9ನೇ ಕ್ಲಾಸ್ ವಿದ್ಯಾರ್ಥಿ ಶಶಾಂಕ್ ಕೊಲೆ: ಬೆಟ್ಟಿಂಗ್ ಹಣಕ್ಕಾಗಿ ಕೊಲೆ ಮಾಡಿದ್ದ ಆರೋಪಿಯ ಬಂಧನ

Public TV
2 Min Read

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ನಡೆದಿದ್ದ 9ನೇ ತರಗತಿ ವಿದ್ಯಾರ್ಥಿ ಶಶಾಂಕ್ ಕೊಲೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ದೊರೆತಿದ್ದು, ಬೆಟ್ಟಿಂಗ್ ದಂಧೆಕೋರನ ಅಟ್ಟಹಾಸಕ್ಕೆ ಅಮಾಯಕ ಬಾಲಕ ಕೊಲೆಯಾಗಿರುವ ಭೀಕರ ಸತ್ಯ ಬಯಲಾಗಿದೆ.

ಶಶಾಂಕ್‍ನನ್ನು ಕೊಲೆ ಮಾಡಿದ್ದ ಡಿಪ್ಲೊಮಾ ವಿದ್ಯಾರ್ಥಿ, 18 ವರ್ಷದ ದೀಕ್ಷಿತ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಸುಜಾತ ಮತ್ತು ಲೋಕೆಶ್ ದಂಪತಿಯ ಪುತ್ರನಾದ ಶಶಾಂಕ್ ತೇಗನಹಳ್ಳಿಯ ಆಶೀರ್ವಾದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಎಂಟನೇ ತರಗತಿ ಪಾಸಾಗಿ ಒಂಬತ್ತನೇ ತರಗತಿಗೆ ಕಾಲಿಟ್ಟಿದ್ದ. ಆದ್ರೆ ಶಶಾಂಕ್ ಇದ್ದಕ್ಕಿದ್ದಂತೆ ಮೇ 16 ರಂದು ಮನೆಯಿಂದ ನಾಪತ್ತೆಯಾಗಿದ್ದ. ನಂತರ ಶಶಾಂಕ್ ಶವವಾಗಿ ಪತ್ತೆಯಾಗಿದ್ದ.

ಅಂದು ನಡೆದಿದ್ದೇನು?: ಮೇ 15ರಂದು ಶಶಾಂಕ್ ಮನೆಯಿಂದ ಕಾಣೆಯಗಿದ್ದ. ದೀಕ್ಷಿತ್‍ಗೆ ವಿಪರೀತ ಕ್ರಿಕೆಟ್ ಬೆಟ್ಟಿಂಗ್ ಚಟವಿದ್ದು, ಬೆಟ್ಟಿಂಗ್‍ನಲ್ಲಿ ಸೋತು ಏಳು ಸಾವಿರ ಹಣ ಕೊಡಲಾಗದೇ ಸಂಕಟಕ್ಕೆ ಸಿಲುಕಿದ್ದ. ಹೀಗಾಗಿ ಬೆಟ್ಟಿಂಗ್‍ನಲ್ಲಿ ಸೋತ ಹಣ ತೀರಿಸಲು ಶಶಾಂಕ್ ಮನೆಗೆ ಕಳ್ಳತನಕ್ಕೆ ದೀಕ್ಷಿತ್ ಬಂದಿದ್ದ. ಶಶಾಂಕ್ ಗೆ ಈ ಮೊದಲೇ ದೀಕ್ಷಿತ್‍ನ ಪರಿಚಯವಿದ್ದುದ್ದರಿಂದ ಆತನನ್ನು ಗುರುತಿಸಿದ್ದ. ಆಗ ದೀಕ್ಷಿತ್ ಶಶಾಂಕ್‍ನನ್ನು ಉಪಾಯವಾಗಿ ಮನೆಯಿಂದ ಸ್ವಲ್ಪ ದೂರ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದ. ಶಶಾಂಕ್ ಕೊರಳಲ್ಲಿದ್ದ ಬೆಳ್ಳಿಯ ಸರ ಕಿತ್ತುಕೊಂಡು ನಂತರ ಶಶಾಂಕ್ ಬಳಿಯಿದ್ದ ಮನೆಯ ಬೀಗದ ಕೀ ತೆಗೆದುಕೊಂಡು ಬಂದು ಮನೆಯಲ್ಲಿದ್ದ ಬೆಳ್ಳಿ ವಸ್ತು ಮತ್ತು ಕೆಲವೊಂದು ಉಮಾಗೋಲ್ಡ್ ಆಭರಣಗಳನ್ನ ಕದ್ದು ಮಾರಾಟ ಮಾಡಿ ಏನೂ ತಿಳಿಯದಂತೆ ಇದ್ದ ಎಂದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ತಮ್ಮ ಮುದ್ದಿನ ಮಗ ಕಾಣದೇ ಇದ್ದಾಗ ಪೋಷಕರು ಶಶಾಂಕ್ ಮೊಬೈಲ್‍ಗೆ ಕರೆ ಮಾಡಿದ್ರು. ಆದ್ರೆ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಇದ್ರಿಂದ ಹೆದರಿದ ತಂದೆ ತಾಯಿ ತಮ್ಮ ಸಂಬಂಧಿಕರಿಗೆಲ್ಲ ವಿಷಯ ತಿಳಿಸಿ ಶಶಾಂಕ್‍ಗಾಗಿ ಇಡೀ ಪಟ್ಟಣವನ್ನೆಲ್ಲ ಹುಡುಕಾಟ ನಡೆಸಿದ್ರು. ಆದ್ರೆ ಶಶಾಂಕ್ ಮಾತ್ರ ಎಲ್ಲಿಯೂ ಪತ್ತೆಯಾಗಿರಲಿಲ್ಲ. ನಂತರ ಮೇ 17 ರಂದು ಶಶಾಂಕ್ ತನ್ನ ಮನೆಯ ಕೂಗಳತೆ ದೂರದಲ್ಲಿ ಹೆಣವಾಗಿ ಸಿಕ್ಕಿದ್ದ.

ಶಶಾಂಕ್ ತಲೆ, ಮೈ, ಕೈಗೆಲ್ಲ ಹಲ್ಲೆ ನಡೆಸಲಾಗಿತ್ತು. ಆ ನಂತ್ರ ಆತನ ಮರ್ಮಾಂಗಕ್ಕೆ ಹೊಡೆದು ಕತ್ತು ಬಿಗಿದು ಬರ್ಬರವಾಗಿ ಕೊಲೆ ಮಾಡಿದ್ರು. ಕೊನೆಗೆ ಅಲ್ಲೇ ಇದ್ದ ಚಿಕ್ಕ ಮರವನ್ನು ಕತ್ತರಿಸಿ ಶಶಾಂಕ್ ಮೃತದೇಹ ಯಾರಿಗೂ ಕಾಣದಂತೆ ಮುಚ್ಚಿ ಪರಾರಿಯಾಗಿದ್ರು. ಬೆಳಗ್ಗೆ ಸಾರ್ವಜನಿಕರು ವಾಕಿಂಗ್ ಹೋದಾಗ ಶಶಾಂಕ್ ಹತ್ಯೆಯಾಗಿರುವುದು ಬೆಳಕಿಗೆ ಬಂದಿತ್ತು.

ಪೊಲೀಸರು ಬೀಸಿದ ಬಲೆಗೆ ಇದೀಗ ಆರೋಪಿ ದೀಕ್ಷಿತ್ ಅಂದರ್ ಆಗಿದ್ದು, ಕ್ರಿಕೆಟ್ ಬೆಟ್ಟಿಂಗ್ ಕೋರನ ಕೃತ್ಯಕ್ಕೆ ಅಮಾಯಕ ಬಾಲಕ ಬಲಿಯಾಗಿದ್ದು ಜನರಲ್ಲಿ ಆತಂಕ ಮೂಡಿಸಿದೆ.

 

Share This Article
Leave a Comment

Leave a Reply

Your email address will not be published. Required fields are marked *