ಕೊಡಗಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಯುವಕರಿಂದ ಬೈಕ್ ರ‍್ಯಾಲಿ

Public TV
2 Min Read

ಮಡಿಕೇರಿ: ಪ್ರವಾಸಿ ತಾಣವಾಗಿರುವ ಕೊಡಗಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಸ್ಯಾಂಡಲ್ ವುಡ್ ನಟ- ನಟಿಯರಿಂದ ಹಿಡಿದು ಎಲ್ಲರೂ ಟ್ವಿಟ್ಟರ್ ನಲ್ಲಿ ಅಭಿಯಾನ ನಡೆಸಿದ್ದರು. ಈ ಬೆನ್ನಲ್ಲೇ ಇದೀಗ ಬೆಂಗಳೂರಿನಲ್ಲಿ ನೆಲೆಸಿರುವ ಕೊಡಗು ಮೂಲದ ಯುವಕರ ತಂಡವೊಂದು ಬೈಕ್ ರ‍್ಯಾಲಿ ಮಾಡುವ ಮೂಲಕ ಜಿಲ್ಲೆಗೆ ಆಗಮಿಸಿ ಮಲ್ಟಿ ಸ್ಪೆಷಾಲಿಟಿ ಅಸ್ಪತ್ರೆ ಬೇಕು ಎನ್ನುವ ಅಭಿಯಾನಕ್ಕೆ ಕೈ ಜೋಡಿಸಿದೆ.

ಹೌದು. ಕೊಡವ ರೈಡರ್ಸ್ ಕ್ಲಬ್ ಯುವಕರು ಕೊಡಗು ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಲ್ಪಿಸಬೇಕೆಂದು ಒತ್ತಾಯಿಸಿ ಬೆಂಗಳೂರಿನಿಂದ ಮಡಿಕೇರಿಯವರೆಗೆ ಬೈಕ್ ರ‍್ಯಾಲಿ ನಡೆಸಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. 70 ಕ್ಕೂ ಹೆಚ್ಚಿನ ಯುವಕರ ತಂಡ ಬೆಂಗಳೂರಿನಿಂದ ಮೈಸೂರು ಗೋಣಿಕೊಪ್ಪ, ವಿರಾಜಪೇಟೆ ಮಾರ್ಗವಾಗಿ ಮಡಿಕೇರಿಗೆ ಆಗಮಿಸಿ ಕೊಡಗು ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: #weneedemergencyhospitalinkodagu – ಕೊಡಗಿನಲ್ಲಿ ಆಸ್ಪತ್ರೆಗಾಗಿ ಅಭಿಯಾನ

ಮಂಜಿನ ನಗರಿ ಮಡಿಕೇರಿಗೆ ಸಾವಿರಾರು ಪ್ರವಾಸಿಗರು ಬಂದು ಅಪಘಾತ ಸಂಭವಿಸಿದಾಗ ಆಸ್ಪತ್ರೆಯಲ್ಲಿ ಯಾವುದೇ ಸೌಲಭ್ಯ ಇಲ್ಲದೆ ಅನೇಕರು ಜೀವ ಕಳೆದುಕೊಂಡಿದ್ದಾರೆ. ಕೊಡಗಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ಅರಂಭವಾದ ಹಿನ್ನೆಲೆಯಲ್ಲಿ ನಮ್ಮ ತಂಡ ಬೈಕ್ ರೈಡ್ ಮಾಡುವ ಮೂಲಕ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿರುವುದಾಗಿ ಬೈಕ್ ರೈಡರ್ ಸುಬ್ಬಯ್ಯ ತಿಳಿಸಿದ್ದಾರೆ. ಇದನ್ನೂ ಓದಿ: ಕೊಡಗು ಜಿಲ್ಲೆಗೆ ಆಸ್ಪತ್ರೆ ಅಭಿಯಾನಕ್ಕೆ ಸ್ಯಾಂಡಲ್‍ವುಡ್ ಬೆಂಬಲ

ಮಡಿಕೇರಿಯಲ್ಲಿ ಜಿಲ್ಲಾಸ್ಪತ್ರೆ ಇದೆಯಾದರೂ ಅದು ಹೆಸರಿಗೆ ಮಾತ್ರ ಎಂಬಂತಾಗಿದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಾಗ ಖುದ್ದು ಇಲ್ಲಿನ ವೈದ್ಯರೇ ಮಂಗಳೂರು, ಮೈಸೂರು ಅಥವಾ ಬೆಂಗಳೂರಿಗೆ ರೋಗಿಗಳನ್ನು ಕರೆದೊಯ್ಯುವಂತೆ ಸೂಚನೆ ನೀಡುತ್ತಾರೆ. ಇದರಿಂದ ರೋಗಿಗಳು ಮಾರ್ಗ ಮಧ್ಯೆಯೇ ಪ್ರಾಣ ಕಳೆದುಕೊಳ್ಳುತ್ತಿದ್ದು, ಕುಟುಂಬ ವರ್ಗ ಚಿಂತೆಗೀಡಾಗುತ್ತಿದೆ. ಜಿಲ್ಲೆಯಲ್ಲಿ ಸಾವಿರಾರು ಕಾರ್ಮಿಕರಿದ್ದಾರೆ. ಲಕ್ಷಾಂತರ ಪ್ರವಾಸಿಗರು ಬರುತ್ತಿದ್ದಾರೆ. ಕಾರ್ಮಿಕರು ವನ್ಯಜೀವಿಗಳ ದಾಳಿಗೆ ಅಥವಾ ಇನ್ಯಾವುದೇ ಅನಾಹುತಗಳಿಗೆ ಸಿಲುಕಿ ಚಿಂತಾಜನಕ ಸ್ಥಿತಿಗೆ ತಲುಪಿದರೆ ಅಗತ್ಯ ಚಿಕಿತ್ಸೆ ಜಿಲ್ಲೆಯಲ್ಲಿ ಲಭ್ಯವಿಲ್ಲ. ಅಪಘಾತದಲ್ಲಿ ಜನ ಚಿಂತಾಜನಕ ಸ್ಥಿತಿಯಲ್ಲಿ ನರಳಿದರೆ ಜಿಲ್ಲೆಯ ಆಸ್ಪತ್ರೆಗಳಲ್ಲಿ ಬದುಕಿಸುವ ಸೌಲಭ್ಯಗಳಿಲ್ಲ. ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳನ್ನು ಕಂಡಾಕ್ಷಣ ಅಸಹಾಯಕತೆ ವ್ಯಕ್ತಪಡಿಸುವ ಜಿಲ್ಲೆಯ ವೈದ್ಯಕೀಯ ವರ್ಗ ಹೊರ ಜಿಲ್ಲೆಯ ಕಡೆ ಬೆರಳು ಮಾಡುತ್ತದೆ. ಈ ರೀತಿ ಹೊರ ತೆರಳಿದ ಬಹುತೇಕ ರೋಗಿಗಳು, ಗಾಯಾಳುಗಳು ಮರಳಿದ್ದು ವಿರಳ. ದಾರಿ ಮಧ್ಯದಲ್ಲಿ ಮರಣವನ್ನು ಅಪ್ಪಿದ್ದೇ ಹೆಚ್ಚು ಎಂದು ಕ್ಲಬ್‍ನ ಸದಸ್ಯರು ವ್ಯವಸ್ಥೆಯ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ಒಟ್ಟಿನಲ್ಲಿ ಕೊಡಗು ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಬೆಂಗಳೂರಿನಲ್ಲಿ ನೆಲೆಸಿರುವ ಯುವಕರ ತಂಡದಿಂದ ಹಿಡಿದು ಸ್ಯಾಂಡಲ್‍ವುಡ್‍ನ ವರೆಗೂ ಪಸರಿಸಿದೆ.

Share This Article
Leave a Comment

Leave a Reply

Your email address will not be published. Required fields are marked *