ಹುಟ್ಟುಹಬ್ಬದ ಮುನ್ನವೇ ‘ಯುವರತ್ನ’ನಿಗೆ ಸ್ಪೆಷಲ್ ಗಿಫ್ಟ್

Public TV
2 Min Read

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಇನ್ನೇನು 1 ದಿನ ಬಾಕಿ ಇದೆ. ಆದರೆ ಜನ್ಮದಿನ ಮುನ್ನವೇ ‘ಯುವರತ್ನ’ ಚಿತ್ರತಂಡ ಅಪ್ಪುಗೆ ಗಿಫ್ಟ್ ಕೊಟ್ಟಿದೆ.

ಪುನೀತ್ ಹುಟ್ಟುಹಬ್ಬದ ಹಿನ್ನೆಲೆ ಅಭಿಮಾನಿಗಳಲ್ಲಿ ಸಂಭ್ರಮ ಜೋರಾಗಿದೆ. ಈಗಾಗಲೇ ತಮ್ಮ ನೆಚ್ಚಿನ ಹೀರೋಗೆ ಅಭಿನಂದನೆಗಳ ಮಹಾಪೂರವನ್ನೇ ಅಭಿಮಾನಿಗಳು ಹರಿಸಿದ್ದಾರೆ. ಪುನೀತ್ ಸಿನಿಮಾಗಳ ವಿವಿಧ ಪೋಸ್ಟರ್ ಗಳನ್ನು ರೆಡಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಖುಷಿ ಪಡುತ್ತಿದ್ದಾರೆ.

ಈ ಮಧ್ಯೆ ಪುನೀತ್ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳಿಗೆ ಉಡುಗೊರೆ ನೀಡಲು ಚಿತ್ರರಂಗ ಕೂಡ ಸಜ್ಜಾಗಿದೆ. ಇತ್ತ ‘ಯುವರತ್ನ’ ಚಿತ್ರತಂಡ ಇಂದು ಸಂಜೆ ಚಿತ್ರದ ಡೈಲಾಗ್ ಟೀಸರ್ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಅತ್ತ ಅಪ್ಪು ಹುಟ್ಟುಹಬ್ಬದ ದಿನದಂದು ‘ಜೇಮ್ಸ್’ ಚಿತ್ರತಂಡ ಕೂಡ ಮೋಷನ್ ಪೋಸ್ಟರ್ ರಿಲೀಸ್ ಮಾಡಲು ಮುಂದಾಗಿದ್ದು, ಅಭಿಮಾನಿಗಳಿಗೆ ಡಬಲ್ ಖುಷಿ ನೀಡಲು ಸಿದ್ಧತೆ ನಡೆಸಿದೆ.

‘ಯುವರತ್ನ’ ಸಿನಿಮಾದ ಎರಡನೆಯ ಟೀಸರ್ ಬಿಡುಗಡೆ ಮಾಡುವುದಾಗಿ ತಿಳಿಸಿದ್ದ ಚಿತ್ರತಂಡ, ಅದಕ್ಕೂ ಮೊದಲೇ ಪವರ್ ಸ್ಟಾರ್ ಗಾಗಿ ‘ಯುವರತ್ನ’ದ ಪವರ್‌ಫುಲ್ ಸಿಡಿಪಿ (ಕಾಮನ್ ಡಿಸ್‍ಪ್ಲೇ ಪಿಕ್ಚರ್) ಬಿಡುಗಡೆ ಮಾಡಿದೆ. ಈ ಸಿಡಿಪಿಯನ್ನ ಪುನೀತ್ ಅಭಿಮಾನಿಗಳು ತಮ್ಮ ಫ್ಯಾನ್ ಪೇಜ್‍ಗಳಲ್ಲಿ ಶೇರ್ ಮಾಡಿಕೊಂಡು ಖುಷಿ ಪಟ್ಟಿದ್ದಾರೆ.

ಪುನೀತ್ 18 ವರ್ಷಗಳ ಹಿಂದೆ ಮೊದಲು ನಾಯಕರಾಗಿ ನಟಿಸಿದ್ದ ‘ಅಪ್ಪು’ ಚಿತ್ರದ ಗೆಟಪ್‍ನಲ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಯುವರತ್ನ ಚಿತ್ರತಂಡ ಮಾಹಿತಿ ನೀಡಿತ್ತು. ಆ ಸಿನಿಮಾವನ್ನು ನೆನಪಿಸುವ ಲುಕ್‍ನಲ್ಲಿಯೇ ಚಿತ್ರತಂಡ ಸಿಡಿಪಿ ಶೇರ್ ಮಾಡಿಕೊಂಡಿದೆ. ಕರ್ನಾಟಕದ ಧ್ವಜದ ಎರಡು ಬಣ್ಣಗಳ ನಡುವೆ ಪುನೀತ್ ಅವರ ವಿವಿಧ ಸಿನಿಮಾಗಳ ಕಟೌಟ್ ಹಾಗೂ ಪೋಸ್ಟರ್ ಚಿತ್ರಗಳನ್ನು ಬಳಸಿ ಸಿಡಿಪಿಯನ್ನ ಚಿತ್ರತಂಡ ರೆಡಿಮಾಡಿದೆ. ಜೊತೆಗೆ ಸಿಡಿಪಿಯಲ್ಲಿ ‘ಹ್ಯಾಪಿ ಬರ್ಥ್ ಡೇ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್’ ಎಂದು ಶುಭ ಹಾರೈಸಲಾಗಿದ್ದು, ಪುನೀತ್‍ಗೆ ಬಾಕ್ಸ್ ಆಫೀಸ್ ಬಾದ್‍ಷಾ ಎಂಬ ಬಿರುದು ನೀಡಿ ಶ್ಲಾಘಿಸಲಾಗಿದೆ.

ನಿರ್ದೇಶಕ ಸಂತೋಷ್ ಆನಂದರಾಮ್ ಈ ಹೊಸ ಪ್ರೊಫೈಲ್ ಪಿಕ್ಚರ್ ರಿಲೀಸ್ ಮಾಡಿದ್ದಾರೆ. ‘ಯುವರತ್ನ’ ಚಿತ್ರದ ಡೈಲಾಗ್ ಪೋಸ್ಟರ್ ಸೋಮವಾರ ಸಂಜೆ 6.03ಕ್ಕೆ ಬಿಡುಗಡೆಯಾಗಲಿದ್ದು, ಇದು ಪವರ್ ಪ್ಯಾಕ್ಡ್ ಡೈಲಾಗ್ ಟೀಸರ್ ಎಂದು ಚಿತ್ರತಂಡ ತಿಳಿಸಿದೆ. ಅಷ್ಟೇ ಅಲ್ಲದೇ ಇದು ಪವರ್ ಸ್ಟಾರ್ ಅವರ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳಿಗೆ ಡೆಡಿಕೇಟ್ ಮಾಡುತ್ತಿರುವುದಾಗಿ ಹೇಳಿಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *