ಸಹೋದರಿ ಸಾವನ್ನಪ್ಪಿದ್ರೂ ಶವ ತೆಗೆದುಕೊಂಡು ಹೋಗಲು ಯಾರೂ ಇಲ್ಲ: ಯುವಕ ಕಣ್ಣೀರು

Public TV
2 Min Read

– ಎರಡು ದಿನಗಳಿಂದ ಶವದೊಂದಿಗೆ ಇದ್ದೇನೆ
– ವೈದ್ಯರು, ಕೆಲಸಗಾರರು ಯಾರೂ ಸಹಾಯ ಮಾಡ್ತಿಲ್ಲ
– ಫೇಸ್ಬುಕ್ ವಿಡಿಯೋ ಮೂಲಕ ಯುವಕ ಅಳಲು

ರೋಮ್: ಕೊರೊನಾ ವೈರಸ್ ತಾಂಡವ ವಿಶ್ವಾದ್ಯಂತ ಜೋರಾಗಿದ್ದು, ಇಟಲಿಯಲ್ಲಿ ಸಂಪೂರ್ಣ ಬಂದ್ ಮಾಡಿದ್ದರೂ 1,441 ಜನ ಸಾವನ್ನಪ್ಪಿದ್ದಾರೆ. 21 ಸಾವಿರಕ್ಕೂ ಅಧಿಕ ಜನ ಸೋಂಕಿಗೊಳಗಾಗಿದ್ದಾರೆ. ಈ ಮಧ್ಯೆ ಯುವಕನೊಬ್ಬ ತನ್ನ ತಂಗಿ ಸಾವನ್ನಪ್ಪಿ ಎರಡು ದಿನ ಆಗಿದೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ಫೇಸ್ಬುಕ್‍ನಲ್ಲಿ ವಿಡಿಯೋ ಮಾಡಿದ್ದಾನೆ. ಆದರೆ ಇಟಲಿಯನ್ನು ಸಂಪೂರ್ಣ ಬಂದ್ ಮಾಡಿರುವ ಹಿನ್ನೆಲೆ ಶವ ತೆಗೆದುಕೊಂಡು ಹೋಗಲು ಸಹ ಯಾರೂ ಇಲ್ಲದಂತಾಗಿದೆ.

ಇಟಲಿಯ ನೇಪಲ್ಸ್ ನ ದಕ್ಷಿಣ ನಗರದ ನಿವಾಸಿ ಲೂಕಾ ಫ್ರಾಂಜೀಸ್ ಈ ವಿಡಿಯೋ ಪೋಸ್ಟ್ ಮಾಡಿದ್ದು, ಫುಲ್ ವೈರಲ್ ಆಗಿದೆ. ‘ನನ್ನ ಸಹೋದರಿ ಕೊರೊನಾ ವೈರಸ್ ನಿಂದಾಗಿ ಮೃತಪಟ್ಟಿದ್ದಾಳೆ. ಕಳೆದೆರಡು ದಿನಗಳಿಂದ ಆಕೆಯ ಶವದೊಂದಿಗೆ ಮನೆಯಲ್ಲಿದ್ದೇನೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ನಾನು ಒಬ್ಬನೇ ಇರುವುದರಿಂದ ಆಕೆಯ ಅಂತಿಮ ಸಂಸ್ಕಾರ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಟಲಿ ಸರ್ಕಾರದ ಅಧಿಕಾರಿಗಳು ಬಂದು ಆಕೆಯ ದೇಹವನ್ನು ಅಂತ್ಯಸಂಸ್ಕಾರ ಮಾಡಲು ಸಹಕರಿಸಬೇಕು ಎಂದು ಕೇಳಿಕೊಂಡಿದ್ದಾನೆ.

ಯುವಕನ ಸಹೋದರಿ ತೇರೆಸಾ ಫ್ರಾಂಜೀಸ್(47)ಳಲ್ಲಿ ಕಳೆದ ವಾರ ಕೊರೊನಾ ವೈರಸ್ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದವು. ನಂತರ ಅವಳ ಆರೋಗ್ಯ ಬಹುಬೇಗ ಹದಗೆಟ್ಟಿತು. ಹೀಗಾಗಿ ವೈದ್ಯಕೀಯ ಪರೀಕ್ಷೆ ಮಾಡಿಸುವುದಕ್ಕೂ ಮೊದಲೇ ತೀರಿಕೊಂಡಳು. ಅಲ್ಲದೆ ತೇರೆಸಾಗೆ ಮೂರ್ಛೆ ರೋಗ ಸಹ ಇತ್ತು. ಹೀಗಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಯುವಕ ತಿಳಿಸಿದ್ದಾರೆ.

ಇಟಲಿಯಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದ್ದು, ಹೀಗಾಗಿ ಯಾರೂ ಹೊರಗೆ ಬರದಂತಹ ವಾತಾವರಣ ನಿರ್ಮಾಣವಾಗಿದೆ. ಕೆಲಸಗಾರರು ಹಾಗೂ ಆಸ್ಪತ್ರೆಯವರು ಸಹ ಶವವನ್ನು ತೆಗೆಯಲು ಮುಂದಾಗುತ್ತಿಲ್ಲ. ಹೀಗಾಗಿ ವಿಡಿಯೋ ಮೂಲಕ ಯುವಕ ತನ್ನ ಅಳಲು ತೋಡಿಕೊಂಡಿದ್ದಾನೆ. ಫಿಟ್ನೆಸ್ ತರಬೇತುದಾರನಾಗಿರುವ ಫ್ರಾಂಜೀಸ್ ತನ್ನ ಸಹೋದರಿಯ ದೇಹ ತನ್ನ ಹಿಂದಿರುವುದನ್ನು ವಿಡಿಯೋದಲ್ಲಿ ತೋರಿಸಿದ್ದಾನೆ.

ನಾವು ಹಾಳಾಗಿದ್ದೇವೆ, ಇಟಲಿ ನಮ್ಮನ್ನು ಕಡೆಗಣಿಸಿದೆ. ನಾವು ಒಟ್ಟಿಗೆ ದೃಢವಾಗಿರಬೇಕಿದೆ, ದಯವಿಟ್ಟು ಈ ವಿಡಿಯೋವನ್ನು ಎಲ್ಲೆಡೆ ಹಂಚಿಕೊಳ್ಳಿ ಎಂದು ಫ್ರಾಂಜೀಸ್ ಮನವಿ ಮಾಡಿದ್ದಾನೆ. ಅಂತಿಮವಾಗಿ 36 ಗಂಟೆಗಳ ನಂತರ ರಕ್ಷಣಾತ್ಮಕ ಬಟ್ಟೆ ಧರಿಸಿದ ಕೆಲಸಗಾರರು ಆಗಮಿಸಿ, ದೇಹವನ್ನು ನೇರವಾಗಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಂತಿಮ ಸಂಸ್ಕಾರ ಮಾಡಿದ್ದಾರೆ. ಈ ವೇಳೆ ಮನೆಯವರಾರೂ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿಲ್ಲ. ಏಕೆಂದರೆ ಅವರಿಗೂ ಸೋಂಕು ತಗುಲಬಹುದೆಂಬ ಭಯವಿತ್ತು.

ಕೊರೊನಾ ವೈರಸ್‍ನಿಂದಾಗಿ ವಿಶ್ವಾದ್ಯಂತ ಈವರೆಗೆ 5 ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪಿದ್ದು, 1.56 ಲಕ್ಷಕ್ಕೂ ಅಧಿಕ ಜನರಲ್ಲಿ ವೈರಸ್ ಕಾಣಿಸಿಕೊಂಡಿದೆ. ಮಹಾಮಾರಿ ಕೊರೊನಾ ವಿರುದ್ಧ ಹೋರಾಡಲು ಇಟಲಿ, ಡೆನ್ಮಾರ್ಕ್ ಹಾಗೂ ಕುವೈತ್ ಸಂಪೂರ್ಣ ಬಂದ್ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *