ಮೈಸೂರಲ್ಲಿ ಅನುಮಾನಾಸ್ಪದವಾಗಿ ಯುವತಿಯ ಶವ ಪತ್ತೆ – ರೇಪ್ & ಮರ್ಡರ್ ಶಂಕೆ

Public TV
1 Min Read

ಮೈಸೂರು: ನಗರದ (Mysuru) ಹೊರವಲಯದ ಕಾಲೇಜೊಂದರ ಬಳಿ ಯುವತಿಯೊಬ್ಬಳ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದು, ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಮೃತ ಯುವತಿ ಕಳೆದ ಮೂರು ವರ್ಷಗಳಿಂದ ಮಕ್ಕಳ ಡೇ ಕೇರ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಮಂಗಳವಾರ ಕೆ.ಆರ್ ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಡೇ ಕೇರ್‌ನಿಂದ ತೆರಳಿದ್ದಳು. ಆಸ್ಪತ್ರೆಯಿಂದ ಹೊರಡುವಾಗ ತಂದೆಗೆ ಕರೆ ಮಾಡಿದ್ದಳು. ಈ ವೇಳೆ, ಮಳೆ ಬರುತ್ತಿದೆ ಆಟೋದಲ್ಲಿ ಹೋಗುವಂತೆ ತಂದೆ ತಿಳಿಸಿದ್ದರು. ಆದರೆ ಆಕೆ ಮನೆಗೆ ವಾಪಸ್ ಆಗಿರಲಿಲ್ಲ. ಇಂದು (ಬುಧವಾರ) ಯುವತಿಯ ಮೃತದೇಹ ಪತ್ತೆಯಾಗಿದೆ.

ಮೃತ ಯುವತಿಯ ಸೋದರ ಮಾವ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಸ್ಥಳದಲ್ಲಿ ಮೃತದೇಹ ನೋಡಿದಾಗ ನಾವು ಕೇವಲ ಕೊಲೆ ಎಂದುಕೊಂಡಿದ್ದೆವು. ಮೃತದೇಹದ ಮೇಲೆ ಪ್ಯಾಂಟ್ ಉಲ್ಟಾ ಹಾಕಲಾಗಿತ್ತು, ಅಂದರೆ ಅತ್ಯಾಚಾರದ ನಂತರ ಕೊಲೆ ಮಾಡಿ ಬಟ್ಟೆ ತೊಡಿಸಿರಬಹುದು. ಬಡವರ ಹೆಣ್ಣು ಮಕ್ಕಳಿಗೆ ಈ ರೀತಿಯಾಗುತ್ತಿದೆ. ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಡಿಸಿಪಿ ಮುತ್ತುರಾಜ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷಗೆ ರವಾನಿಸಲಾಗಿದೆ. ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article