ಆಪರೇಷನ್‌ ಸಿಂಧೂರ ಯಶಸ್ಸಿನ ಹಿಂದೆ ಬೆಂಗಳೂರಿನ ತಂತ್ರಜ್ಞಾನವಿದೆ: ಮೋದಿ ಅಭಿನಂದನೆ

Public TV
2 Min Read

ಬೆಂಗಳೂರು: ಆಪರೇಷನ್‌ ಸಿಂಧೂರಕ್ಕೆ (Operation Sindoor) ಬೆಂಗಳೂರಿನ ನವ ಯುವಕರ ಕೊಡುಗೆಯಿದೆ. ಬೆಂಗಳೂರಿನ ತಂತ್ರಜ್ಞಾನದಿಂದ ಯಶಸ್ವಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು.

ಐಐಐಟಿಯಲ್ಲಿ ನಮ್ಮ ಮೆಟ್ರೋದ ಕಿತ್ತಳೆ ಮಾರ್ಗಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಆಪರೇಷನ್‌ ಸಿಂಧೂರ ಯಶಸ್ವಿಯಾದ ನಂತರ ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದೇನೆ. ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನದ ಮೇಲೆ ದಾಳಿ ನಡೆಸುವ ಮೂಲಕ ವಿಶ್ವಕ್ಕೆ ಭಾರತದ ವಿಶ್ವರೂಪ ತೋರಿಸಿದ್ದೇವೆ. ಆಪರೇಷನ್ ಸಿಂಧೂರದ ಸಫಲತೆ ಹಿಂದೆ ಮೇಕ್ ಇನ್ ಇಂಡಿಯಾದ ಶಕ್ತಿ ಇದೆ. ಇದರಲ್ಲಿ ಬೆಂಗಳೂರು ಹಾಗೂ ಇಲ್ಲಿನ ಯುವ ತಂತ್ರಜ್ಞರ ಯೋಗದಾನವೂ ಇದೆ. ಆಪರೇಷನ್‌ ಸಿಂಧೂರ ಯಶಸ್ಸಿಗೆ ಕಾರಣಾದ ಬೆಂಗಳೂರು (Bengaluru) ನವಯುವಕರಿಗೆ ನಾನು ಅಭಿನಂದನೆ ತಿಳಿಸುತ್ತೇನೆ ಎಂದು ಹೇಳಿದರು.

 

ಬೆಂಗಳೂರು ನ್ಯೂ ಇಂಡಿಯಾದ ಪ್ರಗತಿಯ ಸಂಕೇತ. ಈ ನಗರ ಗ್ಲೋಬಲ್ ಐಟಿಯಲ್ಲಿ ಭಾರತ ಕೀರ್ತಿ ಪತಾಕೆ ಹಾರಿಸಿದೆ. ಬೆಂಗಳೂರು ಯಶಸ್ಸಿಗೆ ಇಲ್ಲಿನ ಜನರ ಶ್ರಮ, ಪ್ರತಿಭೆ ಕಾರಣ. ಬೆಂಗಳೂರಿನಂಥ ನಗರಗಳನ್ನು ಭವಿಷ್ಯಕ್ಕಾಗಿ ರೂಪಿಸಬೇಕು. ಅದಕ್ಕಾಗಿ ಕೇಂದ್ರದ ಅನುದಾನ ಹರಿದು ಬರುತ್ತಿದೆ ಎಂದರು. ಇದನ್ನೂ ಓದಿ: ಮೋದಿ ಹಾಸ್ಯಕ್ಕೆ ಸಿದ್ದು, ಡಿಕೆಶಿಗೆ ನಗುವೋ ನಗು!

ಹಳದಿ ಹಾಗೂ ಕಿತ್ತಳೆ ಮೆಟ್ರೋ ಮಾರ್ಗಗಳು ಬೆಂಗಳೂರು ಸಂಚಾರಕ್ಕೆ ದೊಡ್ಡ ಬಲ. ಎರಡೂ ಮಾರ್ಗಗಳಿಂದ 25 ಲಕ್ಷ ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ಬೆಂಗಳೂರಿನ ಕಂಪನಿಗಳು ಜಾಗತಿಕವಾಗಿ ಸ್ಪರ್ಧಿಸುತ್ತಿದೆ. ಸ್ಪರ್ಧಿಸುವುದು ಮಾತ್ರ ಅಲ್ಲ ನಾವು ಮುನ್ನಡೆಸುವ ಮಟ್ಟಕ್ಕೆ ಬೆಳೆಯಬೇಕು ಎಂದು ಹೇಳಿದರು.

 

ಭಾರತ ಜಗತ್ತಿನ ಮೂರನೇ ದೊಡ್ಡ ಮೆಟ್ರೋ ಸಂಪರ್ಕ ಇರೋ ದೇಶವಾಗಿದೆ. 2014 ವರೆಗೆ 74 ವಿಮಾನ ನಿಲ್ದಾಣಗಳಿದ್ದವು. ಆದರೆ ಈಗ ಈ ಸಂಖ್ಯೆ 160 ಆಗಿದೆ. ಕರ್ನಾಟಕವನ್ನು ವಿಕಾಸದತ್ತ ಕೊಂಡೊಯ್ಯುತ್ತೇವೆ. ಮೇಕ್ ಇನ್ ಇಂಡಿಯಾದಲ್ಲಿ ಉತ್ಪಾದನೆಯಲ್ಲಿ ಬೆಂಗಳೂರು, ಕರ್ನಾಟಕದ ಪಾಲು ಹೆಚ್ಚು ಹೆಚ್ಚಿರಬೇಕು. ಉತ್ಪಾದನೆಯಾಗುವ ವಸ್ತುಗಳು ನ್ಯೂನತೆಯಿಲ್ಲದೆ ಉತೃಷ್ಟವಾಗಿರಬೇಕು ಎಂದರು.

ಭಾರತದ ಅಗತ್ಯಗಳನ್ನು ಪೂರೈಸಲು ಒಟ್ಟಿಗೆ ಹೆಜ್ಜೆ ಇಡಬೇಕಿದೆ. ಭಾರತ ಉನ್ನತ ಸ್ಥಾನಕ್ಕೆ ಏರಬೇಕು. ಕೇಂದ್ರ ಸರ್ಕಾರ ಇರಲಿ, ರಾಜ್ಯ ಸರ್ಕಾರ ಇರಲಿ, ನಾವೆಲ್ಲರೂ ದೇಶದ ಜನರ ಸೇವೆಗೆ ಇದ್ದೇವೆ. ಒಟ್ಟಿಗೆ ದೇಶ, ದೇಶದ ಜನರ ಹಿತಕ್ಕೆ ಕೆಲಸ ಮಾಡಬೇಕು ಎನ್ನುವ ಮೂಲಕ ಕೇಂದ್ರದ ತಾರತಮ್ಯ ನೀತಿ ಆರೋಪಕ್ಕೆ ತಿರುಗೇಟು ನೀಡಿದರು.

Share This Article