ಬೆಳಗಾವಿ: ಶನಿವಾರ ಭಾರೀ ಮಳೆಗೆ ಯುವಕನೊಬ್ಬ ಹಳ್ಳದಲ್ಲಿ ಕೊಚ್ಚಿಹೋಗಿ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದ ನಿವಾಸಿ ಇರ್ಮಾನ್ ನದಾಫ್ (25) ಮೃತ ಯುವಕ. ಜಿಲ್ಲೆಯ ಭೂತರಾಮನಹಟ್ಟಿ ಬಳಿ ಹಳ್ಳದಲ್ಲಿ ಕೊಚ್ಚಿಹೋಗಿ ಯುವಕ ಮೃತಪಟ್ಟಿದ್ದಾರೆ.
ಇರ್ಮಾನ್ ತನ್ನ ಸಹೋದರ ಅಮೀರ್ ಜತೆಗೆ ಸಾಮಾನು ಖರೀದಿಸಲೆಂದು ಬೆಳಗಾವಿಗೆ ಆಗಮಿಸಿದ್ದರು. ಸಾಮಾನು ಖರೀದಿಸಿ ವಾಪಸ್ ಹೋಗುವ ವೇಳೆಯಲ್ಲಿ ಭಾರೀ ಮಳೆಯಾಗಿದೆ. ಮಳೆಯಿಂದ ರಕ್ಷಣೆ ಪಡೆಯಲು ರಾಷ್ಟ್ರೀಯ ಹೆದ್ದಾರಿ ಪಕ್ಕದ ಗಿಡಗಳ ನಡುವೆ ನಿಂತಿದ್ದಾರೆ. ಏಕಾಏಕಿ ನೀರು ರಭಸದಿಂದ ಬಂದಿದ್ದು, ಅಮೀರ್ ಹೇಗೋ ಹಗ್ಗ ಹಿಡಿದು ಮೇಲೆ ಬಂದಿದ್ದಾರೆ.
ಆದ್ರೆ ಇರ್ಮಾನ್ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಇರ್ಮಾನ್ ಕೊಚ್ಚಿ ಹೋಗುತ್ತಿದ್ದನ್ನು ನೋಡಿದ ಸ್ಥಳೀಯರು ರಕ್ಷಣೆ ಮಾಡಲು ಯತ್ನಿಸಿದ್ದಾರೆ. ಆದರೆ ಅದು ಪ್ರಯೋಜನವಾಗಿಲ್ಲ. ಅಲ್ಲಿಂದ ಒಂದು ಕೀ,ಮೀ ದೂರದಲ್ಲಿ ಬಳಿಕ ಇರ್ಮಾನ್ ಶವ ಪತ್ತೆಯಾಗಿದೆ. ಇನ್ನೂ ಘಟನೆ ನಡೆದ ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲೆಯ ಸವದತ್ತಿ ತಾಲೂಕಿನ ಚಿಕ್ಕುಂಬಿ-ಚುಳಕಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸರ್ಕಾರಿ ಬಸ್ ಅದೃಷ್ಟವಶಾತ್ ಪ್ರವಾಹದಲ್ಲಿ ಕೊಚ್ಚಿಹೋಗದೇ ಪ್ರಯಾಣಿಕರು ಪಾರಾಗಿದ್ದಾರೆ. ನರಗುಂದದಿಂದ ಸವದತ್ತಿಗೆ ಹೋಗುತ್ತಿದ್ದ ಬಸ್ಸನ್ನು ಜೆಸಿಬಿ ಸಹಾಯದಿಂದ ಸ್ಥಳಾಂತರ ಮಾಡಲಾಗಿದೆ.