ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿದ್ದ ರೈತ – ಯುವಕನ ಆಸೆಯಂತೆ ಅಂಗಾಂಗ ದಾನ

Public TV
1 Min Read

ಬೆಂಗಳೂರು: ರಕ್ತ ಹೆಪ್ಪುಗಟ್ಟಿ ಯುವ ರೈತ ಮೃತಪಟ್ಟಿದ್ದು, ಅವರ ಆಸೆಯಂತೆ ಅಂಗಾಂಗ ದಾನ ಮಾಡಲಾಗಿದೆ.

ವಿಕಾಶ್ ಎಚ್.ಪಿ ಸಕಲೇಶಪುರದ ಹೆತ್ತೂರು ಹೋಬಳಿಯ ಹೊಸಹಳ್ಳಿಯವರಾಗಿದ್ದು, ಪದವಿ ಮುಗಿಸಿ ಊರಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದರು. ಪುಟ್ಟಸ್ವಾಮಿ ಗೌಡ ಹಾಗೂ ದಿ.ಶಶಿಕಲಾ ಅವರ ಮೂವರ ಮಕ್ಕಳಲ್ಲಿ ವಿಕಾಸ್ ಮೊದಲನೇ ಮಗ. ಬದುಕು ಕಟ್ಟಿಕೊಳ್ಳಲು ಹಳ್ಳಿಗಳಿಂದ ಪಟ್ಟಣಕ್ಕೆ ಹೋಗುವ ಯುವಕರೇ ಹೆಚ್ಚಿರುವಾಗ ವಿಕಾಸ್ ಹಳ್ಳಿಯಲ್ಲೇ ಉಳಿದುಕೊಂಡು ಕೃಷಿ ಮಾಡುತ್ತಿದ್ದರು. ಇದನ್ನೂ ಓದಿ:  ತರಗತಿಯಲ್ಲಿ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು – ಪೋಷಕರಿಂದ ಅಂಗಾಂಗ ದಾನ

ಆಗಾಗ ತಲೆ ನೋವು ಎನ್ನುತ್ತಿದ್ದ ರೈತ ವಿಕಾಸ್ ಕಳೆದ ಶುಕ್ರವಾರ ವಿಪರೀತ ತಲೆ ನೋವು ಬಂದಿತ್ತು. ಸಕಲೇಶಪುರ ಹಾಗೂ ಮಂಗಳೂರಿನ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಬ್ಲಡ್ ಕ್ಲಾಟ್ ಆಗಿರುವುದು ತಿಳಿಯಿತು. ಚಿಕಿತ್ಸೆಯಲ್ಲಿರುವಾಗ್ಲೇ ಕೋಮಾಗೆ ಜಾರಿದ ವಿಕಾಸ್ ಮೆದುಳು ನಿಷ್ಕ್ರಿಯವಾಗಿತ್ತು. ಶುಕ್ರವಾರ ಬೆಂಗಳೂರಿನ ಗೊರಗುಂಟೆಪಾಳ್ಯ ಬಳಿಯ ಸ್ಪರ್ಶ ಆಸ್ಪತ್ರೆಯಲ್ಲಿ ಯುವಕ ವಿಕಾಸ್ ಮೃತಪಟ್ಟಿದ್ದಾರೆ. ಆದರೆ ಸಾವಿನ ನಂತರವೂ ವಿಕಾಸ್ ಹಲವರ ಬಾಳಿಗೆ ಬೆಳಕಾಗಿದ್ದಾರೆ.

ಬದುಕಿದ್ದಾಗ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದ ರೈತ ವಿಕಾಸ್ ಗೆಳೆಯರ ಬಳಿ ಅಂಗಾಂಗ ದಾನದ ಬಗ್ಗೆ ಮಾತನಾಡುತ್ತಿದ್ದರು. ಈ ವಿಷಯವನ್ನು ಅವರ ಸ್ನೇಹಿತರು ವಿಕಾಸ್ ಪೋಷಕರಿಗೆ ತಿಳಿಸಿದರು. ಮಗನ ಸಾವಿನ ನಂತರ ವಿಕಾಸ್ ಕುಟುಂಬ ಸಾರ್ಥಕತೆ ಮೆರೆದಿದೆ. ರೈತ ವಿಕಾಸ್ ಸಾವಿನ ನಂತರವೂ ಎಂಟು ಮಂದಿಗೆ ಬದುಕಿದ್ದಾರೆ. ವಿಕಾಸ್ ಅಂಗಾಂಗಗಳನ್ನು ಬಿಜಿಎಸ್ ಸೇರಿದಂತೆ ಹಲವು ಆಸ್ಪತ್ರೆಗಳಿಗೆ ರವಾನೆ ಮಾಡಲಾಗಿದೆ.

ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ, ‘ಜೀವ ಸಾರ್ಥಕತೆ’ ಅಡಿಯಲ್ಲಿ ಅಂಗಾಂಗ ದಾನ ಮಾಡಲಾಗಿದೆ. ಇಂದು ವಿಕಾಸ್ ಅವರ ಅಂತ್ಯಕ್ರಿಯೆ ಹುಟ್ಟೂರಲ್ಲಿ ನೆರವೇರಲಿದೆ. ರೈತ ಯುವಕ ವಿಕಾಸ್ ನಮ್ಮೊಂದಿಗೆ ಇಲ್ಲ ಎಂದರು ಅವನ ಜೀವನ ಸಾರ್ಥಕವಾಗಿದೆ ಎನ್ನುವ ಮನೋಭಾವದಲ್ಲಿ ಅವರ ಕುಟುಂಬವಿದೆ.

Share This Article
Leave a Comment

Leave a Reply

Your email address will not be published. Required fields are marked *