ಪಾಕ್‌ ಕೈಗಾರಿಕೆಗಳ ಬ್ಯಾನ್‌ ಮಾಡ್ಬೇಕೆ: ದಿಲ್ಲಿ ವಾಯುಮಾಲಿನ್ಯಕ್ಕೆ ಪಾಕ್‌ ಕಾರಣ ಎಂದ ಯುಪಿ ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆ

Public TV
2 Min Read

ನವದೆಹಲಿ: ಭಾರತದ ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯಕ್ಕೆ ಪಾಕಿಸ್ತಾನ ಕಾರಣ ಎಂದು ಆಪಾದಿಸಿದ ಉತ್ತರ ಪ್ರದೇಶ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಪಾಕಿಸ್ತಾನ ಕೈಗಾರಿಕೆಗಳ ನಿಷೇಧವನ್ನು ನೀವು ಬಯಸುತ್ತೀರಾ ಎಂದು ಯುಪಿ ಸರ್ಕಾರವನ್ನು ಸುಪ್ರೀಂ ಪ್ರಶ್ನಿಸಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಹೆಚ್ಚಳಕ್ಕೆ ಉತ್ತರ ಪ್ರದೇಶದ ಕೈಗಾರಿಕೆಗಳು ಕಾರಣವಲ್ಲ. ಪಾಕಿಸ್ತಾನದಿಂದ ಬರುತ್ತಿರುವ ಕಲುಷಿತ ಗಾಳಿಯಿಂದ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿದೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ಪೀಠವು, ಯುಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಹಾಗಾದರೆ ನೀವು, ಪಾಕಿಸ್ತಾನದ ಕೈಗಾರಿಕೆಗಳ ನಿಷೇಧವನ್ನು ಬಯಸುತ್ತೀರಾ ಎಂದು ಖಾರವಾಗಿ ಪ್ರಶ್ನಿಸಿದೆ. ಇದನ್ನೂ ಓದಿ: ಡಿ.4 ರಂದು ಆಂಧ್ರಪ್ರದೇಶ, ಒಡಿಶಾಗೆ ಅಪ್ಪಳಿಸಲಿರುವ ಜವಾದ್ ಚಂಡಮಾರುತ

ಯುಪಿ ಸರ್ಕಾರದ ಪರವಾಗಿ ಹಿರಿಯ ವಕೀಲ ರಂಜಿತ್‌ ಕುಮಾರ್‌ ವಾದ ಮಂಡಿಸಿ, ಪಾಕಿಸ್ತಾನದಿಂದ ಬರುತ್ತಿರುವ ಮಾಲಿನ್ಯಕಾರಕ ಗಾಳಿಯು ದೆಹಲಿಯ ವಾಯು ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ. ಆದರೆ ಉತ್ತರ ಪ್ರದೇಶದಲ್ಲಿ ನಡೆಸಿದ 8 ಗಂಟೆಗಳ ಕಾರ್ಯಾಚರಣೆಯಿಂದ ಕಬ್ಬು ಮತ್ತು ಹಾಲಿನ ಉದ್ಯಮಗಳ ಮೇಲೆ ಪರಿಣಾಮ ಉಂಟಾಗಿದೆ ಎಂದು ಪ್ರತಿಪಾದಿಸಿದ್ದರು. ಈ ವೇಳೆ ವಕೀಲರ ವಿರುದ್ಧ ಗರಂ ಆದ ಸಿಜೆಐ ಎನ್‌.ವಿ.ರಮಣ ನೇತೃತ್ವದ ಪೀಠ, ಮೊದಲು ಆಯೋಗದ ಮೊರೆ ಹೋಗಿ, ವಾಯುಮಾಲಿನ್ಯದ ಪ್ರಮುಖ ಸಮಸ್ಯೆಗಳ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಹೇಳಿ ಎಂದು ಸೂಚಿಸಿತು.

ವಾಯುಗುಣಮಟ್ಟ ನಿರ್ವಹಣೆ ಆಯೋಗವು ರಾಜಧಾನಿಯಲ್ಲಿನ ವಾಯುಮಾಲಿನ್ಯ ಪರಿಸ್ಥಿತಿಯನ್ನು ಪರಿಶೀಲಿಸಲು ಕಾರ್ಯಪಡೆಯೊಂದನ್ನು ರಚಿಸಿದೆ. ಈ ಹಿನ್ನೆಲೆಯಲ್ಲಿ, ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವನ್ನು ನಿಯಂತ್ರಿಸಲು ಕೆಲವು ಕ್ರಮಗಳನ್ನು ಕೈಗೊಳ್ಳುವಂತೆ ಆಯೋಗಕ್ಕೆ ಸುಪ್ರೀಂ ಕೋರ್ಟ್‌ 24 ಗಂಟೆಗಳ ಗಡುವು ನೀಡಿದೆ. ಇದನ್ನೂ ಓದಿ: ಕೇರಳ ವಿದ್ಯಾರ್ಥಿಗಳ ಬೀದಿರಂಪಾಟ – ಪೊಲೀಸರ ಮೇಲೆ ಹಲ್ಲೆ

ಪರಿಸರ ಹೋರಾಟಗಾರ ಆದಿತ್ಯ ದುಬೆ ಮತ್ತು ಕಾನೂನು ವಿದ್ಯಾರ್ಥಿ ಅಮನ್‌ ಬಂಕಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಸಣ್ಣ ಮತ್ತು ಅತಿ ಸಣ್ಣ ಕೃಷಿ ವಲಯದ ರೈತರಿಗೆ ಹುಲ್ಲು ತೆಗೆಯುವ ಯಂತ್ರಗಳನ್ನು ಉಚಿತವಾಗಿ ಒದಗಿಸಲು ನಿರ್ದೇಶನ ನೀಡುವಂತೆ ಕೋರಿ ದುಬೆ ಅವರು ಸುಪ್ರೀಂಗೆ ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *