ಹೆಚ್.ವೈ ಮೇಟಿ ಬಗ್ಗೆ ಅವಹೇಳನಕಾರಿ ಪೋಸ್ಟ್ – ಯುವಕ ಪೊಲೀಸರ ವಶಕ್ಕೆ

Public TV
1 Min Read

ಬಾಗಲಕೋಟೆ: ಶಾಸಕ ಹೆಚ್ ವೈ ಮೇಟಿ ಬಗ್ಗೆ ಅವಹೇಳನಕಾರಿಯಾಗಿ ಬರೆದು ಭಾವಚಿತ್ರ ಸಮೇತ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ ಯುವಕನೋರ್ವನನ್ನು ಬಾಗಲಕೋಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಾಗಲಕೋಟೆಯ ನವನಗರ ಠಾಣೆ ಪೊಲೀಸರು ಡ್ಯಾನಿಯಲ್ ನ್ಯೂಟನ್ ಎಂಬ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸ್ನೇಕ್ ಡ್ಯಾನಿಯಲ್ ಎಂದೇ ಹೆಸರುವಾಸಿಯಾಗಿರುವ ಡ್ಯಾನಿಯಲ್ ಮೂಲತಃ ಬಾಗಲಕೋಟೆಯ ಯುವಕ. ಹವ್ಯಾಸಿ ಹಾವು ಹಿಡಿಯುವ ವ್ಯಕ್ತಿಯಾಗಿದ್ದು, ತನ್ನ ಫೇಸ್‍ಬುಕ್ ಅಕೌಂಟ್‍ನಲ್ಲಿ ಶಾಸಕ ಮೇಟಿ ಅವರ ಬಗ್ಗೆ ಅವಹೇಳನಕಾರಿ ಭಾವಚಿತ್ರ ಹಾಕಿದ್ದಾನೆ. ಇಂತವರನ್ನು ಮಂದಿರ, ಮಸೀದಿ ಚರ್ಚ್‍ಗಳ ಧಾರ್ಮಿಕ ಕಾರ್ಯಕ್ಕೆ ಆಹ್ವಾನಿಸೋದು ಸರಿಯಲ್ಲ. ಹಾಗಂತ ನನಗೆ ಅವರ ಬಗ್ಗೆ ವ್ಯಯಕ್ತಿಕ ದ್ವೇಷವಿಲ್ಲ. ಸಮಾಜ ತಲೆತಗ್ಗಿಸುವಂತ ಕೃತ್ಯವೆಸಗಿದ ಇಂತವರನ್ನು ಧಾರ್ಮಿಕ ಸ್ಥಳಕ್ಕೆ ಆಹ್ವಾನಿಸಿ, ಪವಿತ್ರ ಸ್ಥಳವನ್ನು ಅಪವಿತ್ರ ಮಾಡಬೇಡಿ ಎಂಬ ಕಳಕಳಿ ಎಂದು ಪೋಸ್ಟ್ ಮಾಡಿದ್ದಾನೆ.

ಹಿಂದು, ಮುಸ್ಲಿಮ್, ಕ್ರಿಶ್ಚಿಯನ್ ಸಹೋದರರೆ ಎಷ್ಟು ಜನ ಚಿತ್ರದಲ್ಲಿರುವ ವ್ಯಕ್ತಿಯನ್ನು ಪವಿತ್ರ ಸ್ಥಳಕ್ಕೆ ಆಹ್ವಾನಿಸುತ್ತೀರಿ? ಈ ಬಗ್ಗೆ ಪ್ರಾಮಾಣಿಕವಾಗಿ ಕಮೆಂಟ್ ಮಾಡಿ ಎಂದು ಉಲ್ಲೇಖ ಮಾಡಿದ್ದಾನೆ. ಇಂತವರನ್ನು ಆಹ್ವಾನಿಸಿದರೆ ಸಮಾಜಕ್ಕೆ ಅದರಲ್ಲೂ ಯುವಕರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ದೇಶಭಕ್ತ ನಾಗರಿಕರು ಇದನ್ನು ಅರ್ಥೈಸಿಕೊಂಡಿದ್ದೀರಿ ಎಂಬ ಭರವಸೆ ಇದೆ. ಇನ್‍ಕಿಲಾಬ್ ಜಿಂದಾಬಾದ್ ಎಂದು ಬರೆದಿದ್ದಾನೆ.

ಹೆಚ್ ವೈ ಮೇಟಿಯವರನ್ನು ಬಾಗಲಕೋಟೆಯ ಹರನಸಿಕಾರಿ ಕಾಲೋನಿಯಲ್ಲಿನ ಚರ್ಚ್ ನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ರೀತಿ ಬರೆದಿದ್ದಾನೆ ಎನ್ನಲಾಗಿದೆ. ಇದನ್ನು ಗಮನಿಸಿದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮೇಟಿ ಬೆಂಬಲಿಗರು ಪೊಲೀಸರಿಗೆ ತಿಳಿಸಿದ್ದಾರೆ. ಅಹಿತಕರ ಘಟನೆ ತಡೆಯುವ ಹಿನ್ನೆಲೆಯಲ್ಲಿ ಸ್ನೇಕ್ ಡ್ಯಾನಿಯಲ್ ನನ್ನು ನವನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸ್ನೇಕ್ ಡ್ಯಾನಿಯಲ್ ಹಾವು ಹಿಡಿಯೋದಕ್ಕೆ ಹೆಸರುವಾಸಿಯಾಗಿದ್ದಾನೆ. ಹಾವಿನ ಬಗ್ಗೆ ಮಕ್ಕಳಿಗೆ, ಸಾರ್ವಜನಿಕರಿಗೆ ಅರಿವು ಮೂಡಿಸೋದರ ಜೊತೆಗೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾನೆ. ಈತನ ಸದ್ಯದ ಪೋಸ್ಟ್ ಜಿಲ್ಲಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *