ್ನು ತಂಡದಿಂದ ಕೈಬಿಡುವಂತೆ ಒತ್ತಾಯ ಮಾಡಿದ್ದರು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಇತ್ತೀಚೆಗೆ ಇನ್‍ಸ್ಟಾ ಲೈವ್‍ನಲ್ಲಿ ಮಾತನಾಡಿದ್ದ ಯುವಿ, ಮಾಜಿ ನಾಯಕ ಸೌರವ್ ಗಂಗೂಲಿ ಅವರ ನಾಯಕತ್ವದಲ್ಲಿ ಲಭಿಸಿದ್ದ ಬೆಂಬಲ ಧೋನಿ, ಕೊಹ್ಲಿರಿಂದ ಲಭಿಸಿರಲಿಲ್ಲ ಎಂದು ಹೇಳಿದ್ದರು. ಯುವಿರ ಅಭಿಪ್ರಾಯದ ಕುರಿತಂತೆ ಯೋಗರಾಜ್ ಸಿಂಗ್ ಅವರಿಗೆ ಪ್ರಶ್ನೆ ಎದುರಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿರುವ ಅವರು, ಇತ್ತೀಚೆಗಷ್ಟೇ ನಾನು ಕೋಚ್ ರವಿಶಾಸ್ತ್ರಿ ಅವರನ್ನು ಭೇಟಿ ಮಾಡಿದ್ದೆ. ಆ ಸಂದರ್ಭದಲ್ಲಿ ಅವರು ನನ್ನೊಂದಿಗೆ ಫೋಟೋಗ್ರಾಫ್ ಬೇಕೆಂದು ಕೇಳಿದ್ದರು. ಆಗ ನಾನು ಅವರನ್ನು ಬಳಿಗೆ ಕರೆದು ಟೀಂ ಇಂಡಿಯಾದ ಗ್ರೇಟ್ ಆಟಗಾರರ ಹೆಸರನ್ನು ಪ್ರಸ್ತಾಪಿಸಿ ಅಂತ ಆಟಗಾರರಿಗೆ ಉತ್ತಮ ಸೆಂಡ್ ಆಫ್ ನೀಡುವಂತೆ ಹೇಳಿದ್ದೆ. ಧೋನಿ, ಕೊಹ್ಲಿ ಅಥವಾ ರೋಹಿತ್ ಶರ್ಮಾ ಅವರು ನಿವೃತ್ತಿ ಘೋಷಣೆ ಮಾಡಿದ ಸಂದರ್ಭದಲ್ಲಿ ಆಟಗಾರರಿಗೆ ಅವರು ನೀಡಿರುವ ಕೊಡುಗೆ ಆಧರಿಸಿ ಸೆಂಡ್ ಆಫ್ ನೀಡಬೇಕು ತಿಳಿಸಿದ್ದಾಗಿ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಆಯ್ಕೆ ಸಮಿತಿ ಸದಸ್ಯರಾಗಿದ್ದ ಸರಣ್‍ದೀಪ್ ಸಿಂಗ್ ವಿರುದ್ಧ ಅಸಮಾಧಾನ ಹೊರ ಹಾಕಿರುವ ಯೋಗರಾಜ್ ಸಿಂಗ್ ಅವರು, ಸರಣ್‍ದೀಪ್ ಸಿಂಗ್ ನಿರಂತರವಾಗಿ ಯುವಿಯನ್ನು ತಂಡದಿಂದ ಕೈಬಿಡಬೇಕು ಎಂದು ಒತ್ತಡ ಹೇರಿದ್ದರು. ಆಯ್ಕೆ ಸಮಿತಿ ಪ್ರತಿ ಸಭೆಯಲ್ಲೂ ಅವರದ್ದು ಒಂದೇ ಮಾತಾಗಿತ್ತು. ಕ್ರಿಕೆಟ್ ಕುರಿತು ಎಬಿಸಿ ಗೊತ್ತಿರದ ವ್ಯಕ್ತಿಗಳನ್ನು ಆಯ್ಕೆ ಸಮಿತಿಗೆ ತೆಗೆದುಕೊಂಡ ಸಂದರ್ಭದಲ್ಲಿ ಅವರಿಂದ ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಯೋಗರಾಜ್ ಸಿಂಗ್ ಇಂತಹ ಆರೋಪ ಮಾಡುತ್ತಿರುವುದು ಇದೇ ಮೊದಲಲ್ಲ. 2011ರ ವಿಶ್ವಕಪ್ ಸಂದರ್ಭದಲ್ಲಿ ಸುರೇಶ್ ರೈನಾರನ್ನು ತಂಡಕ್ಕೆ ಆಯ್ಕೆ ಮಾಡಬೇಕು ಎಂದು ಧೋನಿ ಪ್ರಯತ್ನಿಸಿದ್ದಾಗಿ ಆರೋಪಿಸಿದ್ದರು. ಯುವಿ ಉತ್ತಮ ಪ್ರದರ್ಶನ ನೀಡಿದರೆ ತಮಗೆ ಉತ್ತಮ ಹೆಸರು ಬರುವುದಿಲ್ಲ ಎಂಬ ಕಾರಣದಿಂದ ಈ ರೀತಿ ಮಾಡಿದ್ದರು ಎಂದು ಯೋಗರಾಜ್ ಸಿಂಗ್ ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *