ಪ್ರವಾಹದಲ್ಲಿ ಮನೆ ಕಳೆದುಕೊಂಡವರ ಬದುಕು ಕಟ್ಟಲು ಮುಂದಾದ ಯಂಗ್ ಇಂಡಿಯಾ ಪರಿವಾರ

Public TV
2 Min Read

ಗದಗ: ಪ್ರವಾಹ ಇಳಿದು ವಾರ ಕಳೆದರೂ ಸಂತ್ರಸ್ತರ ಗೋಳು ಇನ್ನೂ ನಿಂತಿಲ್ಲ. 2009ರ ಪ್ರವಾಹ ವೇಳೆ ಸರ್ಕಾರ ಹೊಸ ಊರುಗಳನ್ನು ನಿರ್ಮಿಸಿತು. ಆದರೆ ಜನ ಬರಲಿಲ್ಲ, ವಾಸ ಮಾಡಲಿಲ್ಲ. ಈಗ ಪಾಳು ಬಿದ್ದ ಹರಕು ಮುರಕಿನ ಮನೆಗಳಲ್ಲಿ ಸಂತ್ರಸ್ತರು ಬದುಕು ಸಾಗಿಸುವಂತಾಗಿದೆ. ಈ ಮನೆಗಳ ದುರಸ್ತಿ ಮಾಡಲು ಸರ್ಕಾರ ಮೀನಾಮೇಷ ಎನಿಸುತ್ತಿದೆ. ಆದರೆ ಗದಗನ ಯಂಗ್ ಇಂಡಿಯಾ ಪರಿವಾರ ಬದುಕು ಕಳೆದುಕೊಂಡವರ ಬದುಕು ಕಟ್ಟಿಕೊಡಲು ಮುಂದಾಗಿದೆ.

ಗದಗ ಜಿಲ್ಲೆಯ ರೋಣ ತಾಲೂಕಿನ ಕುರವಿನಕೊಪ್ಪ ಗ್ರಾಮದಲ್ಲಿ ಮಲಪ್ರಭಾ ಹಾಗೂ ಬೆಣ್ಣೆಹಳ್ಳ ಪ್ರವಾಹಕ್ಕೆ ತುತ್ತಾದ ನೂರಾರು ಕುಟುಂಬಗಳು ಬದುಕು ಕಟ್ಟಿಕೊಳ್ಳಲು ಹರಸಾಹಸಪಡುತ್ತಿದ್ದಾರೆ. 2007, 2009ರಲ್ಲಿ ಗದಗ ಜಿಲ್ಲೆ ರೋಣ ಹಾಗೂ ನರಗುಂದ ಭಾಗದಲ್ಲಿ ಪ್ರವಾಹ ಉಂಟಾಗಿತ್ತು. ನೆರೆ ಹಾವಳಿ ತಪ್ಪಿಸಲು ಸರ್ಕಾರ ಆಗ ನೂರಾರು ಆಸರೆ ಮನೆಗಳನ್ನು ನಿರ್ಮಿಸಿತ್ತು. ಆದರೆ ಅಲ್ಲಿ ಮೂಲಭೂತ ಸೌಕರ್ಯಗಳಿಲ್ಲದ ಕಾರಣ ಜನರು ವಾಸ ಮಾಡಲಿಲ್ಲ. 10 ವರ್ಷದಲ್ಲಿ ಮನೆಗಳು ಹಾಳಾಗಿ ಹೋಗಿದ್ದವು. ಈಗ ಮತ್ತೆ ಪ್ರವಾಹ ಬಂದು ಗ್ರಾಮಗಳು ಮುಳುಗಿವೆ. ಹೀಗಾಗಿ ಜನರಿಗೆ ಆಸರೆ ಮನೆಗಳೇ ಗತಿಯಾಗಿವೆ. ಆದರೆ ಮನೆಗಳು ಸಂಪೂರ್ಣ ಪಾಳು ಬಿದ್ದಿದ್ದು ವಾಸಕ್ಕೆ ಯೋಗ್ಯವಿಲ್ಲ. ಸರ್ಕಾರ ರಿಪೇರಿ ಮಾಡುವ ಗೋಜಿಗೆ ಹೋಗಿಲ್ಲ. ಹೀಗಾಗಿ ಸರ್ಕಾರ ಮಾಡುವ ಕೆಲಸ ಸಂಘ ಸಂಸ್ಥೆಗಳು ಮಾಡುತ್ತಿವೆ.

ಗದಗನ ಯಂಗ್ ಇಂಡಿಯಾ ಪರಿವಾರದಿಂದ ಆ ಮನೆಗಳನ್ನು ದುರಸ್ತಿ ಮಾಡುವ ಮೂಲಕ ಸಂತ್ರಸ್ತರ ಬದುಕಿಗೆ ದಾರಿ ದೀಪವಾಗುತ್ತಿದೆ. ಯಂಗ್ ಇಂಡಿಯಾದ ನೂರಾರು ಕಾರ್ಯಕರ್ತರು ಕಳೆದ ಒಂದು ವಾರದಿಂದ ಮನೆಗಳ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ. ಎಲ್ಲಾ ಕೆಲಸವನ್ನು ಕೇವಲ ಸರ್ಕಾರವೇ ಮಾಡಬೇಕು ಎಂದುಕೊಳ್ಳುತ್ತಾ ಕುಳಿತರೆ ಆಗದು. ಸಂತ್ರಸ್ತರ ಕಷ್ಟಕರ ಬದುಕು ನೋಡಲಾಗದೇ ದುರಸ್ತಿ ಮಾಡಲು ಮುಂದಾಗಿದ್ದೇವೆ. ಈ ಮೂಲಕ ಸಂತ್ರಸ್ತರ ಖುಷಿಯೇ ನಮ್ಮ ಖುಷಿ ಎಂದು ಯಂಗ್ ಇಂಡಿಯಾ ಪರಿವಾರ ತಿಳಿಸಿದೆ.

ಈ ಕುರವಿನಕೊಪ್ಪ ನವಗ್ರಾಮದಲ್ಲಿ 120 ಮನೆಗಳನ್ನು ನಿರ್ಮಿಸಲಾಗಿದೆ. ಅದರ ದುರಸ್ತಿ ಕಾರ್ಯದ ಜವಾಬ್ದಾರಿಯನ್ನು ಯಂಗ್ ಇಂಡಿಯಾ ಪರಿವಾರ ವಹಿಸಿಕೊಂಡಿದೆ. ಮನೆಗಳ ಕಲ್ಲು ಜೋಡಿಸುವುದು, ಕಿಟಕಿ, ಬಾಗಿಲು, ಸುಣ್ಣ, ಬಣ್ಣ ಹಚ್ಚಿ ರಿಪೇರಿ ಮಾಡುತ್ತಿದ್ದಾರೆ. ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡು ಬೀದಿ ಪಾಲಾದ ಅದೆಷ್ಟೋ ಕುಟುಂಬಗಳ ಜನರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದಾರೆ. ಪ್ರವಾಹ ವೇಳೆ ಜನ ಊಟ, ಉಪಹಾರ, ದವಸ-ಧಾನ್ಯಗಳು, ಹಾಸಿಗೆ ಹೊದಿಕೆ ಇತರೆ ಸಾಮಾಗ್ರಿಗಳನ್ನು ನೀಡಿ ತಾತ್ಕಾಲಿಕ ಜೀವನ ನಡೆಯುವಂತೆ ಮಾಡಿದ್ದರು. ಆದರೆ ಸರ್ಕಾರ ಮಾಡದ ಕೆಲಸವನ್ನು ಸಂಘ-ಸಂಸ್ಥೆಗಳು ಮಾಡುತ್ತಿರುವುದು ಖುಷಿ ತಂದಿದೆ ಎಂದು ಸಂತ್ರಸ್ತರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *