ಯೋಗ, ಪ್ರಕೃತಿ ಚಿಕಿತ್ಸೆ ಅನಿವಾರ್ಯ: ಡಾ. ವೀರೇಂದ್ರ ಹೆಗ್ಗಡೆ

Public TV
1 Min Read

ಉಡುಪಿ: ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಇಂದು ಅಗತ್ಯವಾಗಿದೆ. ನಿಸರ್ಗದ ಮಡಿಲಲ್ಲಿ ಆಸ್ಪತ್ರೆ ಇರುವುದರಿಂದ ಇಲ್ಲಿ ದೊರೆಯುವ ಚಿಕಿತ್ಸೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.

ಉಡುಪಿ ಜಿಲ್ಲೆಯ ಮೂಡುಗಿಳಿಯಾರಿನ ಯೋಗಬನದ ಪ್ರಕೃತಿ ಮಡಿಲಲ್ಲಿ ತಲೆ ಎತ್ತಿರುವ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ಉದ್ಘಾಟಿಸಿದರು. ಬಳಿಕ ಡಿವೈನ್ ಪಾರ್ಕ್ ಟ್ರಸ್ಟ್‍ನ ಅಂಗ ಸಂಸ್ಥೆಯಾದ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನವನ್ನು ಉದ್ಘಾಟಿಸಿ ಡಾ. ವೀರೇಂದ್ರ ಹೆಗ್ಗಡೆಯವರು ಮಾತನಾಡಿದರು. ವಾಸ್ತುಶಿಲ್ಪ ಹಾಗೂ ಪ್ರಾಚೀನ ಶೈಲಿಯಿಂದಾಗಿ ಆಸ್ಪತ್ರೆ ಪ್ರಕೃತಿಗೆ ಹತ್ತಿರವಾಗಿದೆ. ಪರಿಸರಸ್ನೇಹಿ ವಸ್ತುಗಳನ್ನು ಬಳಕೆ ಮಾಡಿಕೊಂಡಿರುವುದು ಇದರ ಹೆಮ್ಮೆ ಎಂದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಇಲ್ಲಿಯ ಪರಿಸರದಲ್ಲಿ ಚಿಕಿತ್ಸೆ ಸಿಗುವುದು ನಮ್ಮ ಪುಣ್ಯ. ಆಧುನಿಕತೆಯಿಂದಾಗಿ ಯಾವಾಗಲೂ ಒತ್ತಡದಲ್ಲಿ ಕೆಲಸ ಮಾಡುವವರು ಇಲ್ಲಿ ಬಂದು ನೆಮ್ಮದಿ ಹುಡುಕಬಹುದು ಎಂದರು.

ಯೋಗ ವಿಶ್ವವಿದ್ಯಾಲಯದ ಕುಲಪತಿಗಳಾದ ಎಚ್.ಆರ್.ನಾಗೇಂದ್ರ ಮಾತನಾಡಿ, ಯೋಗ, ಧ್ಯಾನ ಹಾಗೂ ಪ್ರಕೃತಿ ಚಿಕಿತ್ಸೆ ಸಿಗುವಂತಹ ಜಾಗದಲ್ಲಿ ವಿವೇಕಾನಂದರ ಪ್ರತಿಮೆ ಕಾಣಲು ಸಿಗಲಿದೆ. ಅವರು ನಡೆದ ಹಾದಿ ಇಲ್ಲಿ ನಮಗೆ ನೆನಪಾದರೆ ಅದಕ್ಕಿಂತ ಅರ್ಥಪೂರ್ಣವಾದ ಕೆಲಸ ಬೇರೆ ಇಲ್ಲ ಎಂದು ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿವೈನ್‍ಪಾರ್ಕ್ ಟ್ರಸ್ಟ್ ನ ಆಡಳಿತ ನಿರ್ದೇಶಕ ಉಡುಪ ಮಾತನಾಡಿ, ಶಾಂತಿ, ನೆಮ್ಮದಿ ಅರಸುವವರಿಗೆ ಇದು ಪ್ರಶಸ್ತ ಜಾಗ. ಪ್ರಕೃತಿ ಚಿಕಿತ್ಸೆ ಇಂದು ವಿಶ್ವದಾದ್ಯಂತ ಪಸರಿಸಿದೆ. ಇದಕ್ಕೆ ಕಾರಣ ನಮ್ಮ ಪ್ರಕೃತಿಯಲ್ಲಿಯೇ ಇರುವ ಔಷಧಿ ಗುಣ. ನಾವು ಇದನ್ನು ಬೆಳೆಸಿ ಉಳಿಸಬೇಕಿದೆ ಎಂದರು.

“ರುದ್ರಿ” ಸಿನಿಮಾದ ನಾಯಕಿ ಹಾಗೂ ನಟಿ ಪಾವನಾ ಗೌಡ ಸಮಾಜದ ಸ್ವಾಸ್ಥ್ಯ ಕೆಡಿಸುವಂತಹ ಘಟನೆಗಳು ನಿತ್ಯ ನಡೆಯುತ್ತವೆ. ನಮ್ಮ ಸಿನಿಮಾ “ರುದ್ರಿ” ಕೂಡ ಇಂತದ್ದೇ ಒಂದು ಕಥೆಯನ್ನು ಒಳಗೊಂಡಿದೆ. ಪ್ರಕೃತಿ ನಮ್ಮ ಎಲ್ಲಾ ಪ್ರಶ್ನೆಗಳು ಉತ್ತರ ನೀಡಬಲ್ಲದು. ಹಾಗೇ ಇಲ್ಲಿ ಸಿಗುವ ಚಿಕಿತ್ಸೆ ಕೂಡ ಇಂದು ತೀರಾ ಅನಿವಾರ್ಯವಾಗಿದೆ’ ಎಂದರು. ಕಾರ್ಯಕ್ರಮದಲ್ಲಿ ಡಾ. ಚಂದ್ರಶೇಖರ್ ಉಡುಪ ಹಾಗೂ ವಿವೇಕ್ ಉಡುಪ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *