ಐಟಿ ಬಿಟಿ ಸಿಟಿಯಲ್ಲಿ ಬಯಲು ಶೌಚ? ಬೆಂಗಳೂರಿನಲ್ಲಿ ಇದೆಂಥ ನರಕ ಸ್ವಾಮಿ

Public TV
1 Min Read

ಬೆಂಗಳೂರು: ಬಯಲು ಮುಕ್ತ ಶೌಚಾಲಯ, ಕುಡಿಯುವ ನೀರು ದೇಶದ ಎಲ್ಲ ಜನತೆಗೂ ಸಿಗಲೇಬೇಕು. ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ಆಶಯ. ಆದರೆ ಮೋದಿ ಭಾಷಣಕ್ಕೆ ಮೋದಿ ಪಾರ್ಟಿ ಅಧಿಕಾರಕ್ಕೆ ಬಂದ್ರು ಬೆಲೆ ಸಿಕ್ತಿಲ್ಲ. ಬೆಂಗಳೂರಿನಂತಹ ನಗರದ ಹಲವು ಭಾಗಗಳಲ್ಲಿ ಇಂದು ಕುಡಿಯಲು ನೀರು ಸಿಗುತ್ತಿಲ್ಲ. ಸಿಕ್ಕ ನೀರು ಕುಡಿದ್ರೆ ಶೌಚ ಮಾಡೊದೆಲ್ಲಿ ಅಂತ ಪ್ರಶ್ನಿಸುವವರ ಕಣ್ಣೀರ ಕಥೆ ಇಲ್ಲಿದೆ.

ಸಿಲಿಕಾನ್ ಸಿಟಿ, ಉದ್ಯಾನನಗರಿ, ಐಟಿ ಬಿಟಿ ಹೀಗೆ ಇಡೀ ವಿಶ್ವದಲ್ಲಿ ಬೆಂಗಳೂರು ನಗರಕ್ಕೆ ತನ್ನದೇ ಆದ ಹೆಸರಿದೆ. ಬೆಂಗಳೂರಿನ ಯಶವಂತಪುರ ಆರ್‍ಎಂಸಿ ಯಾರ್ಡ್ ಬರೋಬ್ಬರಿ 68 ಎಕರೆ ವ್ಯಾಪ್ತಿಯಲ್ಲಿದೆ. ಇಲ್ಲಿ ಕೆಲಸ ಮಾಡುವ ಮಹಿಳೆಯರ ಕಷ್ಟ ಯಾರಿಗೂ ಬೇಡ ಅನ್ನುವಂತಾಗಿದೆ. ಎಪಿಎಂಸಿಯಲ್ಲಿ ನಿತ್ಯ ಸಾವಿರಾರು ಮಹಿಳೆಯರು ಕೆಲಸ ಮಾಡ್ತಾರೆ. ಅವರಿಗೆ ಎಪಿಎಂಸಿಯಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲ. ಇದಕ್ಕಾಗಿ ಅವರು ಬಯಲು ಶೌಚಾಲಯಕ್ಕೆ ಹೋಗುವ ದುಸ್ಥಿತಿ ಎದುರಾಗಿದೆ.

ಇಲ್ಲಿರುವ ಬಾತ್‍ರೂಂಗಳನ್ನು ಒಡೆದು ಬಿಲ್ಡಿಂಗ್ ಕಟ್ಟಲಾಗಿದೆ. ಇನ್ನೊಂದು ಶೌಚಾಲಯಕ್ಕೆ ಹೋಗೋದಕ್ಕೆ ಸಾಧ್ಯವಾಗದ ಪರಿಸ್ಥಿತಿ ಇದೆ. ಹೀಗಾಗಿ ನಾವು ಇಲ್ಲಿ ನೀರು ಕುಡಿಯೋಕು ಯೋಚನೆ ಮಾಡ್ತೀವಿ. ಬಯಲು ಶೌಚಾಲಯಕ್ಕೆ ಹೋಗುವ ಅನಿವಾರ್ಯತೆ ಇದೆ ಅಂತಾ ಮಹಿಳೆಯರು ಹೇಳುತ್ತಾರೆ.

ಯಶವಂತಪುರದಲ್ಲಿ 15ಕ್ಕೂ ಹೆಚ್ಚು ಕಡೆ ಶೌಚಾಲಯವಿದೆ. ಆದರೆ ಸ್ವಚ್ಛತೆ ಕೊರತೆ, ನಿರ್ವಹಣೆ ಸಮಸ್ಯೆ ಬಯಲು ಶೌಚಕ್ಕೆ ದಾರಿ ಮಾಡಿಕೊಟ್ಟಿದೆ. ಶೌಚಾಲಯದ ಸಮಸ್ಯೆ ಒಂದೆಡೆಯಾದರೆ ಕುಡಿಯುವ ನೀರಿನ ಸಮಸ್ಯೆ ಮತ್ತೊಂದೆಡೆ. ಹತ್ತಾರು ಎಕರೆಯ ಎಪಿಎಂಸಿಯಲ್ಲಿ ಈಗಲೂ ಕೇವಲ 5 ಕಡೆ ಮಾತ್ರ ನೀರಿನ ವ್ಯವಸ್ಥೆ ಇದೆ. ಅದು ಶುದ್ಧ ಕುಡಿಯುವ ನೀರಲ್ಲ. ಲಕ್ಷ ಜನರ ಸಂಚಾರ ಇರುವ ಕಡೆ ಬೆರಳೆಣಿಕೆಯಷ್ಟು ಶೌಚಾಲಯಗಳಿವೆ. ಕುಡಿಯುವ ನೀರಿನ ನಿರ್ವಹಣೆ ಇಲ್ಲ ಎಂದು ವರ್ತಕರು ಬೇಸರ ವ್ಯಕ್ತಪಡಿಸುತ್ತಾರೆ.

ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ, ಸಚಿವರಾಗಿರುವ ಎಸ್.ಟಿ.ಸೋಮಶೇಖರ್ ಈ ಬಗ್ಗೆ ಗಮನ ಹರಿಸಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *