ಯುವತಿಗಾಗಿ ಟವರ್ ಏರಿ ಕುಳಿತ ಯುವಕ – ತಾಯಿ ಕಣ್ಣೀರಿಟ್ಟರೂ ಕೆಳಗಿಳಿಯದ ಮಗ

Public TV
1 Min Read

ರಾಯಚೂರು: ಯುವಕನೊಬ್ಬ ತಾನು ಪ್ರೀತಿಸಿದ ಯುವತಿಗಾಗಿ ಟವರ್ ಏರಿ ಕುಳಿತ ಘಟನೆ ರಾಯಚೂರು ನಗರದ ಪಿಎನ್ ಟಿ ಕ್ವಾಟ್ರಸ್‍ನಲ್ಲಿ ನಡೆದಿದೆ.

ಶಾಂತಕುಮಾರ (32) ಟವರ್ ಏರಿದ ಯುವಕ. ಶಾಂತಕುಮಾರ್ ಸೆಲ್ಫಿ ವಿಡಿಯೋ ಮಾಡಿ ಸುಮಾರು 120 ಅಡಿ ಎತ್ತರವಿರುವ ಟವರ್ ಏರಿ ಕುಳಿತಿದ್ದಾನೆ. ಅಲ್ಲದೆ ಪ್ರೀತಿಸಿದ ಯುವತಿ ಬರುವವರೆಗೂ ಟವರ್ ನಿಂದ ಇಳಿಯುವುದಿಲ್ಲ ಎಂದು ಹೇಳುತ್ತಿದ್ದಾನೆ.

ವಿಡಿಯೋದಲ್ಲಿ ಏನಿದೆ?
ನಾನು ಹಾಗೂ ಕವಿತಾ ತುಂಬಾ ದಿನದಿಂದ ಪ್ರೀತಿಸುತ್ತಿದ್ದೇವೆ. ಕವಿತಾ ನನಗಾಗಿ ತನ್ನ ಮನೆ ಬಿಟ್ಟು ಬಂದಿದ್ದಳು. ಆಕೆ ಮನೆ ಬಿಟ್ಟು ಬಂದಾಗ ನಾವಿಬ್ಬರು ಮದುವೆ ಆಗಿದ್ದೇವೆ. ನನ್ನ ಬಳಿ ಮದುವೆಯ ದಾಖಲೆಗಳು ಇದೆ. ಆದರೆ ಈಗ ಕವಿತಾ ಪೋಷಕರು ನಾವು ಸಾಯುತ್ತೇವೆ ಎಂದು ಹೆದರಿಸಿ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಅವರು ಕರೆದುಕೊಂಡು ಹೋಗಿ ಕವಿತಾಳನ್ನು ಎಲ್ಲಿ ಇಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ ಈಗ ಅವರ ಪೋಷಕರು ನಾನು ಕಟ್ಟಿದ್ದ ತಾಳಿಯನ್ನು ತೆಗೆದು ಬೇರೆ ಮದುವೆ ಮಾಡಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ದಯವಿಟ್ಟು ಪೊಲೀಸ್ ಅಧಿಕಾರಿಗಳು ಹಾಗೂ ಮಾಧ್ಯಮದವರು ಬೆಂಬಲ ನೀಡಬೇಕೆಂದು ವಿಡಿಯೋದಲ್ಲಿ ಹೇಳಿದ್ದಾನೆ.

ಈ ಬಗ್ಗೆ ಪೊಲೀಸರು ಕವಿತಾ ಮನೆಯವರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಕವಿತಾ ಮನೆಯವರು ಮಹಾರಾಷ್ಟ್ರಕ್ಕೆ ಹೋಗಿದ್ದಾರೆ ಎಂಬ ವಿಷಯ ತಿಳಿದು ಬಂದಿದೆ. ಇತ್ತ ಕವಿತಾ ನಾನು ಶಾಂತಕುಮಾರನನ್ನು ಮದುವೆ ಆಗಿಲ್ಲ ಎಂದು ಹೇಳುತ್ತಿದ್ದಾಳೆ.

ತಾಯಿ, ಕುಟುಂಬದವರು ಬಂದು ಮನವೊಲಿಕೆಗೆ ಪ್ರಯತ್ನಿಸಿದರೂ ಶಾಂತಕುಮಾರ್ ಮೊಬೈಲ್ ಟವರ್ ನಿಂದ ಕೆಳಗೆ ಇಳಿಯುತ್ತಿಲ್ಲ. ಮಗನನ್ನು ತಾಯಿ ಕರೆಯುವ ದೃಶ್ಯ ಮನಕಲುಕುವಂತಿದ್ದು, ಸ್ಥಳದಲ್ಲಿ ನೆರೆದಿದ್ದ ಜನ ತಾಯಿಯ ವೇದನೆ ನೋಡಿ ಮರುಕಪಟ್ಟಿದ್ದಾರೆ. ಅಲ್ಲದೆ ತಾಯಿ ನೀನು ಕೆಳಗಿಳಿಯದಿದ್ದರೆ, ನಾನು ಸಾಯುವೆ ಎಂದು ಕಣ್ಣೀರಿಟ್ಟು ಕೆಳಗಿಳಿ ಎಂದರೂ ಶಾಂತಕುಮಾರ್ ತನ್ನ ತಾಯಿಯ ಮಾತನ್ನು ಕೇಳುತ್ತಿಲ್ಲ. ಕವಿತಾಳನ್ನು ಕರೆ ತಂದರೆ ಮಾತ್ರ ಕೆಳಗಿಯುವುದಾಗಿ ಪಟ್ಟು ಹಿಡಿದಿದ್ದಾನೆ. ಶಾಂತಕುಮಾರ್ ಟವರ್ ಏರಿದ ವಿಷಯ ತಿಳಿದು ಸ್ಥಳಕ್ಕೆ ಪಶ್ಚಿಮ ಠಾಣೆ ಪೊಲೀಸರ ದೌಡಾಯಿಸಿ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *