Paris Paralympics | ಡಿಸ್ಕಸ್ ಥ್ರೋನಲ್ಲಿ ಭಾರತದ ಯೋಗೇಶ್‌ ಕಥುನಿಯಾಗೆ ಬೆಳ್ಳಿ

Public TV
2 Min Read

ಪ್ಯಾರಿಸ್‌: ಪ್ರಸ್ತುತ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ (Paris Paralympics) ಭಾರತೀಯ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ಮುಂದುವರಿಸಿದ್ದು, ಭಾರತದ ಖಾತೆಗೆ ಮತ್ತೊಂದು ಪದಕ ಬಂದಿದೆ. ಸೋಮವಾರ ಭಾರತದ ಯೋಗೇಶ್‌ ಕಥುನಿಯಾ (Yogesh Kathuniya) ಅವರು ಪುರುಷರ ಡಿಸ್ಕಸ್‌ ಥ್ರೋ ಎಫ್‌-56 ಸ್ಪರ್ಧೆಯಲ್ಲಿ 2ನೇ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ದಿದ್ದಾರೆ.

42.22 ಮೀಟರ್‌ ಡಿಸ್ಕಸ್‌ ಎಸೆಯುವ (Discus Throw, )ಮೂಲಕ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಭಾರತದ ಭತ್ತಳಿಕೆಗೆ 8ನೇ ಪದಕ ಸೇರ್ಪಡೆಯಾಗಿದೆ. ಯೋಗೇಶ್‌ ಸತತ 2ನೇ ಬಾರಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಮೂರು ವರ್ಷಗಳ ಹಿಂದೆ ಟೋಕಿಯೋನಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಯೋಗೇಶ್‌ ಚೊಚ್ಚಲ ಆವೃತ್ತಿಯಲ್ಲೇ ಪದಕ ಗೆದ್ದ ದಾಖಲೆ ತಮ್ಮದಾಗಿಸಿಕೊಂಡಿದ್ದರು. ಇದನ್ನೂ ಓದಿ: Paris Paralympics 2024 | ಭಾರತಕ್ಕೆ ಮತ್ತೊಂದು ಪದಕ – ಕಂಚಿಗೆ ರುಬಿನಾ ಶೂಟ್‌

27 ವರ್ಷದ ಆಟಗಾರ ಈವೆಂಟ್‌ನಲ್ಲಿ 42.22 ಮೀಟರ್ ದೂರಕ್ಕೆ ಅತ್ಯುತ್ತಮವಾಗಿ ಎಸೆದಿದ್ದಾರೆ. ಇದು ಅವರ ಋತುವಿನ ಅತ್ಯುತ್ತಮ ಪ್ರದರ್ಶನವಾಗಿತ್ತು. ಬ್ರೆಜಿಲ್‌ನ ಕ್ಲೌಡಿನಿ ಬಟಿಸ್ಟಾ ಡಾಸ್ ಸ್ಯಾಂಟೋಸ್ 46.86 ಮೀಟರ್‌ಗಳ ಪ್ಯಾರಾಲಿಂಪಿಕ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಗ್ರೀಸ್‌ನ ಕಾನ್‌ಸ್ಟಾಂಟಿನೋಸ್ ಝೌನಿಸ್ 41.32 ಎಸೆದು ಕಂಚಿನ ಪದಕ ಗೆದ್ದರೆ, ಸ್ಲೋವಾಕಿಯಾದ ಡುಸಾನ್ ಲಕ್ಜ್ಕೊ 41.20 ಮೀಟರ್‌ ದೂರ ಎಸೆದು 4ನೇ ಸ್ಥಾನ ಪಡೆದರು. ಸೆರ್ಬಿಯಾದ ನೆಬೊಜ್ಸಾ ಎರಿಕ್ ಅರ್ಹತೆ ಪಡೆದರೂ ಫೈನಲ್‌ನಲ್ಲಿ ಭಾಗವಹಿಸಲಿಲ್ಲ. ಇದನ್ನೂ ಓದಿ: ಅಂಡರ್ 19 ಕ್ರಿಕೆಟ್ ತಂಡಕ್ಕೆ ಆಯ್ಕೆ| ಎಲ್ಲಾ ಕನ್ನಡಿಗರಿಗೆ ನಮಸ್ಕಾರ : ಸಮಿತ್ ದ್ರಾವಿಡ್ ಮೊದಲ ಪ್ರತಿಕ್ರಿಯೆ

Share This Article