ಬೆಂಗಳೂರು: ಪೊಲೀಸರು ವ್ಹೀಲಿಂಗ್ ನಿಯಂತ್ರಣಕ್ಕೆ ಕ್ರಮಕೈಗೊಳ್ಳುತ್ತಿದ್ದೇವೆ ಎಂದು ಪದೇ ಪದೇ ಹೇಳುತ್ತಿದ್ದರೂ ವ್ಹೀಲಿಂಗ್ ಮಾಡುವವರಿಗೆ ಮಾತ್ರ ಇನ್ನೂ ಬುದ್ಧಿ ಬಂದಂತಿಲ್ಲ. ಯುವಕರಿಬ್ಬರ ಬೈಕ್ ವ್ಹೀಲಿಂಗ್ ಹುಚ್ಚಿಗೆ 4 ವರ್ಷದ ಮಗುವೊಂದು ಸಾವನ್ನಪ್ಪಿದ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಚಿಕ್ಕಜಾಲದ ಉತ್ನಳ್ಳಿ ಬಳಿ ಇಂದು ಸಂಜೆ 5.30ಕ್ಕೆ ಘಟನೆ ನಡೆದಿದ್ದು ರಾಜು ಅಲಿಯಾಸ್ ಬಂಗಾರಿ ಎಂಬಾತ ತನ್ನ ಸ್ನೇಹಿತನ ಜೊತೆ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ. ಈ ವೇಳೆ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಬದಿಯಲ್ಲಿ ನಿಂತಿದ್ದ ಮಗು ಸಹನಾಗೆ ಡಿಕ್ಕಿ ಹೊಡೆದಿದೆ. ಬೈಕ್ ಗುದಿದ್ದ ರಭಸಕ್ಕೆ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.
ಆದರೆ ಅಪಘಾತವಾಗುತ್ತಿದ್ದಂತೆ ರಾಜು ಸ್ಥಳದಿಂದ ಪರಾರಿಯಾಗಿದ್ದಾನೆ. ಹಿಂಬದಿ ಕುಳಿತಿದ್ದ ಸವಾರ ಕೆಳಗೆ ಬಿದ್ದಿದ್ದಾನೆ. ತಕ್ಷಣ ಸ್ಥಳೀಯರು ಹೋಗಿ ಹಿಂಬದಿ ಸವಾರನನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಚಿಕ್ಕಜಾಲ ಟ್ರಾಫಿಕ್ ಠಾಣೆಯ ಪೊಲೀಸರಿಗೊಪ್ಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.