ಅಮೇಜಾನ್ ಪ್ರೈಮ್‍ಗೆ ಲಗ್ಗೆಯಿಟ್ಟ ಗಂಟುಮೂಟೆ!

Public TV
2 Min Read

ರೂಪಾ ರಾವ್ ನಿರ್ದೇಶನದಲ್ಲಿ ಮೂಡಿ ಬಂದು ತೆರೆ ಕಂಡಿದ್ದ ಚಿತ್ರ ಗಂಟುಮೂಟೆ. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳ ಪಾಲಿಗೂ ವಿಶಿಷ್ಟವಾದ ಕಥೆಯನ್ನೊಳಗೊಂಡಿದ್ದು, ಈ ಚಿತ್ರಕ್ಕೆ ಪ್ರೇಕ್ಷಕರ ಕಡೆಯಿಂದ ಅಭೂತಪೂರ್ವ ಬೆಂಬಲ ಸಿಕ್ಕಿತ್ತು. ಸ್ಟಾರ್ ನಟರ ಸಿನಿಮಾಗಳ ಮುಂದೆಯೂ ಸೆಣೆಸಾಡಿ ಯಶಸ್ವೀ ಪ್ರದರ್ಶನ ಕಂಡು ಗೆದ್ದಿತ್ತು. ಬಿಡುಗಡೆಗೂ ಮುನ್ನವೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಈ ಸಿನಿಮಾವನ್ನು ನೀವು ಇನ್ನು ಅಮೇಜಾನ್ ಪ್ರೈಮ್‍ನಲ್ಲಿಯೂ ಕಣ್ತುಂಬಿಕೊಳ್ಳಬಹುದು. ಸಮಯ ಸಿಕ್ಕಾಗಲೆಲ್ಲಾ ಹೊಸ ಬಗೆಯ ಸಿನಿಮಾ ನೋಡಿದ ತೃಪ್ತಿಯನ್ನು ನಿಮ್ಮದಾಗಿಸಿಕೊಳ್ಳಬಹುದು.

ಅಮೇಜಾನ್ ಪ್ರೈಮ್ ಎಂಬುದು ಕಡಿಮೆ ಅವಧಿಯಲ್ಲಿ ಹೆಚ್ಚೆಚ್ಚು ಪ್ರೇಕ್ಷಕರನ್ನು ತಲುಪಿಕೊಳ್ಳುವ ಪರಿಣಾಮಕಾರಿ ಪ್ಲಾಟ್‍ಫಾರಂ. ಆದರೆ ಅದಕ್ಕೆ ಕನ್ನಡ ಸಿನಿಮಾವೊಂದು ಆಯ್ಕೆಯಾಗೋದೇನು ಸಲೀಸಿನ ಸಂಗತಿಯಲ್ಲ. ಅದಕ್ಕೆ ಎಂಥವರನ್ನೂ ಸೆಳೆದುಕೊಳ್ಳುವ ಕಂಟೆಂಟು ಅವಶ್ಯ. ಬಿಡುಗಡೆಯಾಗಿ ಎಲ್ಲರಿಂದಲೂ ಮೆಚ್ಚುಗೆ ಗಳಿಸಿಕೊಂಡಿದ್ದ ಗಂಟುಮೂಟೆ ಸಲೀಸಾಗಿಯೇ ಅಮೇಜಾನ್ ಪ್ರೈಂ ಸೇರಿಕೊಂಡಿದೆ. ಈ ಮೂಲಕ ಮತ್ತಷ್ಟು ಹೊಸ ಪ್ರೇಕ್ಷಕರನ್ನು ತಲುಪಿಕೊಳ್ಳಲಿದೆ. ಇದರೊಂದಿಗೆ ನಿರ್ದೇಶಕಿ ರೂಪಾ ರಾವ್ ಅವರ ಪ್ರತಿಭೆ, ಪರಿಶ್ರಮಗಳಿಗೂ ಗೌರವ ಮತ್ತು ಬೆಲೆ ಸಿಕ್ಕಂತಾಗಿದೆ. ಗಂಟುಮೂಟೆಯ ಹಕ್ಕುಗಳನ್ನು ಒಂದೊಳ್ಳೆ ಮೊತ್ತಕ್ಕೆ ಅಮೇಜಾನ್ ಪ್ರೈಮ್ ಖರೀದಿಸಿದೆ.

ಗಂಟುಮೂಟೆಯೊಳಗೆ ನಿರ್ದೇಶಕಿ ರೂಪಾ ರಾವ್ ಬೆರಗುಗಳನ್ನೇ ದೃಶ್ಯವಾಗಿಸಿದ್ದಾರೆ. ಇದು ತೊಂಬತ್ತರ ದಶಕದಲ್ಲಿ ನಡೆಯೋ ಹೈಸ್ಕೂಲು ದಿನಗಳ ಪ್ರೇಮ ಕಥಾನಕದ ಚಿತ್ರ. ತೀರಾ ಹೆಚ್ಚೇನೂ ಹಳೆಯದಲ್ಲವಾದರೂ ಆ ಕಾಲದ ಫೀಲಿಂಗ್ಸ್ ಗೂ ಈ ಕಾಲದ್ದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅದು ಭಾವನೆಗಳೆಲ್ಲ ಬೆರಳ ಮೊನೆಗೆ ಬಾರದೆ ಹೃದಯದಲ್ಲಿಯೇ ಬೆಚ್ಚಗೆ ಉಳಿದುಕೊಂಡಿದ್ದ ಕಾಲ. ಅಂತಹ ಹೊತ್ತಿನಲ್ಲಿ ಸಿನಿಮಾ ದೃಶ್ಯಗಳಿಗೂ ಬದುಕಿಗೂ ಥಳುಕು ಹಾಕಿಕೊಂಡ ಮನಸ್ಥಿತಿಯ ಹುಡುಗಿಯ ಕಣ್ಣಲ್ಲಿ ಪ್ರೇಮದ ಭಾವಗಳನ್ನು ನೋಡೋ ಪ್ರಯತ್ನ ಗಂಟುಮೂಟೆಯಲ್ಲಿದೆ. ಅದು ಯಾರೇ ಆದರೂ ಮುದಗೊಳ್ಳುವಂತಿದೆ.

ಈ ಸಿನಿಮಾವನ್ನು ಆರಂಭಿಕವಾಗಿ ನೋಡಿದ್ದವರೇ ಇದೊಂದು ಅಪರೂಪದ ಕಥೆ ಹೊಂದಿರೋ ಚಿತ್ರವೆಂದು ಕೊಂಡಾಡಿದ್ದರು. ಅಷ್ಟಕ್ಕೂ ಬಿಡುಗಡೆಯ ಪೂರ್ವದಲ್ಲಿಯೇ ಗಂಟುಮೂಟೆಯ ಹವಾ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಮಿರುಗಿತ್ತು. ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡಿದ್ದ ಈ ಚಿತ್ರ ಪ್ರಶಸ್ತಿಯನ್ನೂ ಬಾಚಿಕೊಂಡಿತ್ತು. ಆ ನಂತರದಲ್ಲಿ ಪ್ರಚಾರಕ್ಕಾಗಿ ಯಾವ ಸರ್ಕಸ್ಸುಗಳನ್ನೂ ನಡೆಸದೆ ಒಂದೇ ಒಂದು ಟ್ರೇಲರ್ ಮೂಲಕ ಎಲ್ಲರನ್ನೂ ಸೆಳೆದುಕೊಂಡಿದ್ದ ಈ ಚಿತ್ರ ಬಿಡುಗಡೆಯ ನಂತರದಲ್ಲಿ ಪವಾಡವನ್ನೇ ಸೃಷ್ಟಿಸಿತ್ತು. ತೊಂಬತ್ತರ ದಶಕದ ಪ್ರೇಮ ಕಥೆಗೆ ಪ್ರೇಕ್ಷಕರೆಲ್ಲ ಫಿದಾ ಆದ ಕಾರಣ ಗೆಲುವನ್ನೂ ಕಂಡಿತ್ತು. ಇನ್ನುಮುಂದೆ ಗಂಟುಮೂಟೆ ಅಮೇಜಾನ್ ಪ್ರೈಮ್‍ನಲ್ಲಿಯೂ ನೋಡಲು ಸಿಗಲಿದೆ.

 

Share This Article
Leave a Comment

Leave a Reply

Your email address will not be published. Required fields are marked *