ನೆರೆಯಿಂದ ಸೂರು ಕಳೆದುಕೊಂಡಿದ್ದ ಅಜ್ಜ, ಅಜ್ಜಿಗೆ ಮನೆ ನಿರ್ಮಿಸಿ ಆಸರೆಯಾದ ಯುವಾ ಬ್ರಿಗೇಡ್

Public TV
3 Min Read

– ಸಂಪೂರ್ಣ ನೆಲಸಮವಾಗಿತ್ತು ಗುಡಿಸಲು
– ನ. 15 ರಂದು ಮನೆಯ ಗೃಹಪ್ರವೇಶ
– ಚಕ್ರವರ್ತಿ ಸೂಲಿಬೆಲೆಯವರಿಂದ ಕೀ ಹಸ್ತಾಂತರ

ಶಿವಮೊಗ್ಗ: ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ ಇನ್ನು ಸರಿಯಾಗಿ ಪರಿಹಾರದ ಹಣ ವಿತರಣೆ ಮಾಡಿಲ್ಲ. ಆದರೆ ಶಿವಮೊಗ್ಗದಲ್ಲಿ ನೆರೆ ಸಂತ್ರಸ್ತ ವೃದ್ಧ ದಂಪತಿಗೆ ಯುವಾ ಬ್ರಿಗೇಡ್ ಸದಸ್ಯರು ಮನೆ ನಿರ್ಮಿಸಿಕೊಟ್ಟಿದ್ದಾರೆ.

ರಾಜ್ಯದಲ್ಲಿ ಕಳೆದ ಎರಡು ತಿಂಗಳ ಹಿಂದಷ್ಟೇ ಕಂಡು ಕೇಳರಿಯದ ಭೀಕರ ಪ್ರವಾಹ ಬಂದು ಸಾಕಷ್ಟು ಹಾನಿ ಮಾಡಿತ್ತು. ಮಳೆ ಹೆಚ್ಚಾದ ಕಾರಣ ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿಯೂ ಕೂಡ ತುಂಗಾ ನದಿ ಉಕ್ಕಿ ಹರಿದು, ರಾಜಕಾಲುವೆಗಳ ಮೂಲಕ ಅದೆಷ್ಟೋ ಬಡಾವಣೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಈ ಪ್ರವಾಹದಲ್ಲಿ ನೂರಾರು ಮನೆಗಳು ನೆಲಕಚ್ಚಿದ್ದವು. ನೆರೆಯಿಂದ ನಲುಗಿದ ಜನರು ಅಕ್ಷರಶಃ ಬೀದಿಗೆ ಬಿದ್ದಿದ್ದರು. ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾ ಬಡಾವಣೆಯ ನಿವಾಸಿ ಮುನಿಯಪ್ಪ ಹಾಗೂ ನರಸಮ್ಮ ವೃದ್ಧ ದಂಪತಿ ಕೂಡ ನೆರೆ ಅವಘಡಕ್ಕೆ ಮನೆ ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದಿದ್ದರು. ಇದನ್ನೂ ಓದಿ:ಮಿಮ್ಸ್ ನೋಡಿ ಯುವ ಬ್ರಿಗೇಡ್‍ನಿಂದ ಚಾಮುಂಡಿ ಬೆಟ್ಟದಲ್ಲಿ ಸ್ವಚ್ಛತಾ ಕಾರ್ಯ

ನೆರೆಗೆ ಅಜ್ಜ-ಅಜ್ಜಿಯ ಮನೆ ಸಂಪೂರ್ಣವಾಗಿ ನೆಲಸಮವಾಗಿತ್ತು. ಇದ್ದ ಒಂದು ಗುಡಿಸಲು ಕಳೆದುಕೊಂಡು ಪಡಬಾರದ ಕಷ್ಟ ಪಡುವಂತಾಗಿತ್ತು. ಇರುವ ಒಬ್ಬ ಮಗ ತನಗೂ ಇದಕ್ಕೂ ಸಂಬಂಧವಿಲ್ಲವೆಂಬಂತೆ ಇದ್ದುಬಿಟ್ಟಿದ್ದನು. ಇಂತಹ ಸಂದರ್ಭದಲ್ಲಿ ಶಿವಮೊಗ್ಗದ ಯುವಾ ಬ್ರಿಗೇಡ್ ಸಂಘಟನೆ ತಂಡ ಇವರ ನೆರವಿಗೆ ಧಾವಿಸಿತ್ತು. ಇದನ್ನೂ ಓದಿ:ಯುವ ಬ್ರಿಗೇಡ್‍ನಿಂದ ಕುಮಾರ ಸಂಸ್ಕಾರ – ಬೆಚ್ಚಿ ಬೀಳುವ ಮಟ್ಟದಲ್ಲಿ ತ್ಯಾಜ್ಯದ ರಾಶಿ ಪತ್ತೆ

ಯುವಾ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನ ತಂಡದ ಸದಸ್ಯರು ಈ ಅಜ್ಜ-ಅಜ್ಜಿಯ ನೆರವಿಗೆ ಧಾವಿಸಿದ್ದು, ಗುಡಿಸಲು ಬಿದ್ದು ಜೀವನವೇ ಹೋಯ್ತು ಎಂದುಕೊಂಡಿದ್ದ ವೃದ್ಧ ದಂಪತಿಗೆ ಆಸರೆಯಾಗಿ ಮನೆ ನಿರ್ಮಿಸಿಕೊಟ್ಟಿದ್ದಾರೆ. ಸುಮಾರು 1.25 ಲಕ್ಷ ರೂ. ವೆಚ್ಚದಲ್ಲಿ ಯಾವುದಕ್ಕೂ ಕೊರತೆಯಾಗದಂತೆ, ಅಚ್ಚುಕಟ್ಟಾಗಿ ಮನೆ ನಿರ್ಮಿಸಿಕೊಟ್ಟು ಸಾರ್ಥಕತೆ ಮೆರೆದಿದ್ದಾರೆ. ಸರ್ಕಾರದಿಂದ ಆಗದ ಕೆಲಸವನ್ನು ಯುವಾ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನ ತಂಡದ ಸದಸ್ಯರು ಮಾಡಿ ತೋರಿಸಿದ್ದಾರೆ. ಮಹಾ ಪ್ರವಾಹ-ಯುವಾ ಸಹಾಯ ಯೋಜನೆಯನ್ನ ಹಾಕಿಕೊಂಡು ಸಹಾಯದ ಹಸ್ತ ಚಾಚಿದ್ದಾರೆ.

ನೆರೆಯಿಂದ ಸಂತ್ರಸ್ತಗೊಂಡರಿಗೆ ಸರಿಯಾಗಿ ಪರಿಹಾರ ಇನ್ನೂ ವಿತರಣೆ ಆಗಿಲ್ಲ. ಹೀಗಿರುವಾಗ ಸಿ.ಎಂ ಯಡಿಯೂರಪ್ಪ ಅವರ ತವರು ಜಿಲ್ಲೆಯಲ್ಲಿಯೇ ದಂಪತಿಗೆ ಮನೆ ಕಟ್ಟಿಸುವ ಮೂಲಕ ಯುವಾ ಬ್ರಿಗೇಡ್ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನೂ ಓದಿ:ಪ್ರತಿನಿತ್ಯ 15 ನಿಮಿಷ ಫೋನಿನಲ್ಲಿ ಕನ್ನಡ ಕಲಿಯಿರಿ – ಯುವಾ ಬ್ರಿಗೇಡಿನಿಂದ ಕನ್ನಡ ಸುಗಂಧ

ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಈ ರೀತಿಯ ಮನೆ ನಿರ್ಮಿಸಿಕೊಡಲು ಯುವಾ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನ ತಂಡದ ಪ್ಲ್ಯಾನ್ ರೂಪಿಸಿಕೊಂಡಿದ್ದೇವೆ. ಈಗಾಗಲೇ ಇದಕ್ಕೆ ಪಟ್ಟಿಯೂ ಕೂಡ ಸಿದ್ಧಪಡಿಸಿಕೊಂಡಿದ್ದೇವೆ ಎಂದು ಸಂಚಾಲಕ ಹರ್ಷ ತಿಳಿಸಿದ್ದಾರೆ.

ಕಳೆದೆರೆಡು ತಿಂಗಳಿನಿಂದ ಮಳೆಗೆ ಬಿದ್ದಿದ್ದ ಗುಡಿಸಲು ಮುಂಭಾಗದಲ್ಲೇ ಇರುವ ದೇವಾಲಯದಲ್ಲಿ ಈ ವೃದ್ಧ ದಂಪತಿ ವಾಸವಾಗಿದ್ದು, ಅಲ್ಲಿಯೇ ಜೀವನದ ಬಂಡಿ ಸಾಗಿಸುತ್ತಿದ್ದಾರೆ. ನವೆಂಬರ್ 15ರ ಶುಕ್ರವಾರದಂದು ಈ ಮನೆಯ ಗೃಹಪ್ರವೇಶ ನಡೆಸಲು ಯುವಾ ಬ್ರಿಗೇಡ್ ತಂಡದ ಸದಸ್ಯರು ಉತ್ಸುಕರಾಗಿದ್ದು, ಅಂದು ಇದಕ್ಕೆಲ್ಲಾ ಬೆನ್ನೆಲುಬಾಗಿರುವ ಹಾಗೂ ಈ ಯೋಜನೆಯ ಸೂತ್ರದಾರರಾಗಿರುವ ಚಕ್ರವರ್ತಿ ಸೂಲಿಬೆಲೆ ಅವರಿಂದ ನೂತನ ಮನೆಯ ಬೀಗದ ಕೈಯನ್ನು ವೃದ್ಧ ದಂಪತಿ ಹಸ್ತಾಂತರಿಸುವುದಾಗಿ ಸದಸ್ಯರು ಹೇಳಿದ್ದಾರೆ.

ವಿದ್ಯುತ್ ಸಂಪರ್ಕ ಕೂಡ ಇಲ್ಲದ ಗುಡಿಸಲಲ್ಲಿ ವಾಸವಾಗಿ ಅದನ್ನೂ ನೆರೆಯಿಂದ ಕಳೆದುಕೊಂಡಿದ್ದ ಅಜ್ಜ-ಅಜ್ಜಿಯ ನೂತನ ಮನೆಗೆ ವಿದ್ಯುತ್ ಸಂಪರ್ಕವನ್ನ ಕೂಡ ಕೊಡಿಸಲಾಗಿದೆ. ನಗರದ ಯುವಾ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನ ತಂಡದ ಸದಸ್ಯರ ಆಸಕ್ತಿಯಿಂದಾಗಿ ಇದೀಗ ತಮ್ಮ ಬಾಳ ಪಯಣದ ಇಳಿ ಸಂಜೆಯಲ್ಲಿರುವ ವೃದ್ಧ ದಂಪತಿ ಬೆಳಕು ಕಾಣುವಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *