ನಿಮ್ಮ ತಾಯಿ ಎಂದರೆ ನಮಗೂ ತಾಯಿ: ಭಾವನಾತ್ಮಕವಾಗಿ ಮೋದಿಗೆ ಸಂತಾಪ ತಿಳಿಸಿದ ಮಮತಾ

Public TV
2 Min Read

ಕೋಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ತಾಯಿ ಹೀರಾಬೆನ್ ಮೋದಿ (Heeraben Modi) ಅವರು ಇಂದು ಮುಂಜಾನೆ ವಿಧಿವಶರಾಗಿದ್ದು, ಮೋದಿ ತಾಯಿಯ ಎಲ್ಲಾ ಅಂತಿಮ ಸಂಸ್ಕಾರವನ್ನು ಮುಗಿಸಿ ತಮ್ಮ ಕರ್ತವ್ಯಕ್ಕೆ ಮತ್ತೆ ಹಾಜರಾಗಿದ್ದಾರೆ. ತಾಯಿಯ ಅಗಲಿಕೆಯ ದುಃಖದ ನಡುವೆಯೂ ಮೋದಿ ಬಿಡುವನ್ನು ಪಡೆದುಕೊಳ್ಳದೇ ಎಲ್ಲಾ ಕಾರ್ಯಕ್ರಮಗಳಲ್ಲೂ ಹಾಜರಾಗುತ್ತಿರುವುದಕ್ಕೆ ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಭಾವುಕರಾಗಿ ಮೋದಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆಯನ್ನು ನೀಡಿದ್ದಾರೆ.

ಇಂದು ಪಶ್ಚಿಮ ಬಂಗಾಳದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಹಾಗೂ ಇತರ ಹಲವಾರು ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಮೋದಿ ಬಂಗಾಳ ಭೇಟಿ ನೀಡಬೇಕಿತ್ತು. ಆದರೆ ತಮ್ಮ ತಾಯಿಯ ಮರಣದ ಹಿನ್ನೆಲೆ ಅವರು ಬಂಗಾಳ ಭೇಟಿಯನ್ನು ರದ್ದುಗೊಳಿಸಿದ್ದಾರೆ. ಆದರೂ ಮೋದಿ ಯಾವುದೇ ವಿಶ್ರಾಂತಿ ಪಡೆಯದೇ ವೀಡಿಯೋ ಕಾನ್ಫರೆನ್ಸ್ ಮುಖಾಂತರ ವರ್ಚುವಲ್ ಆಗಿ ತಮ್ಮ ಹುಟ್ಟೂರಿನಿಂದಲೇ ಬಂಗಾಳದ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ.

ತಾಯಿಯ ಶವಸಂಸ್ಕಾರ ಮುಗಿಸಿದ ಬಳಿಕ ವೀಡಿಯೋ ಕಾನ್ಫರೆನ್ಸ್ನಲ್ಲಿ ಭಾಗಿಯಾದ ಮೋದಿಗೆ ಮಮತಾ ಬ್ಯಾನರ್ಜಿ ಸಂತಾಪ ತಿಳಿಸಿದ್ದಾರೆ. ನಿಮ್ಮ ತಾಯಿ ಎಂದರೆ ನಮಗೂ ತಾಯಿಯೇ. ದಯವಿಟ್ಟು ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಸ್ವಲ್ಪ ಸಮಯ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಅವರು ಭಾವನಾತ್ಮಕವಾಗಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮಗ ಮನೆ ಬಿಟ್ಟು ಹೋದಾಗ್ಲೂ ಕುಗ್ಗಿರಲಿಲ್ಲ ಹೀರಾಬೆನ್!

ಪಶ್ಚಿಮ ಬಂಗಾಳದ ಜನರ ಪರವಾಗಿ ಸಂತಾಪ ಸೂಚಿಸಿದ ಬ್ಯಾನರ್ಜಿ, ನನ್ನ ಸಂತಾಪ ಮತ್ತು ಸಂದೇಶಗಳನ್ನು ನಿಮ್ಮ ಕುಟುಂಬದ ಸದಸ್ಯರಿಗೆ ಮತ್ತು ಇತರರಿಗೆ ಹೇಗೆ ತಿಳಿಸಬೇಕು ಎಂದು ತೋಚುತ್ತಿಲ್ಲ. ಏಕೆಂದರೆ ತಾಯಿ ಎಂಬುವುದು ಬೇರೆಯವರಿಗೆ ಹೊರತಾದುದಲ್ಲ. ಪಶ್ಚಿಮ ಬಂಗಾಳದ ಜನರ ಪರವಾಗಿ, ನಮಗೆ ಈ ಅವಕಾಶವನ್ನು ನೀಡಿದ್ದಕ್ಕಾಗಿ ನಾನು ನಿಮಗೆ ತುಂಬಾ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ನಿಮ್ಮ ತಾಯಿ ಎಂದರೆ ನಮಗೂ ತಾಯಿ. ಈ ಸಂದರ್ಭ ನಾನು ನನ್ನ ತಾಯಿಯನ್ನೂ ನೆನಪಿಸಿಕೊಳ್ಳುತ್ತೇನೆ ಎಂದು ಹೇಳುತ್ತಾ ಗದ್ಗದಿತರಾದ ಮಮತಾ, ನಿಮ್ಮ ಕೆಲಸವನ್ನು ಮುಂದುವರಿಸಲು ದೇವರು ನಿಮಗೆ ಶಕ್ತಿಯನ್ನು ನೀಡಲಿ ಎಂದು ಬೇಡಿಕೊಂಡರು.

ಕಳೆದ 2 ದಿನಗಳ ಹಿಂದೆ ಅಹಮದಾಬಾದ್‌ನ ಯುಎನ್ ಮೆಹ್ತಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಮತ್ತು ರಿಸರ್ಚ್ ಸೆಂಟರ್‌ಗೆ ದಾಖಲಾಗಿದ್ದ ಹೀರಾಬೆನ್ ಮೋದಿ ಇಂದು ಮುಂಜಾನೆ ನಿಧನರಾದರು. ಪ್ರಧಾನಿಯವರು ತಮ್ಮ ತಾಯಿಯ ಅಂತಿಮ ಸಂಸ್ಕಾರವನ್ನು ನೆರವೇರಿಸಲು ತಕ್ಷಣವೇ ಹುಟ್ಟೂರಿಗೆ ತೆರಳಿದರು. ತಾಯಿಯ ಅಂತಿಮ ಯಾತ್ರೆಗೆ ಪ್ರಧಾನಿಯೂ ಹೆಗಲಾಗಿ, ಬರಿಗಾಲಿನಲ್ಲಿ ನಡೆದರು. ತಮ್ಮ ಸಹೋದರರೊಂದಿಗೆ ತಾಯಿಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಇದನ್ನೂ ಓದಿ: ಬಿಳಿ ಸೀರೆಯೊಂದಿಗೆ ಕರವಸ್ತ್ರ ಯಾವಾಗ್ಲೂ ಇರುತ್ತಿತ್ತು- ಹೀರಾಬೆನ್ ಕುತೂಹಲಕಾರಿ ಸಂಗತಿ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *