ಗ್ರಾಮೀಣ ಭಾಗದ ಜನರಿಗೆ ಕೇಸರಿ ಬಣ್ಣದ ಬಸ್ ಸೇವೆ ಆರಂಭಿಸಿದ ಯೋಗಿ ಸರ್ಕಾರ

Public TV
2 Min Read

ಲಕ್ನೋ: ಉತ್ತರ ಪ್ರದೇಶದ ಯೋಗಿ ಸರ್ಕಾರ ಬುಧವಾರ ರಾಜ್ಯ ಗ್ರಾಮೀಣ ಸಾರಿಗೆ ವ್ಯವಸ್ಥೆಗೆ ಹೊಸ ಕೇಸರಿ ಬಣ್ಣದ ಸಾರಿಗೆ ಬಸ್‍ಗಳ ಸೇವೆಯನ್ನು ಆರಂಭಿಸಿದ್ದು, ಸಿಎಂ ಯೋಗಿ ಅದಿತ್ಯನಾಥ್ ಬುಧವಾರ 50 ಬಸ್‍ಗಳಿಗೆ ಚಾಲನೆ ನೀಡಿದರು.

ಬಸ್ ಸೇವೆಗೆ ಸರ್ಕಾರಿ ಸಾರಿಗೆ ಇಲಾಖೆಯು `ಸಂಕಲ್ಪ್’ ಎಂದು ಹೆಸರಿಟ್ಟಿದ್ದು, ಸುಮಾರು 40 ಸಾವಿರ ಹಳ್ಳಿಗಳಿಗೆ ಮುಂದಿನ ನಾಲ್ಕು ವರ್ಷಗಳಲ್ಲಿ ಸೇವೆಯನ್ನು ನೀಡುವ ಗುರಿಯನ್ನು ಹೊಂದಿದೆ.

ಪ್ರಸ್ತುತ ಈ ಯೋಜನೆಯು ರಾಜ್ಯದ ವಾರಣಾಸಿ, ಗೋರಖ್‍ಪುರ, ಕಾನ್‍ಪುರ, ಅಲಹಾಬಾದ್, ಬರೇಲಿ ಮತ್ತು ಮೊರಾದಾಬಾದ್ ಜಿಲ್ಲೆಗಳ ಗ್ರಾಮಗಳಿಗೆ ಸೇವೆಯನ್ನು ನೀಡಲಿದೆ. 16 ಸಾವಿರ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಒದಗಿಸಲು 1,500 ಬಸ್‍ಗಳು ಸಿದ್ಧವಾಗಿವೆ.

`ಗೌರವ್ ಪಥ್’ ರಸ್ತೆ ನಿರ್ಮಾಣ ಯೋಜನೆಯನ್ನು ಆರಂಭಿಸುವ ಮೂಲಕ ಯೋಗಿ ಅದಿತ್ಯನಾಥ್ ಸರ್ಕಾರವು ರಾಜ್ಯದ ಕುಗ್ರಾಮಗಳಿಗೂ ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ನಿರ್ಮಾಣ ಮಾಡುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಸೇವೆಯನ್ನು ನೀರುವ ಉದ್ದೇಶವನ್ನು ಹೊಂದಿದೆ. ಹುತಾತ್ಮ ಯೋಧರ ಗ್ರಾಮಗಳಿಗೆ ಗೌರವ್ ಪಥ್/ಸಂಪರ್ಕ ರಸ್ತೆಗಳನ್ನ ನಿರ್ಮಿಸಲು ಬಿಜೆಪಿ ಸರ್ಕಾರ ಯೋಜನೆ ರೂಪಿಸಿದ್ದು, ಈ ಗ್ರಾಮಗಳಿಗೆ ಬಸ್ ವ್ಯವಸ್ಥೆ ಸಂಪರ್ಕ ಕಲ್ಪಿಸಲಿದೆ.

ಈ ಹಿಂದೆ ಉತ್ತರ ಪ್ರದೇಶದಲ್ಲಿ ಆಡಳಿತ ವಹಿಸಿದ್ದ ಸಮಾಜವಾದಿ ಪಕ್ಷವು ಲೋಹಿಯಾ ಬಸ್ ಸೇವಾ ಯೋಜನೆಯನ್ನು ಜಾರಿಗೆ ತಂದು ಶೇ.25 ರಷ್ಟು ರಿಯಾಯಿತಿ ದರದಲ್ಲಿ ಸೇವೆಯನ್ನು ನೀಡುತ್ತಿದೆ. ಆದರೆ ಸಂಕಲ್ಪ್ ಬಸ್‍ಗಳಲ್ಲಿ ಸಾಮಾನ್ಯ ಟಿಕೆಟ್ ದರವೇ ಇದೆ. ಏಕೆಂದರೆ ಸಂಕಲ್ಪ್ ಯೋಜನೆಗೆ ಧನಸಹಾಯದ ಕೊರತೆ ಇದ್ದು, ಮುಂದಿನ ದಿನಗಳಲ್ಲಿ ಧನಸಹಾಯ ಸಿಕ್ಕರೆ ರಿಯಾಯಿತಿನ್ನು ನೀಡಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುಮಾರು 38,254 ಗ್ರಾಮಗಳನ್ನು ಈ ಯೋಜನೆ ಅಡಿಯಲ್ಲಿ ಗುರುತಿಸಲಾಗಿದೆ ಎಂದು ಉತ್ತರ ಪ್ರದೇಶ ಕಿರಿಯ ಸಾರಿಗೆ ಸಚಿವ ಸ್ವಾತಂತ್ ದೇವ್ ಸಿಂಗ್ ಮಾಹಿತಿ ನೀಡಿದ್ದಾರೆ.

ಪ್ರಯಾಣಿಕರಿಗೆ ಅನುಕೂಲಕಾರ ಹಾಗೂ ಸುರಕ್ಷಿತ ಸೇವೆ ನೀಡುವುದು ಸರ್ಕಾರದ ಉದ್ದೇಶವಾಗಿದೆ. ಪ್ರಮುಖವಾಗಿ ಜಿಲ್ಲಾ ಕೇಂದ್ರಗಳಿಂದ ಗ್ರಾಮಗಳಿಗೆ ಹೆಚ್ಚು ಪ್ರಯಾಣ ಸೇವೆಯನ್ನು ನೀಡಲಿದ್ದು, ಖಾಸಗಿ ಸೇವಾ ಸಂಸ್ಥೆಗೆ ಮುಂದಿನ ದಿನಗಳಲ್ಲಿ ಬಸ್‍ಗಳ ನಿರ್ವಹಣೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಸಂಕಲ್ಪ್ ಯೋಜನೆಯಿಂದ ಪ್ರತಿವರ್ಷ 9,563 ಹಳ್ಳಿಗಳಿಗೆ ಸೇವೆಯನ್ನು ವಿಸ್ತರಿಸುವ ಚಿಂತನೆಯನ್ನು ನಡೆಸಿದ್ದು, ನಾಲ್ಕು ವರ್ಷಗಳಲ್ಲಿ ರಾಜ್ಯದ ಎಲ್ಲಾ ಗ್ರಾಮಗಳು ಬಸ್ ವ್ಯವಸ್ಥೆಯನ್ನು ಹೊಂದಿರಲಿವೆ. ಉತ್ತರ ಪ್ರದೇಶ ಸಾರಿಗೆ ಸಂಸ್ಥೆಯು ಇದುವರೆಗೂ ಸುಮಾರು 5 ಸಾವಿರ ಹಳ್ಳಿಗಳಿಗೆ ತನ್ನ ಸೇವೆಯನ್ನು ನೀಡುತ್ತಿದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *