ಪುಲ್ವಾಮಾ ದಾಳಿ ಬಗ್ಗೆ ಕೇಳಿದ್ದಕ್ಕೆ ವೇದಿಕೆಯಲ್ಲಿ ಕಣ್ಣೀರಿಟ್ಟ ಯುಪಿ ಸಿಎಂ

Public TV
1 Min Read

ಲಕ್ನೋ: ವಿದ್ಯಾರ್ಥಿಯೊಬ್ಬ ಪುಲ್ವಾಮಾ ದಾಳಿಯ ಬಗ್ಗೆ ಕೇಳಿದ್ದಕ್ಕೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ವೇದಿಕೆ ಮೇಲೆಯೇ ಕಣ್ಣೀರಿಟ್ಟಿದ್ದಾರೆ.

ಲಕ್ನೋದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರು ಎಂಜನಿಯರಿಂಗ್ ವಿದ್ಯಾರ್ಥಿಗಳ ಜೊತೆಗೆ ‘ಯುವ್ ಕೆ ಮನ್ ಕಿ ಬಾತ್’ ಸಂವಾದದಲ್ಲಿ ಶುಕ್ರವಾರ ನಡೆಸಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬ ಎದ್ದು ನಿಂತು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪುಲ್ವಾಮಾ ಉಗ್ರರ ವಿರುದ್ಧ ಯಾವ ಕ್ರಮಕೈಗೊಳ್ಳುತ್ತಿದೆ. ಉಗ್ರ ಸಂಘಟನೆಗಳು ನಮ್ಮ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದಾರೆ ಎಂದು ಪ್ರಶ್ನೆ ಕೇಳಿದ.

ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ದಾಳಿ ಉಗ್ರರ ಮುಳುಗಡೆಯ ಸೂಚಕವಾಗಿದೆ. ಈ ಮೂಲಕ ಭಯೋತ್ಪಾದನೆ ಕೊನೆಗೊಳ್ಳುವ ಹಂತ ತಲುಪಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೇ ಅದಕ್ಕೆ ಅಂತ್ಯ ಹಾಡುತ್ತಾರೆ ಎಂದು ಸಿಎಂ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದರು.

ಈ ಮೂಲಕ ಯೋಗಿ ಆದಿತ್ಯನಾಥ್ ವಿದ್ಯಾರ್ಥಿಗಳಿಂದ ಮೆಚ್ಚುಗೆಯನ್ನು ಪಡೆದರು. ಆದರೆ ಮುಂದಿನ ಪ್ರಶ್ನೆಗೆ ಕಾಯುತ್ತಿದ್ದ ಅವರು ಭಾವನಾತ್ಮಕವಾಗಿ ಕಾಣಿಸಿಕೊಂಡರು. ಬಳಿಕ ತಮ್ಮ ಜೇಬಿನಲ್ಲಿದ್ದ ಕರವಸ್ತ್ರವನ್ನು ತೆಗೆದುಕೊಂಡು ಮೂಗು ಒರೆಸಿಕೊಳ್ಳುತ್ತ ಕಣ್ಣೀರು ಸುರಿಸಿ, ಮತ್ತೆ ಮೈಕ್ ಹಿಡಿದು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಾದರು.

ಪುಲ್ವಾಮಾ ದಾಳಿಯಿಂದಾಗಿ ಭದ್ರತಾ ಪಡೆಗಳು ಕಾರ್ಯಾಚರಣೆ ಚುರುಕುಗೊಳಿಸಿದ್ದವು. ಇದರಿಂದಾಗಿ ಕೇವಲ 48 ಗಂಟೆಗಳೊಳಗೆ ಸಂಚು ರೂಪಿಸಿದ್ದ ಉಗ್ರರನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದರು.

ಪುಲ್ವಾಮಾ ದಾಳಿಯಲ್ಲಿ 40ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದಾರೆ. ಇದರಲ್ಲಿ ಉತ್ತರ ಪ್ರದೇಶದ 12 ಯೋಧರು ಕೂಡ ಇದ್ದಾರೆ ಎಂದು ಹೇಳಿದರು.

ಬಂಧನದಲ್ಲಿರುವ ಇಬ್ಬರು ಶಂಕಿತ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಸದಸ್ಯರ ಕುರಿತು ಪ್ರತಿಕ್ರಿಯೆ ನೀಡಿದ ಯೋಗಿ ಆದಿತ್ಯನಾಥ್ ಅವರು, ರಾಜ್ಯದಲ್ಲಿ ಉಗ್ರರ ಬಂಧನಕ್ಕಾಗಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದೆವೆ. ಈ ನಿಟ್ಟಿನಲ್ಲಿ ಇಬ್ಬರನ್ನು ಬಂಧಿಸಿದ್ದು, ಪುಲ್ವಾಮಾ ದಾಳಿಗೆ ಸಂಬಂಧಿಸಿದ ಮಾಹಿತಿಯನ್ನು ಅವರಿಂದ ಪಡೆಯಲಾಗುತ್ತಿದೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *