ಮೊದಲು ಪ್ರೀತಿ, ಬಳಿಕ ಕಾಮ, ಆಮೇಲೆ ಅವಮಾನ: ಪ್ರಿಯಕರನ ಮೋಸಕ್ಕೆ ಗೆಳತಿ ನೇಣಿಗೆ ಶರಣು

Public TV
2 Min Read

ಬೆಂಗಳೂರು: ಹಲವು ವರ್ಷಗಳಿಂದ ಪ್ರೀತಿಯ ನಾಟಕವಾಡಿ, ಬಳಿಕ ತನ್ನನ್ನು ಉಪಯೋಗಿಸಿಕೊಂಡು ಪ್ರಿಯಕರ ನನಗೆ ಮೋಸ ಮಾಡಿದ್ದಾನೆ ಎಂದು ಯುವತಿಯೊಬ್ಬಳು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರ ಚಂದ್ರಲೇಔಟ್‍ನಲ್ಲಿ ನಡೆದಿದೆ.

ಮಂಜುಳ (23) ಆತ್ಮಹತ್ಯೆಗೆ ಶರಣಾದ ಯುವತಿ. ರವಿಕಿರಣ್ ಎಂಬಾತ ತನ್ನೊಂದಿಗೆ ಪ್ರೀತಿಯ ನಾಟಕವಾಡಿ ಮೋಸ ಮಾಡಿದ್ದಾನೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿರುವ ಮಂಜುಳ ಆತ್ಮಹತ್ಯೆ ಪತ್ರ ಬರೆದಿಟ್ಟು ಸಾವಿಗೆ ಶರಣಾಗಿದ್ದಾಳೆ.

ಆತ್ಮಹತ್ಯೆ ಪತ್ರದಲ್ಲಿ ಪೊಲೀಸರು, ಪ್ರೇಮಿ ರವಿಕಿರಣ್ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಆರೋಪ ಮಾಡಿರುವ ಮಂಜುಳ ತನ್ನ ಸಾವಿನ ಬಳಿಕವಾದರೂ ಆರೋಪಿಗೆ ಶಿಕ್ಷೆ ನೀಡಿ ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾಳೆ. ಅಲ್ಲದೇ ತನ್ನ ಸಾವಿಗೆ ರವಿಕಿರಣ್ ಹಾಗೂ ಆತನ ಕುಟಂಬಸ್ಥರೇ ಕಾರಣ. ಆತ್ಮಹತ್ಯೆ ಮಾಡಿಕೊಳ್ಳುವಂತೆ ಅವಮಾನ ಮಾಡಿ ಪ್ರೇರಣೆ ನೀಡಿದ್ದಾರೆ ಎಂದು ತಿಳಿಸಿದ್ದಾಳೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೃತ ಯುವತಿಯ ಪೋಷಕರು, ತಮ್ಮ ಮಗಳ ಸಾವಿಗೆ ಚಂದ್ರಲೇಔಟ್ ಪೊಲೀಸ್ ಅಧಿಕಾರಿ ವೀರೇಂದ್ರ ಪ್ರಸಾದ್ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೇ ಮಗಳ ಮೃತದೇಹವನ್ನು ಪೊಲೀಸರಿಗೆ ಒಪ್ಪಿಸಲು ನಿರಾಕಸಿದ್ದು, ಯುವಕನ ಮನೆ ಮುಂದೆ ಶವವಿಟ್ಟು ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ.

ಪತ್ರದಲ್ಲಿ ಏನಿದೆ?
ನಾನು ಹಾಗೂ ರವಿಕಿರಣ್ ಕೆಲ ವರ್ಷಗಳಿಂದ ಪ್ರೀತಿ ಮಾಡುತ್ತಿದ್ದೇವು. ಆದರೆ ನನ್ನ ಪ್ರೀತಿಯನ್ನು ಕಾಮತೃಷೆಗೆ ಬಳಸಿಕೊಂಡಿದ್ದ ರವಿಕಿರಣ್ ಬಳಿಕ ನನ್ನನ್ನು ದೂರ ಮಾಡಲು ಪ್ರಯತ್ನಿಸಿದ್ದ. ನಾವಿಬ್ಬರು ಸ್ನೇಹಿತರು ಅಷ್ಟೇ, ಬೇಕಾದರೆ ದುಡ್ಡು ಕೊಡುತ್ತೇನೆ. ಹಣ ಪಡೆದು ಸುಮ್ಮನಾಗುವಂತೆ ತಿಳಿಸಿದ್ದ. ತಮ್ಮ ಪ್ರೀತಿಯ ವಿಷಯವನ್ನು ರವಿಕಿರಣ್ ಪೋಷಕರಿಗೂ ತಿಳಿಸಿ ಮದುವೆ ಮಾಡಿಸುವಂತೆ ಮನವಿ ಮಾಡಿದ್ದೆ. ಆದರೆ ನನ್ನ ಮಾತನ್ನು ನಿರಾಕರಿಸಿ ಇಂತಹ ಹೆಣ್ಣು ತಮ್ಮ ಮಗನಿಗ ಬೇಡ. ನೀನು ಬದುಕಿರುವುದಕ್ಕಿಂತ ಸಾಯುವುದು ಉತ್ತಮ ಎಂದು ಅವಮಾನಿಸಿದ್ದರು.

ತಾನು ಮೋಸ ಹೋದ ಸಂಗತಿ ತಿಳಿದ ಬಳಿಕ ರವಿಕಿರಣ್ ವಿರುದ್ಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದೆ. ಆದರೆ ಈ ಪ್ರಕರಣದಲ್ಲಿ ಹಣ ಹಾಗೂ ರಾಜಕೀಯ ಕೆಲಸ ಮಾಡಿದ್ದು, ರವಿಕಿರಣ್ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ನನಗೆ ಮೋಸ ಮಾಡಿದ ಹಾಗೂ ಸಾವಿಗೆ ಕಾರಣರಾದ ರವಿಕಿರಣ್, ಆತನ ಕುಟುಂಬಸ್ಥರು ಶಿಕ್ಷೆ ನೀಡಿ. ನನ್ನ ಸಾವಿನ ಬಳಿಕವಾದರೂ ನ್ಯಾಯ ನೀಡಿ ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡಿರುವ ಮಂಜುಳ ತಂದೆ, ತಾಯಿ, ಕುಟುಂಬಸ್ಥರ ಬಳಿ ಕ್ಷಮೆ ಕೋರಿದ್ದಾಳೆ.

ಪೋಷಕರ ಒಪ್ಪಿಗೆ: ಶನಿವಾರದ ಒಳಗೆ ರವಿಕಿರಣ್ ನ್ನು ಬಂಧಿಸುತ್ತೇವೆ ಎಂದು ಎಸಿಪಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆಗೆ ಮಂಜುಳ ಪೋಷಕರು ಒಪ್ಪಿದ್ದಾರೆ. ಈಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಾಳೆ ಮರಣೋತ್ತರ ಪರೀಕ್ಷೆ ಮಾಡಲು ಮಂಜುಳ ಮೃತದೇಹವನ್ನು ಚಂದ್ರಲೇಔಟ್ ಪೊಲೀಸರು ರವಾನೆ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *