ಒಬಿಸಿ ನಾಯಕರಿಂದ ಬಿಜೆಪಿಗೆ ರಾಜೀನಾಮೆ – ದಲಿತರ ಮನೆಯಲ್ಲಿ ಊಟ ಮಾಡಿದ ಯೋಗಿ

Public TV
2 Min Read

ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಹಿಂದುಳಿದ ಸಮುದಾಯದ ನಾಯಕರು ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರುತ್ತಿದ್ದಾರೆ. ಇದರ ನಡುವೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ದಲಿತರ ಮನೆಯಲ್ಲಿ ಊಟ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

ಬಿಜೆಪಿ ವಿರುದ್ಧ ಬಂಡಾಯ ಎದ್ದ ಇಬ್ಬರು ಮಾಜಿ ಸಚಿವ ಪಕ್ಷಕ್ಕೆ ರಾಜೀನಾಮೆ ನೀಡಿ ಅಖಿಲೇಶ್‌ ಯಾದವ್‌ ಅವರ ಎಸ್‌ಪಿ ಪಕ್ಷ ಸೇರಿದ್ದಾರೆ. ಹಿಂದುಳಿದ ನಾಯಕರೆಲ್ಲ ಬಿಜೆಪಿ ತೊರೆಯುತ್ತಿರುವುದರಿಂದ ಒಬಿಸಿ ಮತದಾರರ ವೋಟುಗಳು ಕೈತಪ್ಪಬಹುದು ಎಂಬ ಆತಂಕ ಬಿಜೆಪಿಯಲ್ಲಿ ಮೂಡಿದೆ. ಈ ಮಧ್ಯೆಯೇ ಯೋಗಿ ಆದಿತ್ಯನಾಥ್‌ ಅವರು ಗೋರಖ್‌ಪುರದಲ್ಲಿ ದಲಿತರ ಮನೆಯಲ್ಲಿ ಊಟ ಮಾಡಿದ್ದಾರೆ. ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಮತ್ತೊಂದು ದಿಕ್ಕಿನ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಹೂವಿನ ಮಾರುಕಟ್ಟೆಯಲ್ಲಿ ಇಟ್ಟಿದ್ದ ಬ್ಯಾಗ್‌ನಲ್ಲಿ ಬಾಂಬ್ ಪತ್ತೆ – ಜನರಲ್ಲಿ ಆತಂಕ

ಈ ಕುರಿತು ಸಿಎಂ ಯೋಗಿ ಆದಿತ್ಯನಾಥ್‌ ಟ್ವಿಟರ್‌ನಲ್ಲಿ, ಸಾಮಾಜಿಕ ಸೌಹಾರ್ದತೆಯ ಗುರಿಯು ಬೆಳೆಯುತ್ತಲೇ ಇದೆ. ಇಂದು ಗೋರಖ್‌ಪುರದ ಜುಂಗಿಯಾದಲ್ಲಿರುವ ಅಮೃತ್‌ ಲಾಲ್‌ ಭಾರತೀಜಿಯವರ ಮನೆಯಲ್ಲಿ ಕಿಚಡಿ ಮತ್ತು ಪ್ರಸಾದ ಸ್ವೀಕರಿಸುವ ಸೌಭಾಗ್ಯ ನನಗೆ ಸಿಕ್ಕಿತು. ತುಂಬಾ ಧನ್ಯವಾದಗಳು ಭಾರತೀಜಿ ಎಂದು ತಿಳಿಸಿದ್ದಾರೆ.

ಬಿಜೆಪಿ ಸರ್ಕಾರ ಯಾವುದೇ ತಾರತಮ್ಯವಿಲ್ಲದೇ ಸಮಾಜದ ಪ್ರತಿಯೊಂದು ವರ್ಗದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಅಖಿಲೇಶ್‌ ಯಾದವ್‌ ಅವರ ಐದು ವರ್ಷದ ಆಡಳಿತದಲ್ಲಿ ಪಿಎಂ ಆವಾಸ್‌ ಯೋಜನೆಯಡಿ ಕೇವಲ 18,000 ಮನೆಗಳನ್ನು ಮಾತ್ರ ನಿರ್ಮಿಸಿಕೊಟ್ಟಿದ್ದರು. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 45 ಲಕ್ಷ ಫಲಾನುಭವಿಗಳಿಗೆ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಎಸ್‌ಪಿ ಅವಧಿಯಲ್ಲಿ ಸಾಮಾಜಿಕ ಶೋಷಣೆಯಾಗಿದೆ, ಸಾಮಾಜಿಕ ನ್ಯಾಯ ಸಿಕ್ಕಿಲ್ಲ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ನೊವಾಕ್ ಜೊಕೊವಿಕ್ ವೀಸಾ 2ನೇ ಬಾರಿ ರದ್ದು – 3 ವರ್ಷ ಆಸ್ಟ್ರೇಲಿಯಾಗೆ ಪ್ರವೇಶವಿಲ್ಲ

ಸ್ವಾಮಿ ಪ್ರಸಾದ್‌ ಮೌರ್ಯ, ಧರಮ್‌ ಸಿಂಗ್‌ ಸೈನಿ ಅವರು ಬಿಜೆಪಿ ತೊರೆದು ಸಮಾಜವಾದಿ ಪಕ್ಷವನ್ನು ಸೇರಿದ್ದಾರೆ. ಬಿಜೆಪಿ ತೊರೆದ ನಾಯಕರು, ಯೋಗಿ ಆದಿತ್ಯನಾಥ್‌ ನೇತೃತ್ವದ ಆಡಳಿತವು ಉತ್ತರ ಪ್ರದೇಶದ ಹಿಂದುಳಿದ ವರ್ಗಗಳ ಸಮಸ್ಯೆಗಳನ್ನು ಆಲಿಸದೇ ಕಿವುಡಾಗಿದೆ. ಈ ಹಿನ್ನೆಲೆಯಲ್ಲಿ ನಾವು ಪಕ್ಷವನ್ನು ತೊರೆದಿದ್ದೇವೆ ಎಂದು ದೂರಿದ್ದರು.

Share This Article
Leave a Comment

Leave a Reply

Your email address will not be published. Required fields are marked *