ಹೌದು, ನನ್ನ ಮಗನ ಕೊಲೆಯಾಗಿದೆ, ಅದನ್ನ ಧರ್ಮದೊಂದಿಗೆ ಲಿಂಕ್ ಮಾಡ್ಬೇಡಿ: ಅಂಕಿತ್ ತಂದೆ

Public TV
2 Min Read

ನವದೆಹಲಿ: ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನನ್ನು ಯುವತಿಯ ಕುಟುಂಬದ ಸದಸ್ಯರು ನಡುರಸ್ತೆಯಲ್ಲಿ ಕತ್ತು ಸೀಳಿ ಕೊಲೆ ಮಾಡಿದ ಹಿನ್ನೆಲೆಯಲ್ಲಿ ಕೊಲೆಯಾದ ಅಂಕಿತ್ ತಂದೆ ಯಶ್‍ ಪಾಲ್ ನನ್ನ ಮಗನ ಕೊಲೆಯನ್ನು ಧರ್ಮದೊಂದಿಗೆ ಲಿಂಕ್ ಮಾಡ್ಬೇಡಿ ಎಂದು ಮನವಿ ಮಾಡಿದ್ದಾರೆ.

ಅಂಕಿತ್(23) ಸಲೀಮಾ ಎಂಬ ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ಆಕೆಯ ಕುಟುಂಬದವರು ಆತನನ್ನು ನಡುರಸ್ತೆಯಲ್ಲಿ ಬರ್ಬರವಾಗಿ ಕತ್ತು ಸೀಳಿ ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರೋ ಅಂಕಿತ್ ತಂದೆ ಯಶ್‍ ಪಾಲ್ ಸಕ್ಸೇನಾ, ಯಾವುದೇ ರೀತಿಯ ಕೆರಳಿಸುವ ಹೇಳಿಕೆಗಳು ನನಗೆ ಬೇಕಾಗಿಲ್ಲ. ಈ ಘಟನೆಯಿಂದ ನನಗೆ ಬಹಳ ಬೇಸರವಾಗಿದೆ. ಮುಸ್ಲಿಂ ವಿರುದ್ಧ ಯಾರೂ ಹಗೆ ಸಾಧಿಸಬೇಡಿ. ನಾನು ಯಾವ ಧರ್ಮ ವಿರೋಧಿಯೂ ಅಲ್ಲ. ಹೌದು, ನನ್ನ ಮಗನ ಕೊಲೆಯಾಗಿದೆ. ಮುಸ್ಲಿಮರೇ ನನ್ನ ಮಗನನ್ನು ಕೊಲೆ ಮಾಡಿದ್ದಾರೆ. ಹಾಗಂತ ಎಲ್ಲಾ ಮುಸ್ಲಿಮರು ಒಂದೇ ರೀತಿ ಎಂದಲ್ಲ. ಕೋಮು ದ್ವೇಷ ಹರಡಲು ನನ್ನನ್ನು ಬಳಸಿಕೊಳ್ಳಬೇಡಿ ಹಾಗೂ ಈ ವಿಚಾರದಲ್ಲಿ ನನ್ನನ್ನು ಎಳೆಯಬೇಡಿ. ನನ್ನ ಮಗನ ಕೊಲೆ ಧರ್ಮಕ್ಕೆ ಲಿಂಕ್ ಮಾಡಬೇಡಿ ಎಂದು ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ನನ್ನ ಮಗನ ಕತ್ತು ಸೀಳಿ ಕೊಲೆ ಮಾಡಿದ 2-3 ಸೆಕೆಂಡ್‍ಗಳಲ್ಲೇ ನನ್ನ ಮಗ ಸತ್ತು ಹೋಗಿದ್ದನು. ಘಟನೆ ನಡೆದ ಸ್ಥಳದಲ್ಲಿ ಸಾವಿರಾರು ಮಂದಿ ಇದ್ದರು. ಆದರೆ ಯಾರೂ ನನ್ನ ಮಗನನ್ನು ಉಳಿಸಲಿಲ್ಲ ಹಾಗೂ ಆಸ್ಪತ್ರೆಗೂ ಕರೆದುಕೊಂಡು ಹೋಗಲಿಲ್ಲ ಎಂದು ಅಂಕಿತ್ ತಂದೆ ಯಶ್‍ ಪಾಲ್ ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ಎನೂ ಮಾಡಿಲ್ಲ. ನಿಮ್ಮ ಮಗಳನ್ನು ನಾನು ಎಲ್ಲೂ ಕರೆದುಕೊಂಡು ಹೋಗಿಲ್ಲ. ನಿಮಗೆ ಏನೇ ಮಾಡಬೇಕಾದರೂ ನನಗೆ ಮಾಡಿ. ನಾನು ಇಲ್ಲಿಯೇ ಇದ್ದೇನೆ ಎಂದು ಅಂಕಿತ್ ಸಲೀಮಾ ಅವರ ತಾಯಿಯ ಮುಂದೆ ಕಿರುಚಾಡಿದ್ದ. ಆದ್ರೆ ಕೆಲವೇ ಸೆಕೆಂಡ್‍ಗಳಲ್ಲಿ ಆತನ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಹೋದ ಮೇಲೆ ನನ್ನ ಮಗನ ರಕ್ತಸಿಕ್ತ ದೇಹವನ್ನು ನೋಡಿ ನಾನು ಶಾಕ್ ಆದೆ. ಅಳುತ್ತಾ, ಕಿರುಚುತ್ತಾ ನನ್ನ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆ. ನನ್ನ ಮಗ ಪ್ರಜ್ಞೆ ತಪ್ಪಿ ಬಿದ್ದಿರಬಹುದು, ವೈದ್ಯರು ಏನಾದರೂ ಮಾಡಿ ನನ್ನ ಮಗನನ್ನು ಉಳಿಸಿಕೊಳ್ಳಬಹುದು. ಅವನು ಬದುಕುಳಿಯಬಹುದು ಎಂಬ ಸಣ್ಣ ಆಸೆ ನನಗಿತ್ತು. ಆದರೆ ಆ ರೀತಿ ಏನೂ ಆಗಲಿಲ್ಲ ಎಂದು ಯಶ್‍ಪಾಲ್ ಕಣ್ಣೀರಿಟ್ಟರು.

ನನ್ನ ಮಗ ಆ ಯುವತಿಯನ್ನು ಪ್ರೀತಿಸುತ್ತಿದ್ದನು ಎಂಬ ವಿಷಯ ನನಗೆ ತಿಳಿದಿರಲಿಲ್ಲ. ಅವರಿಬ್ಬರೂ ಸ್ನೇಹಿತರು ಎಂಬುದು ಮಾತ್ರ ಗೊತ್ತಿತ್ತು ಎಂದು ಅಂಕಿತ್ ತಂದೆ ತಿಳಿಸಿದ್ದಾರೆ. ಮಗನನ್ನು ಕೊಂದ ಆರೋಪಿಗಳನ್ನ ಗಲ್ಲಿಗೇರಿಸಬೇಕು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಯುವತಿಯನ್ನು ಪ್ರೀತ್ಸಿದ್ದಕ್ಕೆ ನಡುರಸ್ತೆಯಲ್ಲಿ ಬಿತ್ತು ಹೆಣ

 

Share This Article
Leave a Comment

Leave a Reply

Your email address will not be published. Required fields are marked *